Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 122

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

122 “ಯೆಹೋವನ ಆಲಯಕ್ಕೆ ಹೋಗೋಣ”
    ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
ಇದು ಹೊಸ ಜೆರುಸಲೇಮ್!
    ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
    ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
ದಾವೀದನ ಕುಟುಂಬದ ರಾಜರುಗಳು ಜನರಿಗೆ
    ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.

ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
    “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
    ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
    ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”

ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
    ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
    ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.

ದಾನಿಯೇಲ 9:15-19

15 “ನಮ್ಮ ದೇವರಾದ ಯೆಹೋವನೇ, ನೀನು ನಿನ್ನ ಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ತೆಗೆದುಕೊಂಡು ಬಂದೆ. ನಾವು ನಿನ್ನ ಜನರಾಗಿದ್ದೇವೆ. ನೀನು ಕರುಣೆ ತೋರುವುದರಲ್ಲಿ ಇಂದಿಗೂ ಸುಪ್ರಸಿದ್ಧನಾಗಿರುವೆ. ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ಬಹಳ ಹೀನಕೃತ್ಯಗಳನ್ನು ಮಾಡಿದ್ದೇವೆ. 16 ಯೆಹೋವನೇ, ನಾವು ಮತ್ತು ನಮ್ಮ ಪೂರ್ವಿಕರು ನಿನಗೆ ಪಾಪಮಾಡಿದ್ದರಿಂದ ಇದೆಲ್ಲಾ ಆಗುತ್ತಿದೆ. ಜೆರುಸಲೇಮಿನ ಮೇಲೆ ಕೋಪ ಮಾಡುವದನ್ನು ದಯವಿಟ್ಟು ನಿಲ್ಲಿಸು. ಜೆರುಸಲೇಮ್ ನಗರವು ನಿನ್ನ ಪವಿತ್ರವಾದ ಬೆಟ್ಟದ ಮೇಲೆ ಇದೆ. ನೀನು ಸರಿಯಾದದ್ದನ್ನು ಮಾಡುವೆ. ಆದ್ದರಿಂದ ಜೆರುಸಲೇಮಿನ ಮೇಲೆ ಕೋಪಗೊಳ್ಳುವದನ್ನು ದಯವಿಟ್ಟು ನಿಲ್ಲಿಸಿಬಿಡು. ನಮ್ಮ ಸುತ್ತಮುತ್ತಲಿನ ಜನರೆಲ್ಲ ನಮ್ಮನ್ನು ನಿಂದಿಸುವರು ಮತ್ತು ನಮ್ಮ ಜನರನ್ನು ಗೇಲಿ ಮಾಡುವರು.

17 “ಯೆಹೋವನೇ, ನಿನ್ನ ಸೇವಕನಾದ ನನ್ನ ಪ್ರಾರ್ಥನೆಯನ್ನು ಕೇಳು. ಸಹಾಯಕೋರಿ ಮಾಡುವ ನನ್ನ ಪ್ರಾರ್ಥನೆಯನ್ನು ಲಾಲಿಸು. ನಿನ್ನ ಪವಿತ್ರ ಸ್ಥಳಕ್ಕಾಗಿ ಒಳ್ಳೆಯದನ್ನು ಮಾಡು. ಆ ಕಟ್ಟಡವನ್ನು ನಾಶಮಾಡಲಾಗಿದೆ. ಯೆಹೋವನೇ, ಈ ಒಳ್ಳೆಯ ಕಾರ್ಯಗಳನ್ನು ನಿನ್ನ ಹಿತಕ್ಕಾಗಿ ಮಾಡು. 18 ನನ್ನ ದೇವರೆ, ನನ್ನ ಪ್ರಾರ್ಥನೆಯನ್ನು ಕೇಳು. ನಿನ್ನ ಕಣ್ಣುಗಳನ್ನು ತೆರೆದು ನಮಗಾದ ಎಲ್ಲ ಕೇಡನ್ನು ನೋಡು. ನಿನ್ನ ಹೆಸರುಳ್ಳ ಪಟ್ಟಣದ ಗತಿ ಏನಾಗಿದೆ ನೋಡು. ನಾವು ಒಳ್ಳೆಯ ಜನರೆಂದು ನಾನು ಹೇಳುತ್ತಿಲ್ಲ. ನಾವು ಒಳ್ಳೆಯ ಜನರೆಂದು ಇದೆಲ್ಲವನ್ನು ಕೇಳುತ್ತಿಲ್ಲ. ನೀನು ಕರುಣಾಮಯನಾಗಿರುವುದರಿಂದಲೇ ಇದನ್ನೆಲ್ಲ ಕೇಳುತ್ತಿದ್ದೇನೆ. 19 ಯೆಹೋವನೇ, ನನ್ನ ಮೊರೆಯನ್ನು ಕೇಳು. ಯೆಹೋವನೇ, ನಮ್ಮನ್ನು ಕ್ಷಮಿಸು. ಯೆಹೋವನೇ, ನಮ್ಮ ಕಡೆಗೆ ಗಮನ ನೀಡಿ ಸಹಾಯಮಾಡು. ತಡಮಾಡಬೇಡ. ಈಗಲೇ ಸಹಾಯಮಾಡು. ನಿನ್ನ ಮಹಿಮೆಗಾಗಿಯೇ ಸಹಾಯಮಾಡು. ನನ್ನ ದೇವರೇ, ನಿನ್ನ ಹೆಸರಿನಿಂದ ಕರೆಯಲ್ಪಡುವ ನಿನ್ನ ನಗರಕ್ಕಾಗಿಯೂ ನಿನ್ನ ಜನರಿಗಾಗಿಯೂ ಈಗಲೇ ಸಹಾಯಮಾಡು” ಎಂದು ಪ್ರಾರ್ಥಿಸಿದೆನು.

ಯಾಕೋಬನು 4:1-10

ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ

ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.

ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)

ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International