Revised Common Lectionary (Semicontinuous)
ಯೆಹೂದ ಮತ್ತು ಜೆರುಸಲೇಮಿಗೆ ದೈವಸಂದೇಶ
2 ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.
2 ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು
ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
3 ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು.
ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ.
ಯಾಕೋಬನ ದೇವರ ಆಲಯಕ್ಕೆ ಹೋಗೋಣ.
ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು.
ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು.
ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ
ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
4 ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಾಧೀಶನಾಗಿರುವನು.
ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು.
ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು;
ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು;
ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು.
ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು.
ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.
5 ಯಾಕೋಬನ ಮನೆತನದವರೇ, ನೀವು ಯೆಹೋವನ ಬೆಳಕನ್ನು ಹಿಂಬಾಲಿಸುವವರಾಗಬೇಕು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
122 “ಯೆಹೋವನ ಆಲಯಕ್ಕೆ ಹೋಗೋಣ”
ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
2 ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
3 ಇದು ಹೊಸ ಜೆರುಸಲೇಮ್!
ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
4 ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
5 ದಾವೀದನ ಕುಟುಂಬದ ರಾಜರುಗಳು ಜನರಿಗೆ
ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.
6 ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
“ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
7 ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”
8 ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
9 ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.
11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.
ಆ ಸಮಯ ದೇವರೊಬ್ಬನಿಗೆ ಗೊತ್ತಿದೆ
(ಮಾರ್ಕ 13:32,35; ಲೂಕ 17:26-30,34-36)
36 “ಆ ದಿನವು ಇಲ್ಲವೆ ಆ ಸಮಯವು ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯದು. ಮಗನಿಗೂ ಮತ್ತು ಪರಲೋಕದಲ್ಲಿರುವ ದೇವದೂತರಿಗೂ ಆ ದಿನವು ಅಥವಾ ಆ ಸಮಯವು ಯಾವಾಗ ಬರುತ್ತದೆ ಎಂಬುದು ತಿಳಿಯದು. ತಂದೆಗೆ ಮಾತ್ರ ಗೊತ್ತಿದೆ.
37 “ನೋಹನ ಕಾಲದಲ್ಲಿ ಸಂಭವಿಸಿದಂತೆಯೇ ಮನುಷ್ಯಕುಮಾರನು ಬರುವಾಗಲೂ ಸಂಭವಿಸುತ್ತದೆ. 38 ಜಲಪ್ರಳಯಕ್ಕಿಂತ ಮುಂಚೆ ಜನರು ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಮದುವೆಯಾಗುತ್ತಿದ್ದರು ಮತ್ತು ತಮ್ಮ ಮಕ್ಕಳಿಗೂ ಮದುವೆ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯೊಳಗೆ ಹೋಗುವ ತನಕ ಜನರು ಅವುಗಳನ್ನು ಮಾಡುತ್ತಲೇ ಇದ್ದರು. 39 ಏನು ಸಂಭವಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆಗ ಜಲಪ್ರಳಯವು ಬಂದು ಆ ಜನರನ್ನೆಲ್ಲಾ ನಾಶಮಾಡಿತು.
“ಮನುಷ್ಯಕುಮಾರನು ಬರುವಾಗಲೂ ಅದೇ ರೀತಿಯಾಗುವುದು. 40 ಹೊಲದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 41 ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರೆ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬಳನ್ನು ಬಿಡಲಾಗುವುದು.
42 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ನಿಮ್ಮ ಪ್ರಭು ಬರುವ ದಿನ ನಿಮಗೆ ತಿಳಿಯದು. 43 ಇದನ್ನು ಜ್ಞಾಪಿಸಿಕೊಳ್ಳಿ. ಕಳ್ಳನು ಯಾವಾಗ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ಕಳ್ಳನನ್ನು ಮನೆಯೊಳಗೆ ಬರಗೊಡಿಸುತ್ತಿರಲಿಲ್ಲ. 44 ಆದ್ದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರನು ಬರುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International