Revised Common Lectionary (Semicontinuous)
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ
8 ಸರ್ವಶಕ್ತನಾದ ಯೆಹೋವನ ಸಂದೇಶ: 2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.” 3 ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”
4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ. 5 ನಗರದ ತುಂಬಾ ಬಾಲಬಾಲೆಯರು ಆಡುವರು.” 6 ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ. 8 ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”
9 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ! 10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು. 11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು. 13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”
14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು. 15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ. 16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ. 17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.
ಗುಣಮುಖರಾದ ವಿವಿಧ ಜನರು
(ಮಾರ್ಕ 1:29-34; ಲೂಕ 4:38-41)
14 ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.
16 ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.
17 “ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”(A)
ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.
ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ
(ಮಾರ್ಕ 5:1-20; ಲೂಕ 8:26-39)
28 ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29 ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
30 ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31 ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.
32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33 ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34 ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International