Revised Common Lectionary (Semicontinuous)
ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.
142 ನಾನು ಯೆಹೋವನಿಗೆ ಮೊರೆಯಿಡುವೆನು;
ಯೆಹೋವನನ್ನು ಕೂಗಿಕೊಳ್ಳುವೆನು.
2 ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
ಆತನಿಗೆ ಅರಿಕೆಮಾಡಿಕೊಳ್ಳುವೆನು.
3 ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
4 ನಾನು ಸುತ್ತಮುತ್ತ ನೋಡಿದರೂ
ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
5 ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಆಶ್ರಯಸ್ಥಾನವೂ ನೀನೇ,
ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
7 ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
ನೀತಿವಂತರು ನನ್ನೊಂದಿಗೆ ಕೊಂಡಾಡುವರು.
ಯಾವಾಗಲೂ ಯೆಹೋವನಲ್ಲಿ ಸಂತೋಷಿಸು
17 ಅಂಜೂರದ ಮರಗಳಲ್ಲಿ ಅಂಜೂರದ ಹಣ್ಣು ಬೆಳೆಯದಿದ್ದರೂ
ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳು ಬೆಳೆಯದಿದ್ದರೂ
ಎಣ್ಣೆಮರಗಳಲ್ಲಿ ಆಲೀವ್ ಕಾಯಿಗಳು ಬೆಳೆಯದಿದ್ದರೂ
ಹೊಲದಲ್ಲಿ ಪೈರು ಬೆಳೆಯದಿದ್ದರೂ
ಹಟ್ಟಿಯಲ್ಲಿ ಯಾವ ಕುರಿಗಳು ಇಲ್ಲದಿದ್ದರೂ
ಕೊಟ್ಟಿಗೆಯೊಳಗೆ ಯಾವ ಪಶುಗಳು ಇಲ್ಲದಿದ್ದರೂ
18 ನಾನು ಯೆಹೋವನಲ್ಲಿ ಸಂತೋಷಿಸುವೆನು.
ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.
19 ನನ್ನ ಒಡೆಯನಾದ ಯೆಹೋವನು ನನಗೆ ಬಲವನ್ನು ಕೊಡುವನು.
ಜಿಂಕೆಯಂತೆ ವೇಗವಾಗಿ ಓಡಲು ನನಗೆ ಸಹಾಯ ಮಾಡುವನು.
ಪರ್ವತಗಳಲ್ಲಿ ನನ್ನನ್ನು ಸುರಕ್ಷಿತವಾಗಿ ನಡೆಸುವನು.
ಸಂಗೀತ ನಿರ್ದೇಶಕನಿಗೆ. ತಂತಿವಾದ್ಯಗಳಿಂದ ಹಾಡತಕ್ಕದ್ದು.
ದೇವರು ಕೊಡುವ ವರಗಳನ್ನು ಉಪಯೋಗಿಸಿರಿ
(ಮತ್ತಾಯ 25:14-30)
11 ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು. 12 ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ[a] ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು. 13 ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು. 14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.
15 “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು. 16 ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು. 17 ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.
18 “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು. 19 ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.
20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ. 21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.
22 “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ. 23 ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು. 24 ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.
25 “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.
26 “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು. 27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”
Kannada Holy Bible: Easy-to-Read Version. All rights reserved. © 1997 Bible League International