Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 7:10-16

ಇಮ್ಮಾನುವೇಲ್: ದೇವರು ನಮ್ಮೊಂದಿಗಿದ್ದಾನೆ

10 ಬಳಿಕ ಯೆಹೋವನು ಆಹಾಜನೊಡನೆ ಮಾತನ್ನು ಮುಂದುವರಿಸಿದನು. 11 ಯೆಹೋವನು ಅವನಿಗೆ, “ಇವೆಲ್ಲಾ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಒಂದು ಗುರುತನ್ನು ಕೇಳಿಕೊ. ನಿನಗೆ ಯಾವ ಗುರುತನ್ನು ಬೇಕಾದರೂ ಕೇಳಿಕೊ. ಆ ಗುರುತು ಆಳವಾದ ನರಕದಿಂದ ಬಂದ ಗುರುತಾದರೂ ಸರಿಯೇ ಅಥವಾ ಉನ್ನತವಾದ ಆಕಾಶದಿಂದ ಬಂದ ಗುರುತಾದರೂ ಸರಿಯೇ, ನಿನಗೆ ದಯಪಾಲಿಸುವೆನು” ಎಂದು ಹೇಳಿದನು.

12 ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು.

13 ಆಗ ಯೆಶಾಯನು ಹೇಳಿದ್ದೇನೆಂದರೆ, “ದಾವೀದನ ಮನೆತನದವರೇ, ಕಿವಿಗೊಟ್ಟು ಕೇಳಿರಿ. ನೀವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ಆದರೆ ಅದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ಈಗ ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. 14 ನನ್ನ ಒಡೆಯನಾದ ದೇವರು ನಿಮಗೊಂದು ಗುರುತನ್ನು ಕೊಡುವನು:

ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು.
    ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.
15 ಆತನು ಒಳ್ಳೆಯದನ್ನು ಆರಿಸಿಕೊಳ್ಳಲು ಮತ್ತು ಕೆಟ್ಟದ್ದನ್ನು ನಿರಾಕರಿಸಲು ಕಲಿತುಕೊಳ್ಳುವವರೆಗೆ
    ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು.
16 ಆ ಮಗುವು ಒಳ್ಳೆಯದರ ಬಗ್ಗೆ ಮತ್ತು ಕೆಟ್ಟದ್ದರ ಬಗ್ಗೆ ಕಲಿತುಕೊಳ್ಳುವಷ್ಟು ವಯಸ್ಸಾಗುವ ಮೊದಲೇ
    ಎಫ್ರಾಯೀಮ್ ದೇಶ ಮತ್ತು ಅರಾಮ್ಯರ ದೇಶ ನಿರ್ಜನವಾಗುವುದು.
    ನೀವೀಗ, ಆ ಇಬ್ಬರು ಅರಸರಿಗೆ ಭಯಪಡುತ್ತಿದ್ದೀರಿ.

ಕೀರ್ತನೆಗಳು 80:1-7

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಕೀರ್ತನೆಗಳು 80:17-19

17 ನೀನು ಆರಿಸಿಕೊಂಡಿರುವಾತನ[a] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[b] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ರೋಮ್ನಗರದವರಿಗೆ 1:1-7

ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ.

ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ[a] ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. ದೇವರು ತನ್ನ ಜನರಿಗೆ ಈ ಸುವಾರ್ತೆಯನ್ನು ಕೊಡುವುದಾಗಿ ಬಹುಕಾಲದ ಹಿಂದೆಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ವಾಗ್ದಾನ ಮಾಡಿದ್ದನು. 3-4 ದೇವರ ಮಗನೂ ನಮ್ಮ ಪ್ರಭುವೂ ಆಗಿರುವ ಯೇಸು ಕ್ರಿಸ್ತನ ವಿಷಯವೇ ಆ ಸುವಾರ್ತೆ. ಮನುಷ್ಯತ್ವದ ಮಟ್ಟಿಗೆ ಆತನು ದಾವೀದನ[b] ಕುಟುಂಬದಲ್ಲಿ ಹುಟ್ಟಿದನು. ಆದರೆ ಯೇಸು ಪರಿಶುದ್ಧ ಆತ್ಮನ ಮೂಲಕ ಮಹಾಶಕ್ತಿಯೊಡನೆ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದು ತಾನೇ ದೇವರ ಮಗನೆಂಬುದನ್ನು ತೋರಿಸಿಕೊಟ್ಟನು.

ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. ರೋಮಿನಲ್ಲಿರುವ ನೀವು ಸಹ ಯೇಸು ಕ್ರಿಸ್ತನವರಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೀರಿ.

ರೋಮಿನಲ್ಲಿರುವವರೂ ದೇವರ ಪವಿತ್ರ ಜನರಾಗಿರುವುದಕ್ಕಾಗಿ ದೇವರಿಂದಲೇ ಕರೆಯಲ್ಪಟ್ಟವರೂ ಆಗಿರುವ ನಿಮ್ಮೆಲ್ಲರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರಿಗೆ ಪ್ರಿಯರಾದ ಜನರಾಗಿದ್ದೀರಿ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಮತ್ತಾಯ 1:18-25

ಯೇಸು ಕ್ರಿಸ್ತನ ಜನನ

(ಲೂಕ 2:1-7)

18 ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು. 19 ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು.

20 ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ. 21 ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು.

22 ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು. 23 ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.”(A) (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.)

24 ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು. 25 ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International