Revised Common Lectionary (Semicontinuous)
7 ಯೆಹೋವನು ಹೀಗೆಂದನು:
“ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ.
ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ.
ಸ್ತೋತ್ರಗೀತೆಗಳನ್ನು ಹಾಡಿರಿ.
‘ಯೆಹೋವನು ತನ್ನ ಜನರನ್ನು ರಕ್ಷಿಸಿದನು.
ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.
8 ನಾನು ಇಸ್ರೇಲರನ್ನು
ಉತ್ತರದ ದೇಶದಿಂದ ತರುವೆನು.
ನಾನು ಜಗತ್ತಿನ ದೂರದೂರದ ಸ್ಥಳಗಳಿಂದ
ಇಸ್ರೇಲರನ್ನು ಒಟ್ಟುಗೂಡಿಸುವೆನೆಂದು ತಿಳಿದುಕೊಳ್ಳಿರಿ.
ಅವರಲ್ಲಿ ಕೆಲವರು ಕುರುಡರಾಗಿರುವರು; ಕುಂಟರಾಗಿರುವರು,
ಕೆಲವು ಸ್ತ್ರೀಯರು ಗರ್ಭಿಣಿಯರಾಗಿದ್ದು ಹೆರಿಗೆಯ ದಿನಗಳು ತುಂಬಿದವರಾಗಿರುತ್ತಾರೆ.
ಬಹಳಷ್ಟು ಜನರು ಹಿಂತಿರುಗಿಬರುತ್ತಾರೆ.
9 ಆ ಜನರು ಹಿಂತಿರುಗಿ ಬರುವಾಗ ಅಳುತ್ತಿರುವರು.
ಆದರೆ ನಾನು ಅವರಿಗೆ ದಾರಿತೋರಿಸುವೆನು, ಸಮಾಧಾನಪಡಿಸುವೆನು.
ನಾನು ಅವರನ್ನು ನದಿ ದಾಟಿಸಿಕೊಂಡು ಬರುವೆನು.
ಅವರು ಎಡವದಂತೆ ಸಮವಾದ ಮಾರ್ಗದಲ್ಲಿ
ನಡೆಸಿಕೊಂಡು ಬರುವೆನು.
ನಾನು ಇಸ್ರೇಲಿನ ತಂದೆ;
ಎಫ್ರಾಯೀಮ್ ನನ್ನ ಚೊಚ್ಚಲ ಮಗ.
ಆದ್ದರಿಂದಲೇ ನಾನು ಅವರನ್ನು ನಡೆಸಿಕೊಂಡು ಬರುವೆನು.
10 “ಜನಾಂಗಗಳೇ, ಯೆಹೋವನ ಈ ಸಂದೇಶವನ್ನು ಕೇಳಿರಿ.
ಈ ಸಂದೇಶವನ್ನು ಸಮುದ್ರದಡದ ದೂರದೂರದ ಪ್ರದೇಶಗಳಲ್ಲಿ ತಿಳಿಸಿರಿ.
‘ಇಸ್ರೇಲರನ್ನು ಚದರಿಸಿದಾತನು
ಅವರನ್ನು ಮತ್ತೆ ಒಟ್ಟುಗೂಡಿಸುವನು.
ಆತನು ತನ್ನ ಹಿಂಡನ್ನು ಕುರುಬನಂತೆ
ನೋಡಿಕೊಳ್ಳುವನು’ ಎಂದು ಹೇಳಿರಿ.
11 ಯೆಹೋವನು ಯಾಕೋಬ್ಯರನ್ನು ಹಿಂದಕ್ಕೆ ಕರೆದುಕೊಂಡು ಬರುವನು.
ಯೆಹೋವನು ತನ್ನ ಜನರನ್ನು ಅವರಿಗಿಂತಲೂ ಬಲಿಷ್ಠರಾದ ಜನರಿಂದ ರಕ್ಷಿಸುವನು.
12 ಇಸ್ರೇಲಿನ ಜನರು ಚೀಯೋನ್ ಶಿಖರಕ್ಕೆ ಬರುವರು;
ಸಂತೋಷದಿಂದ ನಲಿದಾಡುವರು.
ದೇವರು ಅವರಿಗೆ ಅನುಗ್ರಹಿಸುವ ಎಲ್ಲಾ ಶ್ರೇಷ್ಠವಾದ ವಸ್ತುಗಳಿಂದ
ಸಂತೋಷಚಿತ್ತರಾದ ಅವರ ಮುಖಗಳು ಪ್ರಕಾಶಮಾನವಾಗುವವು.
ಯೆಹೋವನು ಅವರಿಗೆ ಧಾನ್ಯ, ಹೊಸ ದ್ರಾಕ್ಷಾರಸ,
ಎಣ್ಣೆ, ಕುರಿಮರಿಗಳು ಮತ್ತು ಹಸುಗಳನ್ನು ದಯಪಾಲಿಸುವನು.
ಅವರು ಸಾಕಷ್ಟು ನೀರಿರುವ ತೋಟದಂತೆ ಲವಲವಿಕೆಯಿಂದ ಇರುವರು.
ಇಸ್ರೇಲರು ಇನ್ನು ಯಾವ ತೊಂದರೆಗೂ ಒಳಗಾಗುವುದಿಲ್ಲ.
13 ಆಗ ಇಸ್ರೇಲಿನ ತರುಣಿಯರು
ಸಂತೋಷದಿಂದ ನರ್ತಿಸುವರು.
ತರುಣರು ಮತ್ತು ವೃದ್ಧರು
ಆ ನರ್ತನದಲ್ಲಿ ಭಾಗವಹಿಸುವರು.
ನಾನು ಅವರ ದುಃಖವನ್ನು ಸಂತೋಷವಾಗಿ ಪರಿವರ್ತಿಸುವೆನು.
ನಾನು ಇಸ್ರೇಲರನ್ನು ಸಂತೈಸುವೆನು.
ಅವರ ದುಃಖವನ್ನು ಹೋಗಲಾಡಿಸಿ ಅವರನ್ನು ಸಂತೋಷಪಡಿಸುವೆನು.
14 ಯಾಜಕರು ತಮಗೆ ಬೇಕಾಗುವದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೈವೇದ್ಯಗಳನ್ನು ಪಡೆಯುವರು.
ನಾನು ಅವರಿಗೆ ಕೊಡುವ ಉತ್ತಮ ವಸ್ತುಗಳನ್ನು ಮನದಣಿಯುವ ಹಾಗೆ ಅನುಭವಿಸಿ ನನ್ನ ಜನರು ತೃಪ್ತಿಪಡುವರು.”
ಇದು ಯೆಹೋವನ ನುಡಿ.
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.
19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು
3 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ. 4 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು. 5 ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು. 6 ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ.
7 ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು. 8 ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು. 9 ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು. 10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.
11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. 12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು. 13 ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು. 14 ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ.
ಜಗತ್ತಿಗೆ ಕ್ರಿಸ್ತನ ಆಗಮನ
1 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. 2 ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. 3 ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. 4 ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5 ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.
6 ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. 7 ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. 8 ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. 9 ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.
10 ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11 ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12 ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13 ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.
14 ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. 15 ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
16 ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17 ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International