Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 72:1-7

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.

ಕೀರ್ತನೆಗಳು 72:18-19

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

ಯೆಶಾಯ 30:19-26

19 ಚೀಯೋನ್ ಪರ್ವತದಲ್ಲಿರುವ ಜೆರುಸಲೇಮಿನಲ್ಲಿ ಯೆಹೋವನ ಜನರು ವಾಸಿಸುವರು. ನೀವು ಇನ್ನು ಮೇಲೆ ಅಳುವದಿಲ್ಲ. ಯೆಹೋವನು ನಿಮ್ಮ ಅಳುವಿಕೆಯನ್ನು ನೋಡಿ ನಿಮ್ಮನ್ನು ಆದರಿಸುವನು. ಆತನು ನಿಮ್ಮ ಮೊರೆಯನ್ನು ಕೇಳಿ ನಿಮಗೆ ಸಹಾಯಿಸುವನು.

20 ಹಿಂದಿನ ದಿವಸಗಳಲ್ಲಿ ನನ್ನ ಒಡೆಯನು ನಿಮಗೆ ದುಃಖವನ್ನೂ ಬೇನೆಯನ್ನೂ ಕೊಟ್ಟನು. ಅದು ನಿಮಗೆ ದಿನನಿತ್ಯ ತಿನ್ನುವಂಥ ರೊಟ್ಟಿಯಂತೆಯೂ ನೀರಿನಂತೆಯೂ ಇತ್ತು. ಆದರೆ ನಿಮ್ಮ ಬೋಧಕನಾದ ದೇವರು ನಿಮ್ಮಿಂದ ಎಂದಿಗೂ ಅಡಗಿಕೊಂಡಿರಲಾರನು. ನಿಮ್ಮ ಬೋಧಕನನ್ನು ನೀವು ಕಣ್ಣಾರೆ ಕಾಣುವಿರಿ. 21 ಆದರೆ ನೀವು ತಪ್ಪು ಕಾರ್ಯಮಾಡಿದರೆ, ದುಷ್ಟತ್ವದಲ್ಲಿ ಜೀವಿಸಿದರೆ ನಿಮ್ಮ ಹಿಂದಿನಿಂದ ಒಂದು ಸ್ವರ, “ಇದು ಸರಿಯಾದ ಮಾರ್ಗ. ಈ ಮಾರ್ಗದಲ್ಲಿ ಮುಂದುವರಿಯಿರಿ” ಎಂದು ಹೇಳುವುದು ಕೇಳಿಸುವದು.

22 ನಿಮ್ಮಲ್ಲಿ ಬೆಳ್ಳಿಬಂಗಾರಗಳ ವಿಗ್ರಹಗಳಿವೆ. ಆ ಸುಳ್ಳುದೇವರುಗಳು ನಿಮ್ಮನ್ನು ಹೊಲೆಯನ್ನಾಗಿ ಮಾಡಿವೆ. ನೀವು ಅವುಗಳ ಸೇವೆಯನ್ನು ನಿಲ್ಲಿಸುವಿರಿ. ಅವು ಹೊಲಸು ವಸ್ತುಗಳೋ ಎಂಬಂತೆ ಅವುಗಳನ್ನೆತ್ತಿ ಬಿಸಾಡಿಬಿಡುವಿರಿ.

23 ಆ ಸಮಯದಲ್ಲಿ ಯೆಹೋವನು ನಿಮಗಾಗಿ ಮಳೆ ಸುರಿಸುವನು. ನೀವು ಭೂಮಿಯಲ್ಲಿ ಬೀಜಬಿತ್ತಿದ್ದಾಗ ಫಸಲನ್ನು ಹೊಂದುವಿರಿ. ನಿಮಗೆ ಬಹುದೊಡ್ಡ ಸುಗ್ಗಿ ಆಗುವದು. ಹೊಲದಲ್ಲಿ ನಿಮ್ಮ ಪಶುಗಳಿಗೆ ಬೇಕಾದಷ್ಟು ಹುಲ್ಲು ಇರುವದು. ಮೇಯಲು ನಿಮ್ಮ ಕುರಿಗಳಿಗೆ ಬೇಕಾದಷ್ಟು ಬಯಲಿವೆ. 24 ನಿಮ್ಮ ದನಕರುಗಳಿಗೂ ಕತ್ತೆಗಳಿಗೂ ಬೇಕಾದಷ್ಟು ಮೇವಿದೆ. ಆಹಾರವು ಯಥೇಚ್ಛವಾಗಿರುವದು. ನಿಮ್ಮ ದನಕರುಗಳು ಮೊರದಿಂದಲೂ ಕವೇಕೋಲಿನಿಂದಲೂ ತೂರಿದ ಉಪ್ಪುಪ್ಪಾದ ಮೇವನ್ನು ತಿನ್ನುವವು. 25 ಪ್ರತಿಯೊಂದು ಬೆಟ್ಟದಲ್ಲಿಯೂ ಪರ್ವತದಲ್ಲಿಯೂ ಹರಿಯುವ ನೀರಿನ ತೊರೆಗಳಿರುವವು. ಇವೆಲ್ಲಾ ಅನೇಕ ಜನರು ಕೊಲ್ಲಲ್ಪಟ್ಟ ನಂತರವೂ ಬುರುಜುಗಳು ಕೆಡವಲ್ಪಟ್ಟ ನಂತರವೂ ಸಂಭವಿಸುವವು.

26 ಆ ಸಮಯದಲ್ಲಿ ಚಂದ್ರನ ಪ್ರಕಾಶವು ಸೂರ್ಯನಂತಿರುವದು. ಸೂರ್ಯನ ಪ್ರಕಾಶವು ಈಗ ಇರುವದಕ್ಕಿಂತ ಏಳರಷ್ಟು ಹೆಚ್ಚಾಗಿರುವದು. ಸೂರ್ಯನ ಒಂದು ದಿವಸದ ಬೆಳಕು ಒಂದು ವಾರದ ಬೆಳಕಿನಷ್ಟಿರುವದು. ಯೆಹೋವನು ತನ್ನ ಮುರಿದುಹೋದ ಜನರಿಗೆ ಆದ ಗಾಯದ ಪೆಟ್ಟುಗಳನ್ನು ಗುಣಪಡಿಸುವಾಗ ಇವೆಲ್ಲಾ ಸಂಭವಿಸುತ್ತವೆ.

ಅಪೊಸ್ತಲರ ಕಾರ್ಯಗಳು 13:16-25

16 ಪೌಲನು ಎದ್ದುನಿಂತುಕೊಂಡು ತನ್ನ ಮಾತುಗಳನ್ನು ಕೇಳಬೇಕೆಂದು ಜನರಿಗೆ ಕೈಸನ್ನೆ ಮಾಡಿ ಹೀಗೆಂದನು: “ನನ್ನ ಯೆಹೂದ್ಯ ಸಹೋದರರೇ, ನಿಜ ದೇವರನ್ನು ಆರಾಧಿಸುವ ಇತರ ಜನರೇ, ದಯವಿಟ್ಟು ನನಗೆ ಕಿವಿಗೊಡಿರಿ! 17 ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. 18 ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಅವರನ್ನು ಸಹಿಸಿಕೊಂಡನು. 19 ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ತನ್ನ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟನು. 20 ಇವೆಲ್ಲಾ ಸುಮಾರು ನಾನೂರ ಐವತ್ತು ವರ್ಷಗಳ ಅವಧಿಯಲ್ಲಿ ನಡೆದವು.

“ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ದೇವರು ನಮ್ಮ ಜನರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು. 21 ಬಳಿಕ ಜನರು ತಮಗೆ ರಾಜನು ಬೇಕೆಂದು ಕೇಳಿಕೊಂಡರು. ದೇವರು ಅವರಿಗೆ ಕೀಷನ ಮಗನಾದ ಸೌಲನನ್ನು ಕೊಟ್ಟನು. ಸೌಲನು ಬೆನ್ಯಾಮಿನ್ ಕುಲದವನು. ಅವನು ನಲವತ್ತು ವರ್ಷಗಳ ಕಾಲ ರಾಜನಾಗಿದ್ದನು. 22 ದೇವರು ಸೌಲನನ್ನು ತೆಗೆದುಹಾಕಿದ ಮೇಲೆ ದಾವೀದನನ್ನು ಅವರ ರಾಜನನ್ನಾಗಿ ಮಾಡಿದನು. ‘ಇಷಯನ ಮಗನಾದ ದಾವೀದನು ನನಗೆ ಮೆಚ್ಚಿಗೆಯಾದವನು. ಅವನು ನನ್ನ ಅಪೇಕ್ಷೆಗೆ ತಕ್ಕಂತೆ ಕಾರ್ಯಗಳನ್ನು ಮಾಡುತ್ತಾನೆ’ ಎಂದು ದೇವರು ದಾವೀದನ ಬಗ್ಗೆ ಹೇಳಿದ್ದಾನೆ.

23 “ದೇವರು ತನ್ನ ವಾಗ್ದಾನಕ್ಕನುಸಾರವಾಗಿ ದಾವೀದನ ಸಂತಾನದವರಲ್ಲಿ ಒಬ್ಬನನ್ನು ಇಸ್ರೇಲರ ರಕ್ಷಕನನ್ನಾಗಿ ಕಳುಹಿಸಿ ಕೊಟ್ಟಿದ್ದಾನೆ. ಆತನೇ ಯೇಸು. 24 ಯೇಸು ಬರುವುದಕ್ಕಿಂತ ಮೊದಲು (ಸ್ನಾನಿಕ) ಯೋಹಾನನು ಯೆಹೂದ್ಯ ಜನರಿಗೆಲ್ಲಾ ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಬೋಧಿಸಿದನು. 25 ‘ನಾನು ಯಾರೆಂದು ನೀವು ಯೋಚಿಸುತ್ತೀರಿ? ನಾನು ಕ್ರಿಸ್ತನಲ್ಲ. ಆತನು ನನ್ನ ತರುವಾಯ ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ’ ಎಂದು ಯೋಹಾನನು ತನ್ನ ಕಾರ್ಯವನ್ನು ಮಾಡಿ ಪೂರೈಸುತ್ತಿದ್ದಾಗ ಹೇಳಿಕೊಂಡಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International