Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಹಬಕ್ಕೂಕ 1:1-4

ಯೆಹೋವನಿಗೆ ಹಬಕ್ಕೂಕನ ದೂರು

ಪ್ರವಾದಿಯಾದ ಹಬಕ್ಕೂಕನಿಗೆ ಕೊಡಲ್ಪಟ್ಟ ಸಂದೇಶ.

ಯೆಹೋವನೇ, ನಾನು ನಿನ್ನಿಂದ ಸಹಾಯವನ್ನು ಕೇಳುತ್ತಲೇ ಇದ್ದೇನೆ. ನನ್ನ ಮೊರೆಯನ್ನು ಯಾವಾಗ ಕೇಳುವೆ? ನಾನು ಹಿಂಸೆಯ ವಿಷಯವಾಗಿ ನಿನ್ನನ್ನು ಕೂಗಿದರೂ ನೀನು ಏನೂ ಮಾಡಲಿಲ್ಲ. ಜನರು ವಸ್ತುಗಳನ್ನು ಕದ್ದುಕೊಂಡು ಇತರರನ್ನು ಗಾಯಗೊಳಿಸುತ್ತಿದ್ದಾರೆ. ಜನರು ಜಗಳ ಮಾಡುತ್ತಾ ಕಾದಾಡುತ್ತಿದ್ದಾರೆ. ಇಂಥಾ ಭಯಂಕರ ಸಂಗತಿಗಳನ್ನು ನೋಡುವಂತೆ ಯಾಕೆ ಮಾಡುವೆ. ಕಾನೂನು ಬಲಹೀನವಾಗಿದೆ. ಅದು ಸರಿಯಾದ ನ್ಯಾಯಕೊಡುವದಿಲ್ಲ. ದುಷ್ಚರು ಶಿಷ್ಟರ ಮೇಲೆ ವ್ಯಾಜ್ಯವಾಡಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಕಾನೂನು ನ್ಯಾಯವಾಗಿಯೇ ಇಲ್ಲ. ನ್ಯಾಯಕ್ಕೆ ಜಯವಿಲ್ಲ.

ಹಬಕ್ಕೂಕ 2:1-4

“ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
    ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”

ಕೀರ್ತನೆಗಳು 119:137-144

137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
    ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
    ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
    ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
    ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
    ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
    ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
    ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
    ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.

2 ಥೆಸಲೋನಿಕದವರಿಗೆ 1:1-4

ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲನು, ಸಿಲ್ವಾನನು ಮತ್ತು ತಿಮೊಥೆಯನು ಬರೆಯುವ ಪತ್ರ.

ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮಗಿರಲಿ.

ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.

2 ಥೆಸಲೋನಿಕದವರಿಗೆ 1:11-12

11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.

ಲೂಕ 19:1-10

ಜಕ್ಕಾಯ

19 ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು. ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು. ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ. ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.

ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.

ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.

ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.

ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. 10 ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International