Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
122 “ಯೆಹೋವನ ಆಲಯಕ್ಕೆ ಹೋಗೋಣ”
ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
2 ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
3 ಇದು ಹೊಸ ಜೆರುಸಲೇಮ್!
ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
4 ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
5 ದಾವೀದನ ಕುಟುಂಬದ ರಾಜರುಗಳು ಜನರಿಗೆ
ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.
6 ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
“ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
7 ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”
8 ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
9 ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.
ಜನರ ದುಷ್ಟತನ
6 ಭೂಮಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಇತ್ತು. ಅವರಿಗೆ ಸುಂದರವಾದ ಹೆಣ್ಣುಮಕ್ಕಳು ಹುಟ್ಟಿದರು. 2-4 ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು.
ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು.[a]
ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.
5 ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6 ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 ಆದ್ದರಿಂದ ಯೆಹೋವನು, “ನಾನು ಸೃಷ್ಟಿಸಿದ ಜನರನ್ನೆಲ್ಲ ಭೂಮುಖದಿಂದ ನಾಶಮಾಡುವೆನು. ಪ್ರತಿಯೊಬ್ಬ ಮನುಷ್ಯನನ್ನೂ ಪ್ರತಿಯೊಂದು ಪ್ರಾಣಿಯನ್ನೂ ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜಂತುವನ್ನೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೂ ನಾಶಮಾಡುವೆನು. ಇವುಗಳನ್ನೆಲ್ಲಾ ಸೃಷ್ಟಿಸಿದ್ದರಿಂದ ನನಗೆ ದುಃಖವಾಯಿತು” ಅಂದುಕೊಂಡನು.
8 ಆದರೆ ಯೆಹೋವನಿಗೆ ಮೆಚ್ಚಿಕೆಯಾಗುವಂತೆ ನಡೆದುಕೊಂಡ ಒಬ್ಬ ಮನುಷ್ಯನಿದ್ದನು. ಅವನೇ ನೋಹ.
ನೋಹ ಮತ್ತು ಮಹಾ ಜಲಪ್ರಳಯ
9 ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10 ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
Kannada Holy Bible: Easy-to-Read Version. All rights reserved. © 1997 Bible League International