Revised Common Lectionary (Semicontinuous)
94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
2 ಇಡೀಲೋಕದ ನ್ಯಾಯಾಧಿಪತಿ ನೀನೇ.
ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
3 ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
4 ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
5 ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
6 ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
7 ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.
8 ದುಷ್ಟರೇ, ನೀವು ಮೂಢರಾಗಿದ್ದೀರಿ!
ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
9 ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.
12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.
16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.
20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.
ಯೆಹೂದಿಯರ ದುಷ್ಟತನ
5 ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮಿನ ಬೀದಿಗಳಲ್ಲಿ ಅತ್ತಿತ್ತ ತಿರುಗಾಡಿ ನೋಡಿರಿ; ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಿ ನೋಡಿರಿ. ಸತ್ಯಶೋಧಕನೂ ಪ್ರಾಮಾಣಿಕನೂ ಒಳ್ಳೆಯವನೂ ಆಗಿರುವ ಮನುಷ್ಯನು ಎಲ್ಲಿ ಸಿಕ್ಕುವನೋ ನೋಡಿ. ಕೇವಲ ಒಬ್ಬ ಒಳ್ಳೆಯವನಿದ್ದರೂ ನಾನು ಇಡೀ ಜೆರುಸಲೇಮನ್ನು ಕ್ಷಮಿಸುತ್ತೇನೆ. 2 ಜನರು ಆಣೆ ಮಾಡುವಾಗ ‘ಯೆಹೋವನಾಣೆ’ ಎಂದು ಹೇಳುವರು. ಆದರೆ ಅದು ಕೇವಲ ಬಾಯಿ ಮಾತಷ್ಟೇ ಹೊರತು ಯಥಾರ್ಥವಾದದ್ದಲ್ಲ.”
3 ಯೆಹೋವನೇ, ನೀನು ನಂಬಿಗಸ್ತರಾದ
ಜನರನ್ನು ಹುಡುಕುವೆ.
ನೀನು ಯೆಹೂದದ ಜನರಿಗೆ ಹೊಡೆದೆ,
ಆದರೆ ಅವರಿಗೆ ಅದರಿಂದ ನೋವಾಗಲಿಲ್ಲ.
ನೀನು ಅವರನ್ನು ಹಾಳುಮಾಡಿದೆ,
ಆದರೆ ಅದರಿಂದ ಅವರು ಪಾಠವನ್ನೂ ಕಲಿಯಲಿಲ್ಲ.
ಅವರು ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ.
ಅವರು ಬಹಳ ಹಟಮಾರಿಗಳಾದರು.
4 ಆದರೆ ನಾನು ನನ್ನೊಳಗೆ,
“ಕೇವಲ ಸಾಮಾನ್ಯ ಜನರು ಇಷ್ಟು ಮೂರ್ಖರಾಗಿರಬಹುದು.
ಅವರು ಯೆಹೋವನ ಮಾರ್ಗವನ್ನು ತಿಳಿದುಕೊಂಡಿಲ್ಲ.
ಸಾಮಾನ್ಯ ಜನರಿಗೆ ತಮ್ಮ ದೇವರ ಉಪದೇಶ ತಿಳಿದಿಲ್ಲ.
5 ನಾನು ಯೆಹೂದದ ಜನನಾಯಕರ ಹತ್ತಿರ ಹೋಗಿ
ಅವರೊಂದಿಗೆ ಮಾತನಾಡುವೆನು.
ಜನನಾಯಕರು ಯೆಹೋವನ ಮಾರ್ಗಗಳನ್ನು ನಿಶ್ಚಯವಾಗಿ ತಿಳಿದುಕೊಂಡಿರುವರು.
ಅವರು ತಮ್ಮ ಯೆಹೋವನ ನ್ಯಾಯವಿಧಿಗಳನ್ನು ಅರಿತುಕೊಂಡಿರುತ್ತಾರೆ” ಅಂದುಕೊಂಡೆನು.
ಆದರೆ ಈ ಜನನಾಯಕರುಗಳೆಲ್ಲಾ ದೇವರ ಸೇವೆಯನ್ನು ತೊರೆದುಬಿಟ್ಟಿದ್ದರು.
ಅವರು ದೇವರಿಗೆ ವಿರೋಧಿಗಳಾದರು.
6 ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು,
ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು.
ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ.
ನಗರದಿಂದ ಹೊರಗೆ ಬಂದವರನ್ನೆಲ್ಲ ಅದು ಚೂರುಚೂರು ಮಾಡುವುದು.
ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು.
ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ.
7 “ಯೆಹೂದವೇ, ನಾನು ನಿನ್ನನ್ನು ಏಕೆ ಕ್ಷಮಿಸಬೇಕು? ಒಂದು ಕಾರಣವನ್ನಾದರೂ ಕೊಡು.
ನಿನ್ನ ಮಕ್ಕಳು ನನ್ನನ್ನು ತೊರೆದಿದ್ದಾರೆ.
ದೇವರುಗಳೇ ಅಲ್ಲದ ವಿಗ್ರಹಗಳಿಗೆ ಅವರು ಹರಕೆ ಹೊತ್ತಿದ್ದಾರೆ.
ನಾನು ನಿನ್ನ ಮಕ್ಕಳಿಗೆ ಬೇಕಾದದ್ದನ್ನು ಕೊಟ್ಟೆ.
ಆದರೂ ಅವರು ನನಗೆ ನಂಬಿಗಸ್ತರಾಗಿ ಉಳಿಯಲಿಲ್ಲ.
ಅವರು ತಮ್ಮ ಹೆಚ್ಚಿನ ಸಮಯವನ್ನು ವೇಶ್ಯೆಯರ ಮನೆಗಳಲ್ಲಿ ಕಳೆದರು.
8 ಅವರು ಮನದಣಿಯುವ ಹಾಗೆ ತಿಂದು ಕೊಬ್ಬಿ ಕಾಮವೇರಿದ ಕುದುರೆಗಳಂತಿದ್ದಾರೆ.
ಅವರು ನೆರೆಮನೆಯವನ ಹೆಂಡತಿಯನ್ನು ಕೆನೆತು ಕರೆಯುವ ಕುದುರೆಯಂತಿದ್ದಾರೆ.
9 ಹೀಗೆ ಮಾಡಿದ್ದಕ್ಕಾಗಿ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೇ?”
ಯೆಹೋವನು ಹೇಳುತ್ತಾನೆ.
“ಹೌದು, ನಾನು ಇಂಥಾ ಜನಾಂಗವನ್ನು ಶಿಕ್ಷಿಸಬೇಕು.
ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.
10 “ಯೆಹೂದದ ದ್ರಾಕ್ಷಿಯ ಸಾಲುಬಳ್ಳಿಗಳ ಬಳಿಗೆ ಹೋಗಿರಿ, ಆ ಬಳ್ಳಿಗಳನ್ನು ಕತ್ತರಿಸಿರಿ.
ಆದರೆ ಅವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಡಿರಿ.
ಅವುಗಳ ಎಲ್ಲಾ ಕೊಂಬೆಗಳನ್ನು ಕತ್ತರಿಸಿಬಿಡಿ. ಏಕೆಂದರೆ, ಈ ಕೊಂಬೆಗಳು ಯೆಹೋವನಿಗೆ ಸಂಬಂಧಿಸಿಲ್ಲ.[a]
11 ಇಸ್ರೇಲ್ ಜನರೂ ಯೆಹೂದದ ಜನರೂ
ನನಗೆ ಎಲ್ಲಾ ವಿಧದಲ್ಲಿ ದ್ರೋಹವನ್ನು ಮಾಡಿರುವರು”
ಎಂದು ಯೆಹೋವನು ಹೇಳಿದನು.
12 “ಆ ಜನರು ಯೆಹೋವನ ಬಗ್ಗೆ ಸುಳ್ಳು ಹೇಳಿದ್ದಾರೆ. ‘ಯೆಹೋವನು ನಮಗೇನೂ ಮಾಡುವುದಿಲ್ಲ. ನಮಗೆ ಕೆಟ್ಟದ್ದೇನೂ ಆಗುವದಿಲ್ಲ. ಯಾವ ಸೈನ್ಯವೂ ನಮ್ಮ ಮೇಲೆ ಧಾಳಿ ಮಾಡುವುದಿಲ್ಲ; ನಾವೆಂದೂ ಉಪವಾಸಬೀಳುವದಿಲ್ಲ’ ಎಂದು ಅವರು ಹೇಳಿದ್ದಾರೆ.
13 ಆ ಸುಳ್ಳುಪ್ರವಾದಿಗಳು ಹೇಳಿದ್ದು ಕೇವಲ ಗಾಳಿಯ ಮಾತು.
ದೈವೋಕ್ತಿಯು ಅವರಲ್ಲಿಲ್ಲ, ಅವರಿಗೆ ಕೇಡಾಗುವದು.”
14 ಯೆಹೋವನೇ, ಸರ್ವಶಕ್ತನಾದ ದೇವರು. ಆತನು ಹೀಗೆನ್ನುತ್ತಾನೆ:
“ನಾನು ಶಿಕ್ಷಿಸುವದಿಲ್ಲವೆಂದು ಆ ಜನರು ಹೇಳಿದರು.
ಆದ್ದರಿಂದ ಯೆರೆಮೀಯನೇ, ನಾನು ನಿನಗೆ ಹೇಳುವ ಮಾತುಗಳು ಬೆಂಕಿಯಂತೆ ಇರುವವು.
ಅವರು ಸೌದೆಯಂತೆ ಆಗುವರು.
ಬೆಂಕಿಯು ಎಲ್ಲಾ ಸೌದೆಯನ್ನು ಸುಟ್ಟುಬಿಡುವದು.”
15 ಇದು ಯೆಹೋವನ ಮಾತು:
“ಇಸ್ರೇಲ್ ಮನೆತನವೇ, ನಿನ್ನ ಮೇಲೆ ಧಾಳಿ ಮಾಡುವುದಕ್ಕೆ ನಾನು ಬಹಳ ದೂರದಿಂದ ಒಂದು ಜನಾಂಗವನ್ನು ತರುತ್ತೇನೆ.
ಅದು ಒಂದು ಬಲಿಷ್ಠ ಜನಾಂಗ;
ಅದೊಂದು ಪುರಾತನ ಕಾಲದಿಂದ ಬಂದ ಜನಾಂಗ.
ಆ ಜನಾಂಗದವರು ಮಾತನಾಡುವ ಭಾಷೆ ನಿನಗೆ ತಿಳಿಯುವದಿಲ್ಲ.
ಅವರು ಹೇಳುವುದು ನಿನಗೆ ಅರ್ಥವಾಗುವದಿಲ್ಲ.
16 ಅವರ ಬತ್ತಳಿಕೆಗಳು ಬಾಯಿತೆರೆದ ಗೋರಿಗಳಂತಿವೆ.
ಅವರ ಜನರೆಲ್ಲ ಶೂರರಾದ ಸೈನಿಕರಾಗಿದ್ದಾರೆ.
17 ಆ ಸೈನಿಕರು ನೀವು ಬೆಳೆದ ಬೆಳೆಯನ್ನು ತಿಂದುಬಿಡುವರು.
ಅವರು ನಿಮ್ಮೆಲ್ಲ ಆಹಾರವನ್ನು ತಿಂದುಬಿಡುವರು.
ಅವರು ನಿಮ್ಮ ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ತಿಂದುಬಿಡುವರು (ನಾಶಮಾಡುವರು).
ಅವರು ನಿಮ್ಮ ದನಕರುಗಳ ಹಿಂಡುಗಳನ್ನು, ಕುರಿಗಳ ಮಂದೆಗಳನ್ನು ತಿಂದುಬಿಡುವರು.
ಅವರು ನಿಮ್ಮ ದ್ರಾಕ್ಷಿಗಳನ್ನೂ ನಿಮ್ಮ ಅಂಜೂರಗಳನ್ನೂ ತಿಂದುಬಿಡುವರು.
ಅವರು ತಮ್ಮ ಖಡ್ಗಗಳಿಂದ ನಿಮ್ಮ ಭದ್ರವಾದ ನಗರಗಳನ್ನು ನಾಶಮಾಡುವರು.
ನೀವು ನಂಬಿಕೊಂಡಿದ್ದ ನಿಮ್ಮ ಭದ್ರವಾದ ನಗರಗಳನ್ನು ಅವರು ಹಾಳುಮಾಡುತ್ತಾರೆ.”
18 ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು. 19 ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು. 20 ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು.
Kannada Holy Bible: Easy-to-Read Version. All rights reserved. © 1997 Bible League International