Revised Common Lectionary (Semicontinuous)
ರಚನೆಗಾರ: ದಾವೀದ.
145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
2 ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
3 ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
4 ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
5 ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
ಪ್ರಧಾನ ಯಾಜಕನಾದ ಯೆಹೋಶುವನು ಕಿರೀಟ ಹೊಂದುವನು
9 ಆಗ ತಿರುಗಿ ನಾನು ಯೆಹೋವನಿಂದ ಸಂದೇಶವನ್ನು ಪಡಕೊಂಡೆನು. 10 ಆತನು ಹೇಳಿದ್ದೇನೆಂದರೆ, “ಹೆಲ್ದಾಯ, ತೋಬೀಯ ಮತ್ತು ಯೆದಾಯ ಇವರು ಬಾಬಿಲೋನಿನಿಂದ ಸೆರೆಯಾಳುಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿರಿ. 11 ಆ ಬೆಳ್ಳಿಬಂಗಾರಗಳಿಂದ ಒಂದು ಕಿರೀಟವನ್ನು ಮಾಡಿ ಯೆಹೋಶುವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ: (ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಇವನ ತಂದೆ ಯೆಹೋಜಾದಾಕನು.) 12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ಕೊಂಬೆ ಎಂಬ ಒಬ್ಬಾತನು ಇದ್ದಾನೆ.
ಆತನು ಬೆಳೆದು ಬಲಿಷ್ಠನಾಗುವನು.
ಆತನು ದೇವಾಲಯವನ್ನು ಕಟ್ಟುವನು.
13 ಆತನು ದೇವಾಲಯವನ್ನು ಕಟ್ಟುವನು
ಮತ್ತು ಗೌರವವನ್ನು ಹೊಂದುವನು.
ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜ್ಯವನ್ನು ಆಳುವನು.
ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತುಕೊಂಡಿರುವನು.
ಅವರಿಬ್ಬರೂ ಸಮಾಧಾನದಿಂದ ಕೆಲಸ ಮಾಡುವರು.
14 ಜನರು ಸ್ಮರಿಸಿಕೊಳ್ಳುವಂತೆ ಅವರು ಆ ಕಿರೀಟವನ್ನು ಆಲಯದೊಳಗೆ ಇಡುವರು. ಅದು ಹೆಲ್ದಾಯ, ತೋಬೀಯ, ಯೆದಾಯ ಮತ್ತು ಚೆಫನ್ಯನ ಮಗನಾದ ಹೇನ್‌ನಿಗೆ ಘನತೆಯನ್ನು ತರುವುದು.”
15 ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.
ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ
10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.
14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.
17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”
22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International