Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 145:1-5

ರಚನೆಗಾರ: ದಾವೀದ.

145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
    ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
    ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.

ಕೀರ್ತನೆಗಳು 145:17-21

17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
    ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
    ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
    ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
    ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
    ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!

ಹಗ್ಗಾಯ 1

ಆಲಯವನ್ನು ಕಟ್ಟಲು ಇದೇ ಸಮಯ

ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಸಂದೇಶವು ಬಂದಿತು. ಈ ಸಂದೇಶವು ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನಿಗೋಸ್ಕರ, ಯೆಹೋಚಾದಾಕನ ಮಗನಾದ ಯೆಹೋಶುವನಿಗೋಸ್ಕರ ಬಂದಿತು. ಜೆರುಬ್ಬಾಬೆಲನು ಯೆಹೂದ ಪ್ರಾಂತ್ಯದ ರಾಜ್ಯಪಾಲನಾಗಿದ್ದನು; ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಸಂದೇಶವು ಇದೇ: ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆಲಯವನ್ನು ಕಟ್ಟಲು ಇದು ಸರಿಯಾದ ಸಮಯವಲ್ಲವೆಂದು ಜನರು ಹೇಳುತ್ತಿದ್ದಾರೆ.”

ಹಗ್ಗಾಯನಿಗೆ ಮತ್ತೆ ಯೆಹೋವನಿಂದ ಸಂದೇಶವು ಬಂದಿತು. ಹಗ್ಗಾಯನು ಈ ಸಂದೇಶವನ್ನು ತಿಳಿಸಿದನು: “ಜನರೇ, ನೀವು ಅಂದವಾದ ಮನೆಗಳಲ್ಲಿ ವಾಸಮಾಡಲು ಇದು ತಕ್ಕ ಸಮಯವೆಂದು ಹೇಳುತ್ತೀರಿ. ನಿಮ್ಮ ಮನೆಗಳಲ್ಲಿ ಗೋಡೆಗೆ ಮರದ ಹಲಗೆಗಳನ್ನು ಹೊಡೆದಿದ್ದೀರಿ. ಆದರೆ ಯೆಹೋವನ ಮನೆಯು ಇನ್ನೂ ಹಾಳುಬಿದ್ದಿದೆ. ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ಏನು ನಡೆಯುತ್ತಿದೆಂಬುದರ ಬಗ್ಗೆ ಯೋಚಿಸಿರಿ. ನೀವು ಬಹಳ ಬೀಜವನ್ನು ಭೂಮಿಯಲ್ಲಿ ಬಿತ್ತಿದ್ದರೂ ಸ್ವಲ್ಪವೇ ಪೈರನ್ನು ಕೊಯ್ದಿದ್ದೀರಿ. ನಿಮಗೆ ಊಟಮಾಡಲು ಆಹಾರವಿದ್ದರೂ ತೃಪ್ತಿಯಾಗುವಷ್ಟಿಲ್ಲ. ನಿಮ್ಮಲ್ಲಿ ಕುಡಿಯಲು ಸ್ವಲ್ಪ ಪಾನೀಯವಿದ್ದರೂ ಕುಡಿದು ಅಮಲೇರುವಷ್ಟು ಇಲ್ಲ. ನಿಮ್ಮಲ್ಲಿ ತೊಟ್ಟುಕೊಳ್ಳಲು ಸ್ವಲ್ಪ ಬಟ್ಟೆಯಿದ್ದರೂ ನಿಮ್ಮನ್ನು ಬೆಚ್ಚಗಿಟ್ಟುಕೊಳ್ಳುವಷ್ಟು ಇಲ್ಲ. ನೀವು ಸ್ವಲ್ಪ ಹಣ ಸಂಪಾದನೆ ಮಾಡಿದರೂ ಅದು ಹೇಗೆ ಖರ್ಚಾಗುತ್ತದೋ ನಿಮಗೆ ತಿಳಿಯುವುದಿಲ್ಲ. ನಿಮ್ಮ ಜೇಬಿಗೆ ರಂಧ್ರ ಇದೆಯೋ ಎಂಬಂತೆ ಅದು ಖರ್ಚಾಗುತ್ತದೆ.’”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಮಾಡುತ್ತಿರುವುದನ್ನು ಯೋಚಿಸಿರಿ! ಬೆಟ್ಟಗಳ ಮೇಲಕ್ಕೆ ಹೋಗಿ ಮರವನ್ನು ತಂದು ನನಗೆ ಆಲಯವನ್ನು ಕಟ್ಟಿರಿ. ಆಗ ನಾನು ನನ್ನ ನಿವಾಸದಲ್ಲಿ ಸಂತೋಷಿಸುವೆನು. ಆಗ ನಾನು ಗೌರವಿಸಲ್ಪಡುವೆನು.” ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ದೊಡ್ಡ ಸುಗ್ಗಿಯನ್ನು ಎದುರು ನೋಡುತ್ತಿದ್ದೀರಿ. ಆದರೆ ನೀವು ಪೈರು ಕೊಯ್ಯಲು ಹೋಗುವಾಗ ಸ್ಪಲ್ಪವೇ ಕಾಳು ಇರುವುದು. ಅದನ್ನು ನೀವು ಮನೆಗೆ ತಂದಾಗ ನಾನು ಗಾಳಿಯನ್ನು ಕಳುಹಿಸಿ ಅವುಗಳನ್ನು ಹಾರಿಸಿಬಿಡುವೆನು. ಹೀಗೆಲ್ಲಾ ಯಾಕೆ ಆಗುತ್ತಿದೆ? ಯಾಕೆಂದರೆ, ನನ್ನ ಆಲಯವು ಇನ್ನೂ ಹಾಳುಬಿದ್ದಿದ್ದರೂ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳನ್ನು ನೋಡಿಕೊಳ್ಳುವುದಕ್ಕಾಗಿ ಓಡಿಹೋಗುತ್ತೀರಿ. 10 ಅದಕ್ಕಾಗಿಯೇ ಆಕಾಶವು ಮಂಜನ್ನು ಸುರಿಸುವುದಿಲ್ಲ. ಭೂಮಿಯು ಪೈರನ್ನು ಬೆಳೆಸುವದಿಲ್ಲ.”

11 ಯೆಹೋವನು ಹೇಳುವುದೇನೆಂದರೆ, “ನಾನು ಭೂಮಿಗೂ ಪರ್ವತಗಳಿಗೂ ಒಣಗಿಹೋಗಲು ಆಜ್ಞಾಪಿಸಿದ್ದೇನೆ. ಬೆಳೆ, ಹೊಸ ದ್ರಾಕ್ಷಾರಸ, ಆಲೀವ್ ಎಣ್ಣೆ ಮತ್ತು ಭೂಮಿಯು ಫಲಿಸುವ ಯಾವ ವಸ್ತುವಾಗಲಿ ನಾಶವಾಗುವುದು. ಮತ್ತು ಎಲ್ಲಾ ಮನುಷ್ಯರೂ ಬಲಹೀನರಾಗುವರು; ಪ್ರಾಣಿಗಳೂ ಬಲಹೀನವಾಗುವವು.”

ಹೊಸ ಆಲಯದ ಕಾರ್ಯಾಚರಣೆ

12 ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗನೂ ಪ್ರಧಾನಯಾಜಕನೂ ಆದ ಯೆಹೋಶುವನಿಗೂ ಸಂದೇಶವನ್ನು ಕೊಡಲು ದೇವರಾದ ಯೆಹೋವನು ಹಗ್ಗಾಯನನ್ನು ಕಳುಹಿಸಿದನು. ಆದ್ದರಿಂದ ಇವರು ಮತ್ತು ಎಲ್ಲಾ ಜನರು ತಮ್ಮ ದೇವರಾದ ಯೆಹೋವನ ಸ್ವರವನ್ನು ಮತ್ತು ಪ್ರವಾದಿಯಾದ ಹಗ್ಗಾಯನ ಮಾತುಗಳನ್ನು ಕೇಳಿದರು ಮತ್ತು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.

13 ದೇವರು ತನ್ನ ಈ ಸಂದೇಶವನ್ನು ಜನರಿಗೆ ತಲುಪಿಸುವಂತೆ ಹಗ್ಗಾಯನನ್ನು ಉಪಯೋಗಿಸಿದನು. ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮ್ಮೊಂದಿಗಿದ್ದೇನೆ.”

14 ಬಳಿಕ ದೇವರಾದ ಯೆಹೋವನು ಆಲಯವನ್ನು ಕಟ್ಟುವಂತೆ ಜನರನ್ನು ಪ್ರೇರೇಪಿಸಿದನು. ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನು ಯೆಹೂದ ಪ್ರಾಂತ್ಯದ ರಾಜ್ಯಪಾಲನಾಗಿದ್ದನು. ಯೆಹೋವನು ಅವನನ್ನು ಪ್ರೇರೇಪಿಸಿದನು. ಯೆಹೋಚಾದಾಕನ ಮಗನಾದ ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಯೆಹೋವನು ಅವನನ್ನು ಪ್ರೇರೇಪಿಸಿದನು ಅಲ್ಲದೆ ಯೆಹೋವನು ಆಲಯವನ್ನು ಕಟ್ಟಲು ಎಲ್ಲಾ ಜನರನ್ನು ಪ್ರೋತ್ಸಾಹಿಸಿದನು. ಆದ್ದರಿಂದ ಅವರೆಲ್ಲರೂ ತಮ್ಮ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ಪ್ರಾರಂಭಿಸಿದರು. 15 ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸದಲ್ಲಿ ಕಟ್ಟುವ ಕಾರ್ಯವನ್ನು ಪ್ರಾರಂಭಿಸಿದರು.

ಲೂಕ 20:1-8

ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 21:23-27; ಮಾರ್ಕ 11:27-33)

20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.

ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International