Revised Common Lectionary (Semicontinuous)
117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
ಸರ್ವಜನರೇ, ಆತನನ್ನು ಸ್ತುತಿಸಿರಿ.
2 ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.
ಯೆಹೋವನಿಗೆ ಸ್ತೋತ್ರವಾಗಲಿ.
ಇಸ್ರೇಲಿನ ನವನಿರ್ಮಾಣ
31 ಯೆಹೋವನು ಈ ವಿಷಯಗಳನ್ನು ಹೇಳಿದನು: “ಆ ಸಮಯದಲ್ಲಿ ನಾನು ಇಸ್ರೇಲಿನ ಎಲ್ಲಾ ಗೋತ್ರಗಳ ದೇವರಾಗಿರುವೆನು; ಅವರು ನನ್ನ ಪ್ರಜೆಗಳಾಗಿರುವರು.”
2 ಯೆಹೋವನು ಹೀಗೆನ್ನುತ್ತಾನೆ:
“ಶತ್ರುವಿನ ಖಡ್ಗಕ್ಕೆ ಕೆಲವು ಜನರು ಆಹುತಿಯಾಗಿಲ್ಲ.
ಅವರಿಗೆ ಮರುಭೂಮಿಯಲ್ಲಿ ನೆಮ್ಮದಿ ದೊರೆಯುವುದು.
ಇಸ್ರೇಲು ವಿಶ್ರಾಂತಿಯನ್ನು ಬಯಸಿ ಬರುವುದು.”
3 ದೂರದಿಂದ ಯೆಹೋವನು
ತನ್ನ ಜನರಿಗೆ ದರ್ಶನವನ್ನು ಕೊಡುವನು.
ಯೆಹೋವನು ಹೀಗೆನ್ನುವನು, “ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನ ಪ್ರೇಮವು ಶಾಶ್ವತವಾದದ್ದು.
ನಾನು ಎಂದೆಂದಿಗೂ
ನಿಮ್ಮ ಹಿತೈಷಿಯಾಗಿರುವೆನು.
4 ನನ್ನ ವಧುವಾದ ಇಸ್ರೇಲೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು,
ಆಗ ನೀನು ಮತ್ತೆ ಒಂದು ಜನಾಂಗವಾಗುವೆ.
ನೀನು ಮೊದಲಿನಂತೆ ನಿನ್ನ ದಮ್ಮಡಿಯನ್ನು ತೆಗೆದುಕೊಂಡು
ಸಂತೋಷದಿಂದ ನೃತ್ಯ ಮಾಡುವವರೊಡನೆ ನೃತ್ಯ ಮಾಡುವೆ.
5 ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ.
ನೀವು ಸಮಾರ್ಯ ನಗರದ ಸುತ್ತಮುತ್ತಲಿನ
ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ.
ರೈತರಾದ ನೀವು
ಅದರ ಫಲವನ್ನು ಅನುಭವಿಸುವಿರಿ.
6 ಒಂದು ಕಾಲ ಬರುವುದು,
ಆಗ ಕಾವಲುಗಾರರು,
‘ಬನ್ನಿ, ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು
ಚೀಯೋನಿಗೆ ಹೋಗೋಣ’ ಎಂದು ಕೂಗುವರು.
ಎಫ್ರಾಯೀಮಿನ ಬೆಟ್ಟಪ್ರದೇಶದ ಕಾವಲುಗಾರರು ಸಹ ಹೀಗೆಯೇ ಕೂಗುವರು.”
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
Kannada Holy Bible: Easy-to-Read Version. All rights reserved. © 1997 Bible League International