Revised Common Lectionary (Semicontinuous)
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
18 ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು,
“ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ.
ಅವರು ಒಬ್ಬರಿಗೊಬ್ಬರು,
‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ,
ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ.
ಅವರು ಅವನ ಬಗ್ಗೆ
‘ಒಡೆಯನೇ, ನನ್ನ ರಾಜನೇ,
ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
19 ಜೆರುಸಲೇಮಿನ ಜನರು ಯೆಹೋಯಾಕೀಮನನ್ನು ಒಂದು ಕತ್ತೆಯನ್ನು ಹೂಳಿದಂತೆ ಹೂಳಿಬಿಡುತ್ತಾರೆ.
ಅವರು ಅವನ ಶವವನ್ನು ದೂರ ಎಳೆದುಕೊಂಡು ಹೋಗುತ್ತಾರೆ.
ಅವನ ಶವವನ್ನು ಜೆರುಸಲೇಮಿನ ದ್ವಾರಗಳ ಹೊರಗೆ ಎಸೆದುಬಿಡುತ್ತಾರೆ.
20 “ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ,
ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ.
ಅಬಾರೀಮಿನಲ್ಲಿ ಅರಚಿಕೊ;
ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.
21 “ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ.
ಆದರೆ ನಾನು ನಿನಗೆ ಎಚ್ಚರಿಕೆಯನ್ನು ಕೊಟ್ಟೆ.
ಹೌದು, ನಾನೇ ಎಚ್ಚರಿಕೆಯನ್ನು ಕೊಟ್ಟೆ,
ಆದರೆ ನೀನು ಅದನ್ನು ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ.
ನಿನ್ನ ಬಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ.
ಯೆಹೂದವೇ, ನಿನ್ನ ಬಾಲ್ಯದಿಂದಲೂ
ನೀನು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.
22 ಯೆಹೂದವೇ, ನನ್ನ ದಂಡನೆಯು ಒಂದು ಬಿರುಗಾಳಿಯಂತೆ ಬರುವುದು.
ಅದು ನಿನ್ನ ಎಲ್ಲಾ ಕುರುಬರನ್ನು (ನಾಯಕರನ್ನು) ಹಾರಿಸಿಕೊಂಡು ಹೋಗುವುದು.
ಯಾವುದಾದರೂ ಬೇರೆ ಜನಾಂಗ ನಿನಗೆ ಸಹಾಯಮಾಡಬಹುದೆಂದು ನೀನು ಭಾವಿಸಿಕೊಂಡಿರುವೆ.
ಆದರೆ ಆ ಜನಾಂಗಗಳನ್ನೂ ಸೋಲಿಸಲಾಗುವುದು.
ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು.
ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.
23 “ರಾಜನೇ, ಬೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನ್ನ ಮನೆಯಲ್ಲಿ ನೀನು ವಾಸಿಸುವೆ.
ಆ ಮನೆಯು ಲೆಬನೋನಿನ ಮರದ ತೋಪಿನಂತಿದೆ.
ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ
ನಿನ್ನ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ.
ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ.
ಪ್ರಸವವೇದನೆಯಂಥ ನೋವನ್ನು ನೀನು ಅನುಭವಿಸುವೆ.”
ರಾಜನಾದ ಯೆಹೋಯಾಚೀನನ ಬಗ್ಗೆ ನ್ಯಾಯನಿರ್ಣಯ
24 ಯೆಹೋವನು ಹೀಗೆನ್ನುತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನ್ನ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುವೆನು. 25 ಯೆಹೋಯಾಚೀನನೇ, ನಾನು ನಿನಗೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನ್ನನ್ನು ಕೊಲ್ಲಬಯಸುತ್ತಾರೆ. 26 ನಾನು ನಿನ್ನನ್ನೂ ನಿನ್ನ ತಾಯಿಯನ್ನೂ ನಿಮ್ಮಿಬ್ಬರ ಜನ್ಮಸ್ಥಳವಲ್ಲದ ಬೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನ್ನ ತಾಯಿ ಆ ದೇಶದಲ್ಲಿ ಸತ್ತುಹೋಗುವಿರಿ. 27 ಯೆಹೋಯಾಚೀನನೇ, ನೀನು ನಿನ್ನ ದೇಶಕ್ಕೆ ಹಿಂದಿರುಗಬೇಕೆಂದು ಅಪೇಕ್ಷಿಸಿದರೂ ನಿನಗೆ ಬರಲು ಸಾಧ್ಯವಾಗದು.”
28 ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ.
ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ.
ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು?
ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?
29 ದೇಶವೇ, ದೇಶವೇ, ಯೆಹೂದದ ದೇಶವೇ,
ಯೆಹೋವನ ಸಂದೇಶವನ್ನು ಕೇಳು.
30 ಯೆಹೋವನು ಹೇಳುವುದೇನೆಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ.
ಯೆಹೋಯಾಚೀನನು ತನ್ನ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ.
ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನ್ನೇರುವದಿಲ್ಲ.
ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವುದಿಲ್ಲ.”
ದೇವರ ರಾಜ್ಯಕ್ಕೆ ಯಾರು ಪ್ರವೇಶಿಸುವರು?
(ಮತ್ತಾಯ 19:13-15; ಮಾರ್ಕ 10:13-16)
15 ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು. 16 ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ. 17 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International