Revised Common Lectionary (Semicontinuous)
ದೇವರಿಗೆ ಸ್ತೋತ್ರದ ಹಾಡು
12 ಆ ಸಮಯದಲ್ಲಿ ನೀನು ಹೀಗೆನ್ನುವೆ:
“ಯೆಹೋವನೇ, ನಾನು ನಿನ್ನನ್ನು ಸ್ತುತಿಸುವೆ!
ನೀನು ನನ್ನ ಮೇಲೆ ಕೋಪಿಸಿಕೊಂಡಿರುವೆ.
ಆದರೆ ಈಗ ನೀನು ನನ್ನ ಮೇಲೆ ಕೋಪಗೊಳ್ಳಬೇಡ!
ನಿನ್ನ ಪ್ರೀತಿಯನ್ನು ನನ್ನ ಮೇಲೆ ತೋರಿಸು.
2 ದೇವರು ನನ್ನನ್ನು ರಕ್ಷಿಸುತ್ತಾನೆ.
ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”
3 ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
ಆಗ ನೀನು ಸಂತೋಷಗೊಳ್ಳುವೆ.
4 ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
5 ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
ಎಲ್ಲಾ ಜನರು ಇದನ್ನು ತಿಳಿಯಲಿ.
6 ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
ಆದ್ದರಿಂದ ಹರ್ಷಿಸಿರಿ.
15 ಸತ್ಯವು ಹೊರಟುಹೋಯಿತು.
ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ.
ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು
ಯೆಹೋವನು ಬೇಸರಗೊಂಡಿದ್ದಾನೆ.
16 ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು
ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ.
ಆದ್ದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ
ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು.
17 ಯೆಹೋವನು ಯುದ್ಧ ಸನ್ನದ್ಧನಾದನು.
ಆತನು ಒಳ್ಳೆಯತನವೆಂಬ ಕವಚ,
ರಕ್ಷಣೆಯೆಂಬ ಶಿರಸ್ತ್ರಾಣ,
ಶಿಕ್ಷೆಯೆಂಬ ಬಟ್ಟೆ ಮತ್ತು
ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ.
18 ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು.
ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು.
19 ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು.
ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು.
ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ
ಯೆಹೋವನು ಬೇಗನೆ ಬರುವನು.
20 ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು.
ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.
21 ಯೆಹೋವನು ಹೇಳುವುದೇನೆಂದರೆ: “ನಾನಂತೂ ಆ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವೆನು. ನನ್ನ ವಾಗ್ದಾನದ ಮಾತುಗಳೂ ನಾನು ಇರಿಸಿದ ನನ್ನ ಆತ್ಮವೂ ನಿಮ್ಮಿಂದ ಎಂದಿಗೂ ತೊಲಗದು. ಅವು ನಿಮ್ಮ ಮೊಮ್ಮಕ್ಕಳ ತನಕವೂ ಇರುವವು. ಅವು ನಿನ್ನೊಂದಿಗೆ ಈಗಲೂ ಸದಾಕಾಲವೂ ಇರುವವು.
ದೇವರ ರಾಜ್ಯವು ನಿಮ್ಮೊಳಗಿದೆ
(ಮತ್ತಾಯ 24:23-28,37-41)
20 ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು.
ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ. 21 ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.
22 ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ. 23 ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.
ಯೇಸು ತಿರುಗಿ ಬರುವಾಗ ಲೋಕದ ಸ್ಥಿತಿ
24 “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು. 25 ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.
26 “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಈ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು. 27 ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು.
28 “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು. 29 ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು. 30 ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು.
31 “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ. 32 ಲೋಟನ ಹೆಂಡತಿಗೆ[a] ಸಂಭವಿಸಿದ್ದು ಜ್ಞಾಪಕವಿದೆಯೇ?
33 “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 34 ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 35 ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.” 36 [b]
37 ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು.
ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International