Revised Common Lectionary (Semicontinuous)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
10 ಪರ್ಶಿಯ ದೇಶದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಒಂಭತ್ತನೆಯ ತಿಂಗಳಿನ ಇಪ್ಪತ್ನಾಲ್ಕನೆಯ ದಿನದಂದು ಯೆಹೋವನ ಸಂದೇಶವು ಪ್ರವಾದಿಯಾದ ಹಗ್ಗಾಯನಿಗೆ ಬಂದಿತು. 11 “ಈ ವಿಷಯದ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾಜಕರನ್ನು ವಿಚಾರಿಸು ಎಂಬುದಾಗಿ ಸರ್ವಶಕ್ತನಾದ ಯೆಹೋವನು ನಿನಗೆ ಆಜ್ಞಾಪಿಸುತ್ತಾನೆ. 12 ‘ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಮಾಂಸವನ್ನು ಒಯ್ಯುತ್ತಿದ್ದಾನೆಂದು ನೆನಸಿರಿ. ಆ ಮಾಂಸವು ಯಜ್ಞದ ಒಂದು ಭಾಗವಾಗಿದೆ. ಆದ್ದರಿಂದ ಅದು ಪವಿತ್ರವಾದದ್ದು. ಆ ಬಟ್ಟೆಯು ರೊಟ್ಟಿಯನ್ನಾಗಲಿ ಅಡಿಗೆ ಮಾಡಿದ ಆಹಾರವಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಮುಟ್ಟಿದರೆ ಮುಟ್ಟಿದ ವಸ್ತು ಪವಿತ್ರವಸ್ತುವಾಗಬಹುದೇ?’”
ಯಾಜಕರು ಉತ್ತರವಾಗಿ, “ಇಲ್ಲ” ಎಂದರು.
13 ಆಗ ಹಗ್ಗಾಯನು, “ಒಬ್ಬ ಮನುಷ್ಯನು ಸತ್ತ ಹೆಣವನ್ನು ಮುಟ್ಟಿದರೆ, ಅವನು ಅಪವಿತ್ರನಾಗುವನು. ಆ ಸ್ಥಿತಿಯಲ್ಲಿ ಅವನು ಮುಟ್ಟಿದ ಯಾವ ವಸ್ತುವೇ ಆಗಲಿ ಅಪವಿತ್ರವಾಗುವದೇ?”
ಆಗ ಯಾಜಕರು, “ಹೌದು, ಆ ವಸ್ತುಗಳೂ ಅಪವಿತ್ರವಾಗುವವು” ಎಂದು ಉದ್ಗರಿಸಿದರು.
14 ಆಗ ಹಗ್ಗಾಯನು, “ನಿಮ್ಮ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ಜನಾಂಗದ ಜನರ ವಿಷಯದಲ್ಲಿಯೂ ಅದು ಸತ್ಯವಾಗಿದೆ. ಅವರು ನನ್ನ ಮುಂದೆ ಪವಿತ್ರರಲ್ಲ. ಆದ್ದರಿಂದ ಅವರು ಯಾವ ವಸ್ತುವನ್ನಾದರೂ ಮುಟ್ಟಿದರೆ ಅದು ಅಶುದ್ಧವಾಗುವುದು ಮತ್ತು ಅವರು ಯಜ್ಞವೇದಿಕೆಯ ಮೇಲೆ ಅರ್ಪಿಸುವುದೆಲ್ಲಾ ಅಶುದ್ಧವಾಗಿರುವುದು.
15 “‘ಈ ಹೊತ್ತಿಗಿಂತ ಮುಂಚೆ ನಡೆದ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ. ನೀವು ದೇವಾಲಯವನ್ನು ಕಟ್ಟಲು ಆರಂಭಿಸಿದ ಹಿಂದಿನ ದಿವಸಗಳನ್ನು ನೆನಪಿಗೆ ತಂದುಕೊಳ್ಳಿರಿ. 16 ಜನರಿಗೆ ಇಪ್ಪತ್ತು ಕಿಲೋ ಧಾನ್ಯ ಬೇಕಿದ್ದರೆ ರಾಶಿಯಲ್ಲಿ ಹತ್ತು ಕಿಲೋ ಮಾತ್ರ ಇರುತ್ತಿತ್ತು. ಜನರು ದ್ರಾಕ್ಷಾರಸದ ಪೀಪಾಯಿಯಿಂದ ಐವತ್ತು ಲೀಟರ್ ದ್ರಾಕ್ಷಾರಸ ತೆಗೆಯಲು ಹೋದರೆ ಅಲ್ಲಿ ಇಪ್ಪತ್ತು ಲೀಟರ್ ಮಾತ್ರ ಇರುತ್ತಿತ್ತು. 17 ಯಾಕೆ ಹೀಗಾಯಿತು? ಯಾಕೆಂದರೆ ನಾನು ನಿಮ್ಮನ್ನು ಶಿಕ್ಷಿಸಿದೆನು. ನೀವು ನೆಟ್ಟ ಮರಗಳನ್ನು ನಾಶಮಾಡಲು ನಾನು ರೋಗವನ್ನು ಕಳುಹಿಸಿದೆನು. ನಿಮ್ಮ ಕೈಕೆಲಸವನ್ನು ಹಾಳುಮಾಡಲು ನಾನು ಆಲಿಕಲ್ಲಿನ ಮಳೆಯನ್ನು ಕಳುಹಿಸಿದೆನು. ನಾನು ಇಷ್ಟೆಲ್ಲಾ ಮಾಡಿದರೂ ನೀವು ಯಾರೂ ನನ್ನ ಬಳಿಗೆ ಬರಲಿಲ್ಲ.’ ಇದು ಯೆಹೋವನ ನುಡಿ.”
18 ಯೆಹೋವನು ಹೀಗೆನ್ನುತ್ತಾನೆ, “ಈ ಹೊತ್ತು ಒಂಭತ್ತನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸವಾಗಿದೆ. ಆಲಯದ ಶಂಕುಸ್ಥಾಪನೆ ಮಾಡಿ ಮುಗಿಸಿರುತ್ತೀರಿ. ಇನ್ನು ಮುಂದಕ್ಕೆ ಏನು ನಡಿಯುತ್ತದೆಂದು ಗಮನಿಸಿರಿ. 19 ಉಗ್ರಾಣದಲ್ಲಿ ಗೋಧಿಯ ಕಾಳು ಏನಾದರೂ ಉಳಿದಿದೆಯೋ? ಇಲ್ಲ! ದ್ರಾಕ್ಷಿಬಳ್ಳಿಗಳನ್ನು, ಅಂಜೂರದ ಮರಗಳನ್ನು, ದಾಳಿಂಬದ ಮರಗಳನ್ನು, ಆಲೀವ್ ಮರಗಳನ್ನು ನೋಡಿರಿ. ಅವು ಹಣ್ಣುಗಳನ್ನು ಬಿಡುತ್ತವೋ? ಇಲ್ಲ. ಆದರೆ ಈ ದಿನದಿಂದ ನಾನು ನಿಮ್ಮನ್ನು ಆಶೀರ್ವದಿಸುತ್ತೇನೆ!”
ಕ್ರಿಸ್ತನ ಮಹಿಮೆಯನ್ನು ನಾವು ನೋಡಿದೆವು
16 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಕ್ತಿಯ ಕುರಿತಾಗಿ ಮತ್ತು ಆತನ ಬರುವಿಕೆಯ ಕುರಿತಾಗಿ ನಿಮಗೆ ತಿಳಿಸಿದ್ದೇವೆ. ಆ ಸಂಗತಿಗಳು ಜನರಿಂದ ಕಲ್ಪಿತವಾದ ಜಾಣ್ಮೆಯ ಕಥೆಗಳಲ್ಲ. ಯೇಸುವಿನ ಮಹಿಮೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. 17 ಆತನು ಅತ್ಯಂತ ಪ್ರಭಾವವುಳ್ಳ (ದೇವರ) ಸ್ವರವನ್ನು ಕೇಳಿದನು. ಆಗಲೇ ಆತನು ತಂದೆಯಾದ ದೇವರಿಂದ ಮಾನವನ್ನೂ ಪ್ರಭಾವವನ್ನೂ ಹೊಂದಿಕೊಂಡನು. ಆ ಸ್ವರವು, “ಈತನು ನನ್ನ ಪ್ರಿಯ ಮಗ. ಈತನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. 18 ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.[a]
19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ. 20 ನೀವು ಅರ್ಥಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೇನೆಂದರೆ, ಪವಿತ್ರ ಗ್ರಂಥದಲ್ಲಿರುವ ಯಾವ ಪ್ರವಾದನವಾಕ್ಯವೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಣೆಯಿಂದ ಬಂದಿಲ್ಲ. 21 ಯಾವ ಪ್ರವಾದನೆಯೇ ಆಗಲಿ ಮನುಷ್ಯನ ಚಿತ್ತದಿಂದ ಬಂದಿಲ್ಲ. ಆದರೆ ಜನರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತನಾಡಿದರು.
Kannada Holy Bible: Easy-to-Read Version. All rights reserved. © 1997 Bible League International