Revised Common Lectionary (Semicontinuous)
ದೇವರಿಗೆ ಸ್ತೋತ್ರದ ಹಾಡು
12 ಆ ಸಮಯದಲ್ಲಿ ನೀನು ಹೀಗೆನ್ನುವೆ:
“ಯೆಹೋವನೇ, ನಾನು ನಿನ್ನನ್ನು ಸ್ತುತಿಸುವೆ!
ನೀನು ನನ್ನ ಮೇಲೆ ಕೋಪಿಸಿಕೊಂಡಿರುವೆ.
ಆದರೆ ಈಗ ನೀನು ನನ್ನ ಮೇಲೆ ಕೋಪಗೊಳ್ಳಬೇಡ!
ನಿನ್ನ ಪ್ರೀತಿಯನ್ನು ನನ್ನ ಮೇಲೆ ತೋರಿಸು.
2 ದೇವರು ನನ್ನನ್ನು ರಕ್ಷಿಸುತ್ತಾನೆ.
ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”
3 ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
ಆಗ ನೀನು ಸಂತೋಷಗೊಳ್ಳುವೆ.
4 ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
5 ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
ಎಲ್ಲಾ ಜನರು ಇದನ್ನು ತಿಳಿಯಲಿ.
6 ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
ಆದ್ದರಿಂದ ಹರ್ಷಿಸಿರಿ.
ದುಷ್ಟರು ತಮ್ಮ ಜೀವಿತವನ್ನು ಬದಲಾಯಿಸಬೇಕು
59 ಇಗೋ, ನಿಮ್ಮನ್ನು ರಕ್ಷಿಸಲು ಯೆಹೋವನು ಶಕ್ತನಾಗಿದ್ದಾನೆ. ನೀವು ಸಹಾಯಕ್ಕಾಗಿ ಪ್ರಾರ್ಥಿಸುವಾಗ ಆತನು ನಿಮ್ಮನ್ನು ಆಲೈಸುವನು. 2 ಆದರೆ ನಿಮ್ಮ ಪಾಪಗಳೇ ನಿಮ್ಮನ್ನು ದೇವರಿಂದ ದೂರ ಮಾಡಿರುತ್ತವೆ. ಯೆಹೋವನು ತನ್ನ ಮುಖವನ್ನು ಮರೆಮಾಡಿಕೊಳ್ಳುವಂತೆ ನೀವು ಪಾಪಗಳನ್ನು ಮಾಡಿದ್ದರಿಂದ, ಆತನು ನಿಮಗೆ ಕಿವಿಗೊಡುವುದಿಲ್ಲ. 3 ನಿಮ್ಮ ಕೈಗಳು ಮಲಿನವಾಗಿವೆ; ಅವು ರಕ್ತಮಯವಾಗಿವೆ. ನಿಮ್ಮ ಬೆರಳುಗಳು ಅಪರಾಧಗಳಿಂದ ಅಶುದ್ಧವಾಗಿವೆ. ನಿಮ್ಮ ಬಾಯಿಗಳಿಂದ ನೀವು ಸುಳ್ಳಾಡುತ್ತೀರಿ. ನಿಮ್ಮ ನಾಲಿಗೆಯು ಕೆಟ್ಟ ಮಾತುಗಳನ್ನಾಡುತ್ತದೆ. 4 ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ. 5 ವಿಷದ ಹಾವಿನ ಮೊಟ್ಟೆಯಿಂದ ವಿಷದ ಹಾವಿನ ಮರಿಗಳು ಹೊರಬರುವಂತೆ ಅವರ ದುಷ್ಟತನವು ಹೊರಬರುವದು. ಆ ಮೊಟ್ಟೆಯನ್ನು ನೀವು ತಿಂದರೆ ಸಾಯುವಿರಿ. ಆ ಮೊಟ್ಟೆಯನ್ನು ಒಡೆದರೆ ವಿಷದ ಹಾವು ಹೊರಬರುವದು.
ಜನರು ಹೇಳುವ ಸುಳ್ಳು, ಜೇಡರ ಬಲೆಯಂತಿರುವದು. 6 ಜೇಡರ ಬಲೆಗಳ ನೂಲಿನಿಂದ ಬಟ್ಟೆ ನೇಯಲಾಗದು. ಆ ಬಲೆಯಿಂದ ನಿಮ್ಮ ಶರೀರವನ್ನು ಮುಚ್ಚಲಾಗುವದಿಲ್ಲ.
ಕೆಲವರು ತಮ್ಮ ಕೈಗಳಿಂದ ಇತರರಿಗೆ ಕೇಡುಮಾಡುವರು. 7 ಅವರು ತಮ್ಮ ಕಾಲುಗಳಿಂದ ಓಡುತ್ತಾ ದುಷ್ಕೃತ್ಯಗಳನ್ನು ಮಾಡುವರು; ನಿರಪರಾಧಿಗಳನ್ನು ಕೊಲ್ಲಲು ಆತುರಪಡುವರು. ಅವರ ಆಲೋಚನೆಯು ಕೆಟ್ಟದ್ದೇ. ದೊಂಬಿ, ಲೂಟಿಗಳೇ ಅವರ ಜೀವನಶೈಲಿಯಾಗಿವೆ. 8 ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು.
ಇಸ್ರೇಲರ ಪಾಪವೇ ಸಂಕಟಕ್ಕೆ ಕಾರಣ
9 ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ.
ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ
ನಾವು ಬೆಳಕಿಗಾಗಿ ಕಾಯಬೇಕಾಗಿದೆ.
ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ
ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.
10 ನಾವು ಕಣ್ಣಿಲ್ಲದವರಂತಿದ್ದೇವೆ.
ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ.
ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ.
ಹಗಲಿನಲ್ಲಿಯೂ ನಮಗೆ ಕಾಣದು.
ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ.
11 ನಾವೆಲ್ಲಾ ಗುಣುಗುಟ್ಟುತ್ತೇವೆ.
ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರಿವಾಳಗಳಂತೆ ಮೂಲುಗುತ್ತಿದ್ದೇವೆ.
ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ.
ಆದರೆ ಧರ್ಮವೇ ಇಲ್ಲ.
ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ.
ಆದರೆ ರಕ್ಷಣೆಯು ಬಹುದೂರವಿದೆ.
12 ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ.
ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ.
ಹೌದು, ನಾವು ಈ ಕಾರ್ಯಗಳನ್ನು
ಮಾಡಿ ದೋಷಿಗಳಾಗಿದ್ದೇವೆ.
13 ನಾವು ಪಾಪಮಾಡಿ
ಯೆಹೋವನಿಂದ ದೂರ ಹೋಗಿದ್ದೇವೆ.
ಆತನಿಂದ ದೂರವಾಗಿ
ಆತನನ್ನು ತೊರೆದುಬಿಟ್ಟಿದ್ದೇವೆ.
ನಾವು ದುಷ್ಟತನವನ್ನೂ
ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ.
ನಮ್ಮ ಹೃದಯಗಳಲ್ಲಿ
ದುಷ್ಟಯೋಜನೆಗಳನ್ನು ಹಾಕಿರುತ್ತೇವೆ.
14 ನ್ಯಾಯವು ನಮ್ಮಿಂದ ತೊಲಗಿಹೋಗಿದೆ.
ಸತ್ಯವು ಬೀದಿ ಪಾಲಾಗಿದೆ.
ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು.
15 ಸತ್ಯವು ಹೊರಟುಹೋಯಿತು.
ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ.
ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು
ಯೆಹೋವನು ಬೇಸರಗೊಂಡಿದ್ದಾನೆ.
3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. 4 ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.
ದೇವರ ತೀರ್ಪನ್ನು ಕುರಿತು ಪೌಲನ ವಿವರಣೆ
5 ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ಆ ರಾಜ್ಯಕ್ಕೋಸ್ಕರವೇ. 6 ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. 7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಈ ಶಾಂತಿಯನ್ನು ದಯಪಾಲಿಸುತ್ತಾನೆ. 8 ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. 9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಆ ಸಮೂಹದಲ್ಲಿರುವಿರಿ.
11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.
Kannada Holy Bible: Easy-to-Read Version. All rights reserved. © 1997 Bible League International