Revised Common Lectionary (Semicontinuous)
ತುತಿಗೀತೆ. ರಚನೆಗಾರರು: ಕೋರಹೀಯರು.
87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
2 ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
3 ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.
4 ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
5 ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
6 ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.
7 ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
“ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.
ಯೆಹೂದಕ್ಕೆ ಒಂದು ಹೊಸ ಜೀವಿತದ ವಾಗ್ದಾನ
17 “ಆಗ ನಾನು ನಿಮ್ಮ ದೇವರಾದ ಯೆಹೋವನು ಎಂದು ಅರಿತುಕೊಳ್ಳುವಿರಿ.
ನಾನು ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ವಾಸಿಸುವೆನು.
ಜೆರುಸಲೇಮ್ ಪರಿಶುದ್ಧವಾಗುವದು.
ಪರದೇಶಿಗಳು ಇನ್ನು ಮುಂದೆ ಅದನ್ನು ದಾಟಿಹೋಗುವುದಿಲ್ಲ.
18 ಆ ದಿವಸ ಸಿಹಿ ದ್ರಾಕ್ಷಾರಸವು ಬೆಟ್ಟಗಳಿಂದ ಹರಿಯುವುದು.
ಬೆಟ್ಟಗಳಲ್ಲಿ ಹಾಲು ಹರಿಯುವುದು.
ಮತ್ತು ಯೆಹೂದದ ಬತ್ತಿದ ನದಿಗಳಲ್ಲಿ ನೀರು ತುಂಬಿ ಹರಿಯುವದು.
ಯೆಹೋವನ ಆಲಯದಿಂದ ಬುಗ್ಗೆಯು ಹೊರಡುವದು.
ಅಕಾಸಿಯ ಕಣಿವೆಗೆ ನೀರನ್ನು ಕೊಡುವದು.
19 ಈಜಿಪ್ಟ್ ಬರಿದಾಗುವದು.
ಎದೋಮು ಬೆಂಗಾಡಾಗುವದು.
ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು.
ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.
20 ಆದರೆ ಯೆಹೂದದಲ್ಲಿ ಯಾವಾಗಲೂ ಜನರು ವಾಸಿಸುವರು.
ಅನೇಕ ತಲೆಮಾರಿನವರೆಗೆ ಜನರು ಜೆರುಸಲೇಮಿನಲ್ಲಿ ವಾಸಿಸುವರು.
ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ
28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.
29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.
30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.
31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”
ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.
ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.
Kannada Holy Bible: Easy-to-Read Version. All rights reserved. © 1997 Bible League International