Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 117

117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
    ಸರ್ವಜನರೇ, ಆತನನ್ನು ಸ್ತುತಿಸಿರಿ.
ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
    ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.

ಯೆಹೋವನಿಗೆ ಸ್ತೋತ್ರವಾಗಲಿ.

ಯೆರೆಮೀಯ 30:1-17

ಆಶಾದಾಯಕವಾದ ವಾಗ್ದಾನಗಳು

30 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳಿದನು: “ಯೆರೆಮೀಯನೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ಈ ಪುಸ್ತಕವನ್ನು ನೀನೇ ಬರೆಯಬೇಕು. ಏಕೆಂದರೆ ನಾನು ನನ್ನ ಜನರಾದ ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸದಿಂದ ಕರೆದುಕೊಂಡು ಬರುವ ದಿನಗಳು ಬರುತ್ತಿವೆ.” ಈ ಸಂದೇಶವು ಯೆಹೋವನಿಂದ ಬಂದದ್ದು. “ಆ ಜನರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲಸುವಂತೆ ಮಾಡುತ್ತೇನೆ. ಆಗ ನನ್ನ ಜನರು ಆ ಪ್ರದೇಶದ ಒಡೆತನ ಪಡೆಯುವರು.”

ಇಸ್ರೇಲಿನ ಮತ್ತು ಯೆಹೂದದ ಜನರ ಬಗ್ಗೆ ಯೆಹೋವನು ಈ ಸಂದೇಶವನ್ನು ಕೊಟ್ಟನು:

“ಜನರು ಭಯದಿಂದ ಗೋಳಿಡುವದನ್ನು ನಾವು ಕೇಳುತ್ತಿದ್ದೇವೆ.
    ಜನರು ಅಂಜಿಕೊಂಡಿದ್ದಾರೆ; ನೆಮ್ಮದಿಯಿಲ್ಲದವರಾಗಿದ್ದಾರೆ.

“ಈ ಪ್ರಶ್ನೆಯನ್ನು ಕೇಳಿ ಪರಿಶೀಲಿಸಿರಿ.
    ಪುರುಷನು ಮಗುವಿಗೆ ಜನ್ಮಕೊಡಬಲ್ಲನೆ? ಖಂಡಿತವಾಗಿಯೂ ಇಲ್ಲ.
ಹಾಗಾದರೆ ಪ್ರತಿಯೊಬ್ಬ ಬಲಿಷ್ಠನೂ ಪ್ರಸವವೇದನೆಪಡುತ್ತಿರುವ
    ಸ್ತ್ರೀಯಂತೆ ತನ್ನ ಹೊಟ್ಟೆಯನ್ನು ಏಕೆ ಹಿಡಿದುಕೊಂಡಿದ್ದಾನೆ?
ಪ್ರತಿಯೊಬ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ?
    ಏಕೆಂದರೆ ಜನರು ಬಹಳ ಭಯಪಟ್ಟಿದ್ದಾರೆ.

“ಇದು ಯಾಕೋಬ್ಯರಿಗೆ ಬಹು ಮುಖ್ಯವಾದ ಸಮಯ.
    ಇದು ಬಹಳ ಕಷ್ಟದ ಸಮಯ.
ಎಂದೂ ಇಂಥ ಕಷ್ಟದ ಸಮಯ ಬರುವದಿಲ್ಲ.
    ಆದರೆ ಯಾಕೋಬ್ ಇದರಿಂದ ಪಾರಾಗುವುದು.”

ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನ್ನು ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನ್ನು ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನ್ನ ಜನರನ್ನು ದಾಸರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆಮಾಡುವರು, ನಾನು ಆ ರಾಜನನ್ನು ಕಳುಹಿಸುವೆನು.”

10 ಯೆಹೋವನು ಹೀಗೆಂದನು:
    “ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ!
ಇಸ್ರೇಲೇ, ಅಂಜಬೇಡ,
    ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು.
ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ,
    ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ.
    ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ.
ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು.
    ಜನರು ಯಾಕೋಬನನ್ನು ಪೀಡಿಸುವದಿಲ್ಲ;
ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.”
ಇದು ಯೆಹೋವನ ನುಡಿ.
11 “ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ.
ನಾನು ನಿಮ್ಮನ್ನು ರಕ್ಷಿಸುತ್ತೇನೆ.
ನಾನು ನಿಮ್ಮನ್ನು ಆ ಜನಾಂಗಗಳ ಬಳಿಗೆ ಕಳುಹಿಸಿದೆ.
    ಆದರೆ ನಾನು ಆ ಎಲ್ಲಾ ಜನಾಂಗಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
ಇದು ನಿಜ. ನಾನು ಆ ಜನಾಂಗಗಳನ್ನು ನಾಶಮಾಡುವೆನು.
    ಆದರೆ ನಾನು ನಿಮ್ಮನ್ನು ನಾಶಮಾಡುವದಿಲ್ಲ.
ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಬೇಕು.
    ನಾನು ನಿಮ್ಮನ್ನು ಸರಿಯಾಗಿ ಶಿಕ್ಷಿಸುತ್ತೇನೆ.”

12 ಯೆಹೋವನು ಹೀಗೆನ್ನುತ್ತಾನೆ:
“ಇಸ್ರೇಲಿನ ಮತ್ತು ಯೆಹೂದದ ಜನರಾದ ನಿಮಗೆ ಗುಣವಾಗದ ಗಾಯವಾಗಿದೆ.
    ನಿಮಗೆ ವಾಸಿಯಾಗದ ನೋವಾಗಿದೆ.
13 ನಿಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ.
    ಆದ್ದರಿಂದ ನಿಮ್ಮ ಗಾಯಗಳು ವಾಸಿಯಾಗುವದಿಲ್ಲ.
14 ನೀವು ಅನೇಕ ಜನಾಂಗಗಳೊಡನೆ ಸ್ನೇಹ ಮಾಡಿದಿರಿ.
    ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ.
    ನಿಮ್ಮ ‘ಸ್ನೇಹಿತರು’ ನಿಮ್ಮನ್ನು ಮರೆತಿದ್ದಾರೆ.
ನಾನು ಶತ್ರುವಿನಂತೆ ನಿಮ್ಮನ್ನು ನೋಯಿಸಿದೆ.
    ನಾನು ನಿಮಗೆ ಬಹಳ ಕಠಿಣವಾದ ಶಿಕ್ಷೆಯನ್ನು ಕೊಟ್ಟೆ.
ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ.
    ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ.
15 ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ?
    ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಧಿಯಿಲ್ಲ.
ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ.
    ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
16 ಆ ಜನಾಂಗಗಳು ನಿಮ್ಮನ್ನು ನಾಶಗೊಳಿಸಿದವು.
    ಆದರೆ ಈಗ ಆ ಜನಾಂಗಗಳನ್ನು ನಾಶಪಡಿಸಲಾಗಿದೆ.
ಇಸ್ರೇಲೇ, ಯೆಹೂದವೇ, ನಿಮ್ಮ ಶತ್ರುಗಳು ಬಂಧಿಗಳಾಗುತ್ತಾರೆ.
ಅವರು ನಿಮ್ಮ ವಸ್ತುಗಳನ್ನು ಕದ್ದುಕೊಂಡಿದ್ದಾರೆ.
    ಆದರೆ ಬೇರೆಯವರು ಅವರ ವಸ್ತುಗಳನ್ನು ಕದಿಯುವರು.
ಅವರು ಯುದ್ಧದಲ್ಲಿ ನಿಮ್ಮ ವಸ್ತುಗಳನ್ನು ತೆಗೆದುಕೊಂಡರು.
    ಆದರೆ ಬೇರೆಯವರು ಯುದ್ಧದಲ್ಲಿ ಅವರ ವಸ್ತುಗಳನ್ನು ತೆಗೆದುಕೊಳ್ಳುವರು.”
17 ಇದು ಯೆಹೋವನ ನುಡಿ:
    “ನಾನು ಪುನಃ ನಿಮಗೆ ಆರೋಗ್ಯವನ್ನು ಕೊಡುವೆನು; ನಿಮ್ಮ ಗಾಯಗಳನ್ನು ವಾಸಿಮಾಡುವೆನು.
ಏಕೆಂದರೆ ಚೀಯೋನ್ ಭ್ರಷ್ಟಳಾದಳೆಂದೂ
    ‘ಯಾರಿಗೂ ಬೇಡವಾದ ನಗರ’ವೆಂದೂ ಬೇರೆಯವರು ಹೇಳಿದರು.”

ಪ್ರಕಟನೆ 21:5-27

ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.

ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”

ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.

11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.

15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ[a] ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು.[b] ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.

19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.

22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.

24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International