Revised Common Lectionary (Semicontinuous)
94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
2 ಇಡೀಲೋಕದ ನ್ಯಾಯಾಧಿಪತಿ ನೀನೇ.
ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
3 ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
4 ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
5 ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
6 ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
7 ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.
8 ದುಷ್ಟರೇ, ನೀವು ಮೂಢರಾಗಿದ್ದೀರಿ!
ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
9 ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.
12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.
16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.
20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.
18 “ಯೆಹೂದವೇ, ಆ ಭಯಂಕರ ದಿನಗಳು ಬಂದಾಗ ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ,
ಎಂದು ಯೆಹೋವನು ಹೇಳಿದನು.
19 ಯೆಹೂದದ ಜನರು ನಿನ್ನನ್ನು,
‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು.
ಆಗ ಅವರಿಗೆ ಹೀಗೆ ಉತ್ತರಕೊಡು:
‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ,
ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ.
ಆದ್ದರಿಂದಲೇ ನೀವು ಪರದೇಶದಲ್ಲಿ
ಪರದೇಶಿಯರ ಸೇವೆಯನ್ನು ಮಾಡುವಿರಿ.’”
20 ಯೆಹೋವನು ಹೀಗೆನ್ನುತ್ತಾನೆ: “ಈ ಸಂದೇಶವನ್ನು ಯಾಕೋಬನ ಜನಾಂಗದವರಿಗೆ ಸಾರಿರಿ.
ಈ ಸಂದೇಶವನ್ನು ಯೆಹೂದ ಜನಾಂಗಕ್ಕೆ ಹೇಳಿರಿ:
21 ಬುದ್ಧಿ ಇಲ್ಲದ ಮೂರ್ಖಜನರೇ,
ಈ ಸಂದೇಶವನ್ನು ಕೇಳಿರಿ.
ನಿಮಗೆ ಕಣ್ಣುಗಳಿವೆ ಆದರೆ ನೀವು ನೋಡುವದಿಲ್ಲ,
ನಿಮಗೆ ಕಿವಿಗಳಿವೆ ಆದರೆ ನೀವು ಕೇಳುವದಿಲ್ಲ.
22 ನೀವು ನನಗೆ ಅಂಜುವುದಿಲ್ಲವೇ?”
ಇದು ಯೆಹೋವನ ಸಂದೇಶ:
“ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ?
ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ.
ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ.
ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು.
ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.
23 ಯೆಹೂದದ ಜನರು ಹಟಮಾರಿಗಳಾಗಿದ್ದಾರೆ.
ಅವರು ನನ್ನ ವಿರುದ್ಧ ಹೋಗುವದಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಅವರು ನನ್ನಿಂದ ತಿರುಗಿ ಬಹಳ ದೂರ ಹೋಗಿಬಿಟ್ಟಿದ್ದಾರೆ.
24 ಯೆಹೂದದ ಜನರು,
‘ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯಿಂದಿರಬೇಕು.
ಆತನು ನಮಗೆ ಸರಿಸಮಯದಲ್ಲಿ ಮುಂಗಾರು ಮತ್ತು ಹಿಂಗಾರುಮಳೆ ಸುರಿಸುತ್ತಾನೆ.
ಸರಿಸಮಯಕ್ಕೆ ಫಸಲನ್ನು ಬರಮಾಡುತ್ತಾನೆ’ ಎಂದು ತಮ್ಮ ಹೃದಯದಲ್ಲಿ ಅಂದುಕೊಳ್ಳುವದಿಲ್ಲ.
25 ಯೆಹೂದದ ಜನರೇ, ನೀವು ತಪ್ಪುಗಳನ್ನು ಮಾಡಿರುವಿರಿ.
ಆದ್ದರಿಂದಲೇ ಮಳೆಬೆಳೆಗಳು ಆಗಿಲ್ಲ.
ನಿಮ್ಮ ಪಾಪಗಳಿಂದಾಗಿ ಯೆಹೋವನ ಆ ಉತ್ತಮ ಕಾಣಿಕೆಗಳನ್ನು ನೀವು ಸವಿಯಲಾಗಲಿಲ್ಲ.
26 ನಮ್ಮ ಜನರಲ್ಲಿ ದುಷ್ಟರಿದ್ದಾರೆ.
ಅವರು ಪಕ್ಷಿಗಳ ಬಲೆಯನ್ನು ಮಾಡುವ ಬಲೆಗಾರರಂತಿದ್ದಾರೆ.
ಅವರು ಬಲೆಗಳನ್ನು ಬೀಸುತ್ತಾರೆ.
ಆದರೆ ಅವರು ಹಿಡಿಯುವುದು ಪಕ್ಷಿಗಳನ್ನಲ್ಲ, ಮನುಷ್ಯರನ್ನೇ.
27 ಪಕ್ಷಿಗಳಿಂದ ತುಂಬಿರುವ ಪಂಜರದಂತೆ
ಈ ಕೇಡಿಗರ ಮನೆಗಳು ಸುಳ್ಳುಮೋಸಗಳಿಂದ ತುಂಬಿವೆ.
ಅವರ ಸುಳ್ಳುಮೋಸಗಳು ಅವರನ್ನು ಶ್ರೀಮಂತರನ್ನಾಗಿಯೂ ಶಕ್ತಿಶಾಲಿಗಳನ್ನಾಗಿಯೂ ಮಾಡಿವೆ.
28 ಅವರು ಮಾಡಿದ ದುಷ್ಕೃತ್ಯಗಳಿಂದ ಅವರು ಬೆಳೆದಿದ್ದಾರೆ, ಕೊಬ್ಬಿದ್ದಾರೆ.
ಅವರು ಮಾಡುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ.
ಅವರು ಅನಾಥ ಮಕ್ಕಳ ಪಕ್ಷವಹಿಸಿ ಮಾತನಾಡುವದಿಲ್ಲ.
ಅವರು ಅನಾಥರಿಗೆ ಸಹಾಯ ಮಾಡುವದಿಲ್ಲ.
ಅವರು ದಿಕ್ಕಿಲ್ಲದವರಿಗೆ ನ್ಯಾಯ ದೊರೆಯದಂತೆ ಮಾಡುವರು.
29 ಇವುಗಳ ನಿಮಿತ್ತ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೆ?”
ಯೆಹೋವನು ಹೀಗೆನ್ನುತ್ತಾನೆ:
“ಇಂಥ ಜನಾಂಗವನ್ನು ನಾನು ದಂಡಿಸಬೇಕೆಂಬುದು ನಿಮಗೆ ಗೊತ್ತು.
ನಾನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.”
30 ಯೆಹೋವನು, “ಯೆಹೂದ ಪ್ರದೇಶದಲ್ಲಿ ಭಯಂಕರವಾದ
ಮತ್ತು ಅಸಹ್ಯವಾದ ಸಂಗತಿಗಳು ನಡೆದಿವೆ.
31 ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ.
ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ.[a]
ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ.
ಆದರೆ ದಂಡನೆಯ ಸಮಯ ಬಂದಾಗ
ನೀವು ಏನು ಮಾಡುವಿರಿ?” ಎಂದನು.
8 ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ.(A) 9 ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.
10 ಆದರೆ ಪ್ರಭುವು ಮತ್ತೆ ಪ್ರತ್ಯಕ್ಷನಾಗುವ ದಿನವು ಕಳ್ಳನು ಬರುವಂತೆ ಅನಿರೀಕ್ಷಿತವಾಗಿ ಬರುತ್ತದೆ. ಆಕಾಶವು ಮಹಾ ಘೋಷದೊಂದಿಗೆ ಅದೃಶ್ಯವಾಗುತ್ತದೆ. ಆಕಾಶಮಂಡಲದಲ್ಲಿರುವ ಎಲ್ಲಾ ಸೃಷ್ಟಿಗಳು ಬೆಂಕಿಯಿಂದ ನಾಶವಾಗುತ್ತವೆ. ಈ ಲೋಕವೂ ಅದರಲ್ಲಿರುವ ಸಮಸ್ತವೂ ಸುಟ್ಟುಹೋಗುತ್ತದೆ. 11 ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು. 12 ನೀವು ದೇವರ ದಿನಕ್ಕಾಗಿ ಅಪೇಕ್ಷಿಸುತ್ತಾ ಎದುರು ನೋಡುತ್ತಿರಬೇಕು. ಆ ದಿನವು ಬಂದಾಗ, ಆಕಾಶವು ಬೆಂಕಿಯಿಂದ ನಾಶವಾಗುತ್ತದೆ ಮತ್ತು ಆಕಾಶದಲ್ಲಿರುವ ಪ್ರತಿಯೊಂದೂ ಬೆಂಕಿಯಿಂದ ಕರಗಿ ಹೋಗುತ್ತದೆ. 13 ನಾವಾದರೋ ದೇವರು ವಾಗ್ದಾನ ಮಾಡಿರುವ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಿದ್ದೇವೆ. ನೀತಿಯು ಅವುಗಳಲ್ಲಿ ವಾಸವಾಗಿರುವುದು.
Kannada Holy Bible: Easy-to-Read Version. All rights reserved. © 1997 Bible League International