Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆರೆಮೀಯ 31:27-34

27 ಯೆಹೋವನು ಹೀಗೆ ನುಡಿದನು: “ಇಸ್ರೇಲ್ ಮತ್ತು ಯೆಹೂದ ವಂಶಗಳು ಬೆಳೆಯುವದಕ್ಕೆ ನಾನು ಸಹಾಯ ಮಾಡುವ ದಿನಗಳು ಬರುತ್ತಿವೆ. ಸಸಿಗಳನ್ನು ನೆಟ್ಟ ಮೇಲೆ ಅವುಗಳನ್ನು ನೋಡಿಕೊಳ್ಳುವ ಹಾಗೆ ಅವರ ಮಕ್ಕಳು ಮತ್ತು ಅವರ ಪಶುಗಳು ಬೆಳೆಯುವದಕ್ಕೂ ನಾನು ಸಹಾಯ ಮಾಡುತ್ತೇನೆ. 28 ಪೂರ್ವಕಾಲದಲ್ಲಿ, ಇಸ್ರೇಲ್ ಮತ್ತು ಯೆಹೂದಗಳ ಮೇಲೆ ನಾನು ಗಮನವಿಟ್ಟಿದ್ದೆನು. ಆದರೆ ನಾನು ಅವರನ್ನು ತೆಗೆದುಹಾಕುವ ಸಮಯಕ್ಕಾಗಿ ಕಾದುಕೊಂಡಿದ್ದೆ. ನಾನು ಅವರನ್ನು ಕೆಡವಿದೆ; ಅವರನ್ನು ಹಾಳುಮಾಡಿದೆ. ಅವರಿಗೆ ಅನೇಕ ಕಷ್ಟಗಳನ್ನು ಕೊಟ್ಟೆ. ಆದರೆ ಈಗ ಅವರನ್ನು ಅಭಿವೃದ್ಧಿಪಡಿಸುವದಕ್ಕಾಗಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ಅವರ ಕಡೆಗೆ ಗಮನಹರಿಸುತ್ತೇನೆ” ಇದು ಯೆಹೋವನ ನುಡಿ.

29 “‘ಹುಳಿದ್ರಾಕ್ಷಿ ತಿಂದವರು ತಂದೆತಾಯಿಗಳು!
    ರುಚಿ ಕಂಡದ್ದು ಅವರ ಮಕ್ಕಳು!’

ಎಂಬ ಗಾದೆಯನ್ನು ಆಗ ಜನರು ಬಳಸುವ ಅವಶ್ಯಕತೆ ಇರುವದಿಲ್ಲ. 30 ಪ್ರತಿಯೊಬ್ಬನು ತನ್ನ ಪಾಪದ ನಿಮಿತ್ತವೇ ಸಾಯುವನು. ಹುಳಿದ್ರಾಕ್ಷಿಯನ್ನು ತಿಂದವನೇ ಅದರ ರುಚಿಯನ್ನು ಕಾಣುವನು.”

ಹೊಸ ಒಡಂಬಡಿಕೆ

31 ಯೆಹೋವನು ಹೀಗೆಂದನು: “ನಾನು ಇಸ್ರೇಲರೊಂದಿಗೂ ಮತ್ತು ಯೆಹೂದ್ಯರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಮಯ ಬರುತ್ತಿದೆ. 32 ಈ ಒಡಂಬಡಿಕೆ ನಾನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತಲ್ಲ. ನಾನು ಅವರ ಕೈಹಿಡಿದು ಈಜಿಪ್ಟಿನಿಂದ ಹೊರತಂದಾಗ ಮಾಡಿಕೊಂಡ ಒಡಂಬಡಿಕೆಯದು. ನಾನು ಅವರ ಒಡೆಯನಾಗಿದ್ದೆ. ಆದರೆ ಅವರು ಒಡಂಬಡಿಕೆಯನ್ನು ಮುರಿದರು.” ಇದು ಯೆಹೋವನ ನುಡಿ.

33 ಯೆಹೋವನು ಹೀಗೆನ್ನುತ್ತಾನೆ: “ಭವಿಷ್ಯದಲ್ಲಿ ಇಸ್ರೇಲಿನ ಜನರೊಂದಿಗೆ ನಾನು ಈ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. ನಾನು ನನ್ನ ಉಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು; ಅವುಗಳನ್ನು ಅವರ ಹೃದಯಗಳ ಮೇಲೆ ಬರೆಯುವೆನು. ನಾನು ಅವರ ದೇವರಾಗಿರುವೆನು, ಅವರು ನನ್ನ ಜನರಾಗಿರುವರು. 34 ತಮ್ಮ ನೆರೆಮನೆಯವರಿಗೂ ತಮ್ಮ ಬಂಧುಬಳಗದವರಿಗೂ ಯಾರೂ ಯೆಹೋವನ ಬಗ್ಗೆ ಹೇಳಿಕೊಡಬೇಕಾಗಿಲ್ಲ. ಯಾಕೆಂದರೆ ಅತಿ ಕನಿಷ್ಠರಿಂದ ಅತಿ ಪ್ರಮುಖರವರೆಗೆ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು. ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಕ್ಷಮಿಸುವೆನು. ನಾನು ಅವರ ಪಾಪಗಳನ್ನು ಮರೆತುಬಿಡುವೆನು.” ಇದು ಯೆಹೋವನ ನುಡಿ.

ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

2 ತಿಮೊಥೆಯನಿಗೆ 3:14-4:5

14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ. 16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. 17 ಆದ್ದರಿಂದ ದೇವರ ಸೇವಕರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.

ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.

ಲೂಕ 18:1-8

ತನ್ನ ಜನರಿಗೆ ದೇವರ ಉತ್ತರ

18 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”

ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International