Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 76

ಸ್ತುತಿಗೀತೆ. ರಚನೆಗಾರ: ಆಸಾಪ.

76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
    ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
ಆತನ ಗುಡಾರವು ಸಾಲೇಮಿನಲ್ಲಿದೆ.
    ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
    ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.

ದೇವರೇ, ಶತ್ರುಗಳನ್ನು ಸೋಲಿಸಿ
    ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
    ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
    ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
    ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
ದೇವರೇ, ನೀನು ಭಯಂಕರನೇ ಸರಿ!
    ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
ಯೆಹೋವನು ಎದ್ದುನಿಂತು
    ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
ದೇವರು ಲೋಕದ ದೀನರನ್ನು ರಕ್ಷಿಸಿದನು.
    ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
    ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.

11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
    ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
    ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.

ಯೆಶಾಯ 66:1-13

ದೇವರು ಎಲ್ಲಾ ಜನಾಂಗಗಳಿಗೆ ತೀರ್ಪು ಕೊಡುವನು

66 ಯೆಹೋವನು ಹೇಳುವುದೇನೆಂದರೆ,
“ಆಕಾಶವೇ ನನ್ನ ಸಿಂಹಾಸನ,
    ಭೂಮಿಯೇ ನನ್ನ ಪಾದಪೀಠ.
ಹೀಗಿರಲು, ನೀವು ನನಗೊಂದು ಮನೆಯನ್ನು ಕಟ್ಟಲು ಸಾಧ್ಯವೆಂದು ಯೋಚಿಸುವಿರಾ?
    ವಿಶ್ರಮಿಸಿಕೊಳ್ಳಲು ನೀವು ಸ್ಥಳ ಮಾಡುವಿರಾ? ಇಲ್ಲ, ಸಾಧ್ಯವಿಲ್ಲ!
ನಾನೇ ಎಲ್ಲವನ್ನು ಉಂಟುಮಾಡಿದೆನು.
    ನಾನು ಸೃಷ್ಟಿಸಿದ್ದರಿಂದ ಅವು ಅಸ್ತಿತ್ವದಲ್ಲಿವೆ.”
    ಇವು ಯೆಹೋವನ ನುಡಿಗಳು.
“ಎಂಥ ಜನರನ್ನು ನಾನು ಪರಿಪಾಲಿಸುತ್ತೇನೆಂದು ಕೇಳುವಿರಾ?
    ಬಡವರ ವಿಷಯದಲ್ಲಿ ನಾನು ಚಿಂತಿಸುತ್ತೇನೆ.
ದುಃಖಿಸುವ ಜನರಿಗಾಗಿ ನಾನು ಚಿಂತಿಸುತ್ತೇನೆ.
    ನನ್ನ ಮಾತುಗಳಿಗೆ ವಿಧೇಯರಾಗುವವರಿಗಾಗಿ ನಾನು ಚಿಂತಿಸುತ್ತೇನೆ.
ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು.
    ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು.
ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು,
    ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು.
    ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು.
ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು.
    ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು.
ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.
    ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.
ಆದ್ದರಿಂದ ನಾನು ಅವರ ಉಪಾಯಗಳನ್ನೇ ಬಳಸಿಕೊಳ್ಳಲು ನಿರ್ಧರಿಸಿದೆನು.
    ಅವರು ಬಹು ಭಯಪಡುವ ವಸ್ತುಗಳಿಂದಲೇ ಅವರನ್ನು ಶಿಕ್ಷಿಸಲು ತೀರ್ಮಾನಿಸಿದೆನು.
ಎಕೆಂದರೆ ನಾನು ಅವರನ್ನು ಕರೆದರೂ
    ಅವರು ಕಿವಿಗೊಡಲಿಲ್ಲ.
ನಾನು ಅವರೊಂದಿಗೆ ಮಾತಾಡಿದರೂ ಅವರು ಕೇಳಲಿಲ್ಲ.
    ಆದ್ದರಿಂದ ನಾನು ಅವರಿಗೆ ಅದನ್ನೇ ಮಾಡುವೆನು.
ನಾನು ಯಾವದನ್ನು ಕೆಟ್ಟದೆಂದು ಪರಿಗಣಿಸಿದ್ದೆನೋ ಅದನ್ನೇ ಅವರು ಮಾಡಿದರು.
    ನಾನು ಇಷ್ಟಪಡದ ಸಂಗತಿಗಳನ್ನು ಅವರು ಮಾಡಿದರು.”

ಯೆಹೋವನ ಆಜ್ಞೆಗಳನ್ನು ಪರಿಪಾಲಿಸುವ ನೀವು
    ಆತನು ಹೇಳುವ ಸಂಗತಿಗಳನ್ನು ಕಿವಿಗೊಟ್ಟು ಕೇಳಬೇಕು.
ಆತನು ಹೇಳುವುದೇನೆಂದರೆ, “ನಿಮ್ಮ ಸಹೋದರರು ನಿಮ್ಮನ್ನು ದ್ವೇಷಿಸಿದರು.
    ನೀವು ನನ್ನನ್ನು ಅನುಸರಿಸಿದ್ದರಿಂದ ನಿಮ್ಮ ಮೇಲೆರಗಿದರು.
‘ಯೆಹೋವನು ಸನ್ಮಾನ ಹೊಂದಿದ ಬಳಿಕ ನಿಮ್ಮ ಬಳಿಗೆ ಬರುತ್ತೇವೆ.
    ಆಮೇಲೆ ನಿಮ್ಮ ಆನಂದವನ್ನು ಅನುಭವಿಸುತ್ತೇವೆ’ ಎಂದು ನಿಮ್ಮ ಸಹೋದರರು ಅಂದರು.
    ಆ ದುಷ್ಟ ಜನರು ಶಿಕ್ಷಿಸಲ್ಪಡುವರು.”

ಶಿಕ್ಷೆ ಮತ್ತು ಹೊಸ ಜನಾಂಗ

ಆಲೈಸಿರಿ! ಪಟ್ಟಣದೊಳಗಿಂದ ಮತ್ತು ದೇವಾಲಯದೊಳಗಿಂದ ದೊಡ್ಡ ಶಬ್ದವು ಕೇಳಿಸುತ್ತದೆ. ಯೆಹೋವನು ತನ್ನ ವೈರಿಗಳನ್ನು ಶಿಕ್ಷಿಸುವುದೇ ಆ ಶಬ್ದ. ಅವರಿಗೆ ತಕ್ಕ ಶಿಕ್ಷೆಯನ್ನು ಯೆಹೋವನು ಕೊಡುತ್ತಿದ್ದಾನೆ.

7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”

ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.

10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
    ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ.
    ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
    ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
    ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.

12 ಯೆಹೋವನು ಹೇಳುವುದೇನೆಂದರೆ:
“ಇಗೋ, ನಾನು ನಿನಗೆ ಸಮಾಧಾನವನ್ನು ಕೊಡುತ್ತೇನೆ.
ಒಂದು ದೊಡ್ಡ ಹೊಳೆಯು ಹರಿಯುವಂತೆ ನಿನಗೆ ಸಮಾಧಾನವು ಹರಿದುಕೊಂಡು ಬರುವದು.
    ಭೂಮಿಯ ಮೇಲಿರುವ ಎಲ್ಲಾ ದೇಶಗಳ ಐಶ್ವರ್ಯವು ನಿನ್ನ ಬಳಿಗೆ ಹರಿದುಬರುವದು.
    ಅದು ಪ್ರವಾಹದಂತೆ ಹರಿದುಬರುವದು.
ನೀವು ಸಣ್ಣ ಮಕ್ಕಳಂತೆ ಆ ಹಾಲನ್ನು ಕುಡಿಯುವಿರಿ.
    ನಾನು ನಿಮ್ಮನ್ನೆತ್ತಿ ಕೈಗಳಲ್ಲಿ ಅಪ್ಪಿಕೊಳ್ಳುವೆನು.
    ನನ್ನ ತೊಡೆಯ ಮೇಲೆ ನಿಮ್ಮನ್ನು ಕುಳ್ಳಿರಿಸಿ ಆಟವಾಡಿಸುವೆನು.
13 ನಾನು ನಿಮ್ಮನ್ನು ಜೆರುಸಲೇಮಿನಲ್ಲಿ ಸಂತೈಸುವೆನು.
    ತಾಯಿಯು ತನ್ನ ಮಗುವನ್ನು ಸಂತೈಸುವಂತೆ ನಾನು ನಿಮ್ಮನ್ನು ಸಂತೈಸುವೆನು.”

1 ಕೊರಿಂಥದವರಿಗೆ 10:23-11:1

ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ

23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.

25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(A)

27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.

31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.

11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International