Revised Common Lectionary (Semicontinuous)
ರಚನೆಗಾರ: ದಾವೀದ.
21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
2 ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.
3 ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
4 ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
5 ನೀನು ರಾಜನಿಗೆ ಜಯವನ್ನು ದೊರಕಿಸಿ
ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
6 ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
7 ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
8 ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
9 ಯೆಹೋವನೇ, ನೀನು ರಾಜನೊಂದಿರುವಾಗ
ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
ಅವರು ಬೆನ್ನುಕೊಟ್ಟು ಓಡಿಹೋಗುವರು.
13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.
ದೇವರು ಅಬ್ರಾಮನೊಡನೆ ಮಾಡಿಕೊಂಡ ಒಡಂಬಡಿಕೆ
15 ಈ ಸಂಗತಿಗಳಾದ ಮೇಲೆ, ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ಸಂದೇಶ ಬಂದಿತು. ದೇವರು ಅವನಿಗೆ, “ಅಬ್ರಾಮನೇ ಭಯಪಡಬೇಡ; ನಾನೇ ನಿನಗೆ ಗುರಾಣಿಯಾಗಿದ್ದೇನೆ. ನಾನು ನಿನಗೆ ದೊಡ್ಡ ಪ್ರತಿಫಲವನ್ನು ಕೊಡುತ್ತೇನೆ” ಎಂದು ಹೇಳಿದನು.
2 ಅದಕ್ಕೆ ಅಬ್ರಾಮನು, “ದೇವರಾದ ಯೆಹೋವನೇ, ನೀನು ನನಗೆ ಏನೇ ಕೊಟ್ಟರೂ ನನಗೆ ಸಂತೋಷವಾಗುವುದಿಲ್ಲ. ಯಾಕೆಂದರೆ, ನನಗೆ ಮಗನೇ ಇಲ್ಲ. ಆದ್ದರಿಂದ ನಾನು ಸತ್ತಮೇಲೆ ನನ್ನ ಆಸ್ತಿಯೆಲ್ಲ ನನ್ನ ಸೇವಕನಾದ ದಮಸ್ಕದ ಎಲೀಯೆಜರನ ಪಾಲಾಗುವುದು” ಎಂದು ಹೇಳಿದನು. 3 ಮತ್ತೆ ಅಬ್ರಾಮನು, “ನೀನು ನನಗೆ ಮಗನನ್ನೇ ಕೊಟ್ಟಿಲ್ಲ. ಆದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದ ಸೇವಕನೊಬ್ಬನು ನನಗಿರುವುದನ್ನೆಲ್ಲ ಪಡೆದುಕೊಳ್ಳುವನು” ಎಂದು ಹೇಳಿದನು.
4 ಆಗ ಯೆಹೋವನು ಅಬ್ರಾಮನಿಗೆ, “ನಿನ್ನ ಆಸ್ತಿಯನ್ನೆಲ್ಲ ಪಡೆದುಕೊಳ್ಳುವವನು ನಿನ್ನ ಸೇವಕನಲ್ಲ. ನೀನೇ ಮಗನನ್ನು ಪಡೆಯುವೆ; ನಿನ್ನ ಮಗನೇ ನಿನ್ನ ಆಸ್ತಿಯನ್ನೆಲ್ಲಾ ಪಡೆಯುವನು” ಎಂದು ಹೇಳಿದನು.
5 ನಂತರ ದೇವರು ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು ಅವನಿಗೆ, “ಆಕಾಶದ ಕಡೆಗೆ ಕಣ್ಣೆತ್ತಿ ನಕ್ಷತ್ರಗಳನ್ನು ನೋಡು. ನೀನು ಲೆಕ್ಕ ಮಾಡಲಾರದಷ್ಟು ನಕ್ಷತ್ರಗಳಿವೆ. ಮುಂದಿನ ಕಾಲದಲ್ಲಿ ನಿನ್ನ ಕುಟುಂಬವು ಅದೇ ರೀತಿಯಲ್ಲಿರುವುದು” ಎಂದು ಹೇಳಿದನು.
6 ಅಬ್ರಾಮನು ಯೆಹೋವನನ್ನು ನಂಬಿದನು. ಆ ನಂಬಿಕೆಯ ನಿಮಿತ್ತವೇ ಯೆಹೋವನು ಅಬ್ರಾಮನನ್ನು ನೀತಿವಂತನೆಂದು ಪರಿಗಣಿಸಿದನು. 7 ಆತನು ಅಬ್ರಾಮನಿಗೆ, “ಯೆಹೋವನಾದ ನಾನು ನಿನ್ನನ್ನು ಕಲ್ದೀಯರ ಊರ್ ಪಟ್ಟಣದಿಂದ ಬರಮಾಡಿದೆನು. ನಿನಗೆ ಈ ದೇಶವನ್ನು ಕೊಡಬೇಕೆಂತಲೂ ನೀನು ಈ ದೇಶವನ್ನು ಹೊಂದಿಕೊಳ್ಳಬೇಕೆಂತಲೂ ನಾನು ನಿನ್ನನ್ನು ಬರಮಾಡಿದೆನು” ಎಂದು ಹೇಳಿದನು.
8 ಅದಕ್ಕೆ ಅಬ್ರಾಮನು, “ಯೆಹೋವನೇ, ನನ್ನ ಒಡೆಯನೇ, ನನಗೆ ಈ ದೇಶವು ದೊರೆಯುತ್ತದೆಯೆಂದು ಖಚಿತಪಡಿಸಿಕೊಳ್ಳುವುದು ಹೇಗೆ?” ಎಂದು ಕೇಳಿದನು.
9 ದೇವರು ಅಬ್ರಾಮನಿಗೆ, “ನಾವು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ. ಮೂರು ವರ್ಷದ ಒಂದು ಹಸುವನ್ನೂ ಮೂರು ವರ್ಷದ ಒಂದು ಆಡನ್ನೂ ಮತ್ತು ಮೂರು ವರ್ಷದ ಒಂದು ಟಗರನ್ನೂ ತೆಗೆದುಕೊಂಡು ಬಾ. ಇದಲ್ಲದೆ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳವನ್ನೂ ತೆಗೆದುಕೊಂಡು ಬಾ” ಎಂದು ಹೇಳಿದನು.
10 ಅಬ್ರಾಮನು ದೇವರಿಗೋಸ್ಕರ ಅವುಗಳನ್ನೆಲ್ಲ ತೆಗೆದುಕೊಂಡು ಬಂದನು. ಅಬ್ರಾಮನು ಅವುಗಳನ್ನು ಕತ್ತರಿಸಿ ಎರಡೆರಡು ಹೋಳು ಮಾಡಿದನು. ಆಮೇಲೆ ಅಬ್ರಾಮನು ತುಂಡಿಗೆ ತುಂಡನ್ನು ಎದುರಾಗಿಟ್ಟನು. ಅಬ್ರಾಮನು ಪಕ್ಷಿಗಳನ್ನು ಮಾತ್ರ ಎರಡೆರಡು ಹೋಳು ಮಾಡಲಿಲ್ಲ. 11 ಸ್ವಲ್ಪ ಸಮಯದ ನಂತರ, ದೊಡ್ಡ ಪಕ್ಷಿಗಳು ಆ ಪ್ರಾಣಿಗಳ ಮಾಂಸವನ್ನು ತಿನ್ನಲು ಹಾರಿ ಬಂದವು. ಆದರೆ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12 ಸಾಯಂಕಾಲವಾಯಿತು, ಸೂರ್ಯ ಮುಳುಗತೊಡಗಿದಾಗ ಅಬ್ರಾಮನಿಗೆ ಗಾಢ ನಿದ್ರೆ ಬಂದಿತು. ಅವನು ನಿದ್ರೆ ಮಾಡುತ್ತಿರುವಾಗ ಕಾರ್ಗತ್ತಲಾಯಿತು. 13 ಆಗ ಯೆಹೋವನು ಅಬ್ರಾಮನಿಗೆ, “ನಿನಗೆ ಈ ವಿಷಯಗಳು ತಿಳಿದಿರಬೇಕು. ನಿನ್ನ ಸಂತತಿಯವರು ಪರದೇಶಿಯರಾಗಿ ತಮ್ಮದಲ್ಲದ ದೇಶದಲ್ಲಿ ವಾಸಮಾಡುವರು. ಅಲ್ಲಿನ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು. ಅಲ್ಲಿ ಅವರು ನಾನೂರು ವರ್ಷಗಳವರೆಗೆ ಬಾಧೆಪಡುವರು. 14 ಆದರೆ ನಾನೂರು ವರ್ಷಗಳಾದ ಮೇಲೆ ಅವರ ಮೇಲೆ ದೊರೆತನ ಮಾಡಿದ ಆ ದೇಶವನ್ನು ನಾನು ದಂಡಿಸುವೆನು; ನಿನ್ನ ಜನರು ಆ ದೇಶವನ್ನು ಬಿಟ್ಟು ಹೊರಡುವರು. ನಿನ್ನ ಜನರು ಅದನ್ನು ಬಿಡುವಾಗ ತಮ್ಮೊಡನೆ ಸಂಪತ್ತುಗಳನ್ನು ತೆಗೆದುಕೊಂಡು ಹೋಗುವರು.
15 “ನೀನು ತುಂಬಾ ಮುದುಕನಾಗುವ ತನಕ ಜೀವಿಸಿ ಸಮಾಧಾನದಿಂದ ಸಾಯುವೆ; ನಿನ್ನನ್ನು ನಿನ್ನ ಕುಟುಂಬದವರೊಡನೆ ಸಮಾಧಿ ಮಾಡುವರು. 16 ನಾಲ್ಕು ತಲೆಮಾರುಗಳ ನಂತರ ನಿನ್ನ ಜನರು ಈ ನಾಡಿಗೆ ಹಿಂತಿರುಗುವರು. ಆ ಕಾಲದಲ್ಲಿ ನಿನ್ನ ಜನರು ಅಮೋರಿಯರನ್ನು ಸೋಲಿಸುವರು. ಇಲ್ಲಿ ವಾಸಿಸುತ್ತಿರುವ ಅಮೋರಿಯರನ್ನು ನಿನ್ನ ಜನರ ಮೂಲಕ ನಾನೇ ಶಿಕ್ಷಿಸುವೆನು. ಇದು ಮುಂದೆ ನಡೆಯುವ ಸಂಗತಿ. ಯಾಕೆಂದರೆ ಆ ಸಮಯದಲ್ಲಿ ಅಮೋರಿಯರು ಅಂಥ ಶಿಕ್ಷೆ ಅನುಭವಿಸುವಷ್ಟು ಕೆಟ್ಟವರಾಗಿರಲಿಲ್ಲ” ಎಂದು ಹೇಳಿದನು.
17 ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.
18 ಆದ್ದರಿಂದ ಅಂದು ಯೆಹೋವನು ಒಂದು ವಾಗ್ದಾನವನ್ನು ಮಾಡಿ ಅಬ್ರಾಮನೊಡನೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಯೆಹೋವನು ಅವನಿಗೆ, “ನಾನು ನಿನ್ನ ಸಂತತಿಯವರಿಗೆ ಈ ನಾಡನ್ನು ಕೊಡುವೆನು. ನಾನು ಅವರಿಗೆ ಈಜಿಪ್ಟ್ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ನಾಡನ್ನು ಕೊಡುವೆನು.
ನಿಮ್ಮ ನಿಜಸ್ಥಿತಿಗೆ ನಿಮ್ಮ ಕಾರ್ಯಗಳೇ ಸಾಕ್ಷಿ
(ಲೂಕ 6:43-45)
33 “ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು. 34 ನೀವು ಹಾವುಗಳು! ನೀವು ದುಷ್ಟರು! ಒಳ್ಳೆಯದನ್ನು ನೀವು ಹೇಗೆ ಹೇಳುವಿರಿ? ನಿಮ್ಮ ಹೃದಯದಲ್ಲಿ ತುಂಬಿರುವುದನ್ನೇ ನಿಮ್ಮ ಬಾಯಿ ಮಾತಾಡುತ್ತದೆ. 35 ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ. 36 ಜನರು ನಿರ್ಲಕ್ಷ್ಯಭಾವದಿಂದ ಆಡಿದ ಪ್ರತಿಯೊಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು. 37 ನಿಮ್ಮ ಮಾತುಗಳಿಂದಲೇ ನಿಮಗೆ ನೀತಿವಂತರೆಂದಾಗಲಿ ಅಪರಾಧಿಗಳೆಂದಾಗಲಿ ತೀರ್ಪು ನೀಡಲಾಗುವುದು” ಎಂದನು.
Kannada Holy Bible: Easy-to-Read Version. All rights reserved. © 1997 Bible League International