Revised Common Lectionary (Semicontinuous)
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
ದೇವರ ಮನೆ—ಬೇತೇಲ್
10 ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11 ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12 ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13 ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14 ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.
15 “ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.
16 ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.
17 ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.
18 ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. 19 ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.
20 ನಂತರ ಯಾಕೋಬನು ಈ ಪ್ರಮಾಣವನ್ನು ಮಾಡಿದನು: “ದೇವರು ನನ್ನ ಸಂಗಡವಿದ್ದು ನಾನು ಹೋದಲ್ಲೆಲ್ಲ ನನ್ನನ್ನು ಕಾಪಾಡಿ ಊಟಕ್ಕೆ ಆಹಾರವನ್ನೂ, ಉಡಲು ಬಟ್ಟೆಗಳನ್ನೂ ಕೊಟ್ಟು, 21 ನಾನು ಸಮಾಧಾನದಿಂದ ನನ್ನ ತಂದೆಯ ಮನೆಗೆ ಹಿಂತಿರುಗಿ ಬರುವಂತೆ ಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. 22 ನಾನು ಕಲ್ಲನ್ನು ನೆಟ್ಟಿರುವ ಈ ಸ್ಥಳವು ದೇವರ ಪವಿತ್ರಸ್ಥಳವಾಗುವುದು. ಇದಲ್ಲದೆ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತನೆಯ ಒಂದು ಭಾಗವನ್ನು ನಾನು ಆತನಿಗೆ ಕೊಡುತ್ತೇನೆ.”
13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.
22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.
Kannada Holy Bible: Easy-to-Read Version. All rights reserved. © 1997 Bible League International