Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
80 ಇಸ್ರೇಲನ್ನು ಕಾಯುವ ಕುರುಬನೇ,
ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
ಬಂದು ನಮ್ಮನ್ನು ರಕ್ಷಿಸು.
3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
ಶತ್ರುಗಳು ನಮ್ಮನ್ನು ನೋಡಿ ನಗುವರು.
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
17 ನೀನು ಆರಿಸಿಕೊಂಡಿರುವಾತನ[a] ಕಡೆಗೆ ಕೈಚಾಚಿ ಸಹಾಯ ಮಾಡು.
ನೀನು ಬೆಳೆಸಿದ ಜನರ[b] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
ನಮ್ಮನ್ನು ಬದುಕಿಸು.
ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
ದೇವಾಲಯ ಕಟ್ಟಲು ದಾವೀದನ ಅಪೇಕ್ಷೆ
7 ದಾವೀದನು ತನ್ನ ಅರಮನೆಯಲ್ಲಿ ಸುಖವಾಗಿ ವಾಸಿಸುವಂತೆಯೂ ಅವನ ಸುತ್ತಲಿನ ಶತ್ರುಗಳಿಂದ ಭಯವಿಲ್ಲದಂತೆಯೂ ಯೆಹೋವನು ಮಾಡಿದನು. 2 ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.
3 ನಾತಾನನು ರಾಜನಾದ ದಾವೀದನಿಗೆ, “ನೀನು ನಿಜವಾಗಿಯೂ ಏನನ್ನು ಮಾಡಬೇಕೆಂದಿರುವೆಯೋ ಅದನ್ನು ಮಾಡು; ಯೆಹೋವನು ನಿನ್ನೊಂದಿಗಿದ್ದಾನೆ” ಎಂದು ಹೇಳಿದನು.
4 ಆದರೆ ಅಂದು ರಾತ್ರಿ ನಾತಾನನಿಗೆ ಯೆಹೋವನು ಹೀಗೆ ಹೇಳಿದನು:
5 “ನೀನು ನನ್ನ ಸೇವಕನಾದ ದಾವೀದನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸು: ‘ನನ್ನ ವಾಸಕ್ಕಾಗಿ ಆಲಯವನ್ನು ಕಟ್ಟುವ ವ್ಯಕ್ತಿಯು ನೀನಲ್ಲ. 6 ಈಜಿಪ್ಟಿನಿಂದ ಇಸ್ರೇಲರನ್ನು ಹೊರತಂದ ಸಮಯದಲ್ಲಿ ನಾನು ಆಲಯದಲ್ಲಿ ವಾಸಮಾಡಲಿಲ್ಲ. ನಾನು ಗುಡಾರದಲ್ಲಿ ವಾಸಮಾಡುತ್ತಾ ಸಂಚರಿಸಿದೆನು. ಗುಡಾರವೇ ನನ್ನ ಆಲಯವಾಗಿತ್ತು. 7 ನನಗಾಗಿ ದೇವದಾರು ಮರದಿಂದ ಆಲಯ ಕಟ್ಟುವಂತೆ ಇಸ್ರೇಲರ ಯಾವ ಕುಲದವರನ್ನಾಗಲಿ ನಾನು ಕೇಳಿಕೊಳ್ಳಲಿಲ್ಲ ಎಂಬುದಾಗಿ ಯೆಹೋವನು ತಿಳಿಸುತ್ತಾನೆ’ ಎಂದು ಹೇಳು.
8 “ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು. 9 ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು. 10-11 ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.
12 “‘ನಿನ್ನ ದಿನಗಳು ಮುಗಿದುಹೋಗುತ್ತವೆ; ನೀನು ನಿನ್ನ ಪೂರ್ವಿಕರ ಜೊತೆಯಲ್ಲಿ ಸೇರುತ್ತಿ. ಆ ಸಮಯದಲ್ಲಿ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಿ ಅವನ ರಾಜ್ಯವನ್ನು ಭದ್ರಗೊಳಿಸುತ್ತೇನೆ. 13 ಅವನು ನನ್ನ ಹೆಸರಿಗಾಗಿ ಒಂದು ಆಲಯವನ್ನು ನಿರ್ಮಿಸುತ್ತಾನೆ. ಅವನ ರಾಜ್ಯವು ಸದಾಕಾಲಕ್ಕೂ ಇರುವಂತೆ ನಾನು ಮಾಡುತ್ತೇನೆ. 14 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ಅವನು ಪಾಪಗಳನ್ನು ಮಾಡಿದರೆ ಇತರ ಜನರ ಮೂಲಕ ನಾನು ಅವನನ್ನು ದಂಡಿಸುವೆನು. ಅವರೇ ನನ್ನ ಚಾವಟಿಗಳಾಗಿರುತ್ತಾರೆ. 15 ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ. 16 ನಿನ್ನ ಕುಟುಂಬ ಮತ್ತು ರಾಜ್ಯ ಎಂದೆಂದಿಗೂ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು.’”
17 ಆ ದರ್ಶನದಲ್ಲಿ ದೇವರು ತನಗೆ ಹೇಳಿದ ಪ್ರತಿಯೊಂದನ್ನು ನಾತಾನನು ದಾವೀದನಿಗೆ ತಿಳಿಸಿದನು.
23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.
26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.
Kannada Holy Bible: Easy-to-Read Version. All rights reserved. © 1997 Bible League International