Revised Common Lectionary (Semicontinuous)
137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.
ಉತ್ತಮ ಕೊಂಬೆ
14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’”[a]
17 ಯೆಹೋವನು ಹೀಗೆನ್ನುತ್ತಾನೆ: “ಯಾವಾಗಲೂ ದಾವೀದನ ವಂಶದವನೊಬ್ಬನು ಸಿಂಹಾಸನಾರೂಢನಾಗಿದ್ದುಕೊಂಡು ಇಸ್ರೇಲರನ್ನು ಆಳುವನು. 18 ಯಾವಾಗಲೂ ಲೇವಿವಂಶದವರೇ ಯಾಜಕರಾಗಿರುವರು. ಆ ಯಾಜಕರು ಸದಾಕಾಲ ನನ್ನ ಎದುರಿನಲ್ಲಿ ನಿಂತುಕೊಂಡು ಸರ್ವಾಂಗಹೋಮ, ಧಾನ್ಯಸಮರ್ಪಣೆ ಮತ್ತು ಯಜ್ಞಗಳನ್ನು ಮಾಡುವರು.”
19 ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು. 20 ಯೆಹೋವನು ಹೀಗೆ ಹೇಳಿದನು: “ಹಗಲು ಮತ್ತು ರಾತ್ರಿಗಳ ಜೊತೆ ನಾನೊಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವುಗಳು ಶಾಶ್ವತವಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಬಹುದಾದರೆ 21 ನೀವು ದಾವೀದನ ಮತ್ತು ಲೇವಿಯರ ಜೊತೆ ನಾನು ಮಾಡಿಕೊಂಡ ಒಡಂಬಡಿಕೆಯನ್ನೂ ಬದಲಾಯಿಸಬಹುದು. ಆಗ ದಾವೀದನ ವಂಶದವರು ರಾಜರಾಗಲಾರರು ಮತ್ತು ಲೇವಿಯರ ವಂಶದವರು ಯಾಜಕರಾಗಲಾರರು. 22 ಆದರೆ ನಾನು ನನ್ನ ಸೇವಕನಾದ ದಾವೀದನಿಗೂ ಲೇವಿಯರಿಗೂ ಅಸಂಖ್ಯಾತ ಸಂತಾನವನ್ನು ಕೊಡುತ್ತೇನೆ. ಅವರು ಆಕಾಶದ ನಕ್ಷತ್ರಗಳಂತೆಯೂ ಸಮುದ್ರದ ತೀರದ ಮರಳಿನಂತೆಯೂ ಅಸಂಖ್ಯಾತರಾಗುವರು.”
23 ಯೆರೆಮೀಯನು ಯೆಹೋವನಿಂದ ಈ ಸಂದೇಶವನ್ನು ಪಡೆದನು: 24 “ಯೆರೆಮೀಯನೇ, ಜನರು ಏನು ಹೇಳಿದರೆಂಬುದನ್ನು ಕೇಳಲಿಲ್ಲವೇ? ‘ಯೆಹೋವನು ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಎರಡು ಕುಟುಂಬಗಳನ್ನು ಆರಿಸಿಕೊಂಡನು; ಆದರೆ ಈಗ ಅವರನ್ನು ತಿರಸ್ಕರಿಸಿದ್ದಾನೆ.’ ಎಂದು ಅವರು ಹೇಳುತ್ತಿದ್ದಾರೆ. ಅನ್ಯಜನರು ನನ್ನ ಜನರನ್ನು ಎಷ್ಟು ದ್ವೇಷಿಸುತ್ತಾರೆಂದರೆ, ಅವರು ಒಂದು ಜನಾಂಗವಾಗಿ ಮುಂದುವರಿಯುವುದು ಅವರಿಗೆ ಇಷ್ಟವೇ ಇಲ್ಲ.”
25 ಯೆಹೋವನು ಹೀಗೆನ್ನುತ್ತಾನೆ: “ಹಗಲಿರುಳುಗಳ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆ ಸ್ಥಿರವಾಗಿಲ್ಲದಿದ್ದರೆ ಮತ್ತು ಭೂಮ್ಯಾಕಾಶಗಳಿಗೆ ನಾನು ಕಟ್ಟಳೆಗಳನ್ನೇ ವಿಧಿಸಿಲ್ಲದಿದ್ದರೆ 26 ಅವರನ್ನು ತ್ಯಜಿಸಬಹುದೇನೋ! ಯಾಕೋಬನ ಸಂತಾನದವರನ್ನು ತ್ಯಜಿಸಿ ದಾವೀದನ ವಂಶದವರು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ಆಳದಂತೆ ಮಾಡಬಹುದೇನೋ! ಆದರೆ ದಾವೀದನು ನನ್ನ ಸೇವಕ. ನಾನು ಅವರಿಗೆ ಕರುಣೆ ತೋರೇ ತೋರುವೆನು; ಅವರಿಗೆ ಒಳ್ಳೆಯದಾಗುವಂತೆ ಮಾಡೇ ಮಾಡುವೆನು.”
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನಾನು ದೇವರ ಚಿತ್ತಾನುಸಾರ ಅಪೊಸ್ತಲನಾಗಿದ್ದೇನೆ. ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಇಡೀ ಅಖಾಯ ಸೀಮೆಯಲ್ಲಿರುವ ದೇವಜನರೆಲ್ಲರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ತಿಮೊಥೆಯನೊಡನೆ ಸೇರಿ ಬರೆಯುತ್ತಿದ್ದೇನೆ.
2 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
3 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ದೇವರು ಕನಿಕರದಿಂದ ತುಂಬಿರುವ ತಂದೆಯಾಗಿದ್ದಾನೆ. ಆತನು ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆ. 4 ನಮಗೆ ಸಂಕಷ್ಟವಿರುವಾಗಲೆಲ್ಲಾ ಆತನು ನಮ್ಮನ್ನು ಸಂತೈಸುತ್ತಾನೆ; ಸಂಕಷ್ಟಗಳಲ್ಲಿರುವ ಇತರ ಜನರನ್ನು ಸಂತೈಸಲು ಇದರ ಮೂಲಕ ನಾವು ಸಹ ಶಕ್ತರಾಗುತ್ತೇವೆ. ದೇವರು ನಮ್ಮನ್ನು ಸಂತೈಸುವಂತೆಯೇ ನಾವು ಸಹ ಅವರನ್ನು ಸಂತೈಸಬಲ್ಲವರಾಗುತ್ತೇವೆ. 5 ನಾವು ಕ್ರಿಸ್ತನ ಅನೇಕ ಬಾಧೆಗಳಲ್ಲಿ ಪಾಲುಗಾರರಾಗುತ್ತೇವೆ. ಅದೇ ರೀತಿಯಲ್ಲಿ, ಕ್ರಿಸ್ತನ ಮೂಲಕ ಹೇರಳವಾದ ಆದರಣೆಯು ನಮಗೆ ಬರುತ್ತದೆ. 6 ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. 7 ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.
8 ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. 9 ನಿಜವಾಗಿಯೂ ನಾವು ಸಾಯುತ್ತೇವೆಂದು ನಮ್ಮ ಹೃದಯಗಳಲ್ಲಿ ನಂಬಿಕೊಂಡೆವು. ನಾವು ನಮ್ಮಲ್ಲಿ ಭರವಸೆ ಇಡದಂತೆಯೂ ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡಬೇಕೆಂತಲೂ ಇದಾಯಿತು. 10 ಮರಣದ ಈ ಮಹಾ ಅಪಾಯಗಳಿಂದ ದೇವರು ನಮ್ಮನ್ನು ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಆತನಲ್ಲಿ ಭರವಸೆ ಇಟ್ಟಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. 11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.
Kannada Holy Bible: Easy-to-Read Version. All rights reserved. © 1997 Bible League International