Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 14

ರಚನೆಗಾರ: ದಾವೀದ.

14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
    ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
    ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.

ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
    ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
    ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
    ಒಬ್ಬನಾದರೂ ಇಲ್ಲ.

ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
    ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
    ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
    ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
    ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.

ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
    ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
    ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.

ಯೆರೆಮೀಯ 13:20-27

20 ಜೆರುಸಲೇಮೇ, ಮುಖವೆತ್ತಿ ನೋಡು.
    ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು.
ನಿನ್ನ ಮಂದೆ[a] ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು.
    ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.
21 ಯೆಹೋವನು ನಿನಗೆ ಆ ಮಂದೆಯ ಲೆಕ್ಕವನ್ನೊಪ್ಪಿಸು ಎಂದು ಕೇಳಿದರೆ ಏನು ಹೇಳುವೆ?
    ಜನರಿಗೆ ದೇವರ ಬಗ್ಗೆ ತಿಳಿಸುವದು ನಿನ್ನ ಕರ್ತವ್ಯವಾಗಿತ್ತು.
ನಿನ್ನ ನಾಯಕರು ಜನರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.
    ಆದರೆ ಅವರು ತಮ್ಮ ಕೆಲಸವನ್ನು ಮಾಡಲಿಲ್ಲ.
ಆದ್ದರಿಂದ ನಿನಗೆ ಹೆಚ್ಚಿನ ನೋವು ಮತ್ತು ಕಷ್ಟಗಳು ಉಂಟಾಗುವವು.
    ಪ್ರಸವವೇದನೆಯಂಥ ನೋವು ನಿನಗಾಗುವುದು.
22 “ಇಂಥ ಕೇಡು ನನಗೆ ಏಕೆ ಉಂಟಾಯಿತು?”
    ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು.
ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು.
    ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು.
    ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು.
ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
23 ಕಪ್ಪಗಿರುವವನು ತನ್ನ ಚರ್ಮದ ಬಣ್ಣವನ್ನು ಬದಲಿಸಲಾರನು.
    ಚಿರತೆಯು ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು.
ಅದೇ ರೀತಿ, ಜೆರುಸಲೇಮ್ ನಗರವೇ, ನೀನು ಸಹ ಮಾರ್ಪಾಟು ಹೊಂದಿ ಒಳ್ಳೆಯದನ್ನು ಮಾಡಲಾರೆ.
ನೀನು ಯಾವಾಗಲೂ ಕೆಟ್ಟದ್ದನ್ನೇ ಮಾಡುವೆ.

24 “ನಾನು ನಿಮಗೆ ನಿಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯ ಮಾಡುತ್ತೇನೆ.
    ನೀವು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವಿರಿ.
    ನೀವು ಮರುಭೂಮಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತಾಗುವಿರಿ.
25 ನಿಮ್ಮ ಗತಿ ಹೀಗಾಗುವುದು.
    ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.”
ಇದು ಯೆಹೋವನ ನುಡಿ.
“ಏಕೆ ಹೀಗಾಗುವದು?
    ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ.
    ಸುಳ್ಳುದೇವರುಗಳನ್ನು ನಂಬಿದಿರಿ.
26 ಜೆರುಸಲೇಮ್ ನಗರವೇ, ನಾನು ನಿನ್ನ ಲಂಗವನ್ನು ನಿನ್ನ ಮುಖದವರೆಗೆ ಎತ್ತಿಬಿಡುತ್ತೇನೆ.
ಎಲ್ಲರೂ ನಿನ್ನನ್ನು ನೋಡುತ್ತಾರೆ.
    ನಿನಗೆ ನಾಚಿಕೆಯಾಗುತ್ತದೆ.
27 ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ.
    ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ.
    ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು.
ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ.
ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು.
    ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”

1 ತಿಮೊಥೆಯನಿಗೆ 1:1-11

ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತ ಯೇಸುವಿನ ಆಜ್ಞೆಗನುಸಾರವಾಗಿ ನಾನು ಅಪೊಸ್ತಲನಾದೆನು.

ನೀನು ನಂಬಿಕೆ ಉಳ್ಳವನಾಗಿರುವುದರಿಂದ ನನಗೆ ನಿಜವಾದ ಮಗನಂತಿರುವೆ.

ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ಕೃಪೆಯೂ ಕರುಣೆಯೂ ಶಾಂತಿಯೂ ನಿನಗೆ ಲಭಿಸಲಿ.

ದುರ್ಬೋಧನೆಗಳ ವಿರುದ್ಧ ಎಚ್ಚರಿಕೆ

ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು. ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು. ಪ್ರೀತಿಯೇ ಈ ಆಜ್ಞೆಯ ಗುರಿಯಾಗಿದೆ. ಈ ಪ್ರೀತಿಯನ್ನು ಹೊಂದಿಕೊಳ್ಳಲು ಜನರು ಶುದ್ಧಹೃದಯ ಉಳ್ಳವರಾಗಿರಬೇಕು; ಯೋಗ್ಯವಾದ ಕಾರ್ಯವನ್ನೇ ಮಾಡುವವರಾಗಿರಬೇಕು; ಮತ್ತು ನಿಷ್ಕಪಟವಾದ ನಂಬಿಕೆಯನ್ನು ಹೊಂದಿದವರಾಗಿರಬೇಕು. ಕೆಲವರು ಈ ಗುರಿತಪ್ಪಿ ನಿರರ್ಥಕವಾದ ವಿಷಯಗಳನ್ನು ಕುರಿತು ಮಾತಾಡುತ್ತಿದ್ದಾರೆ. ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ.

ಧರ್ಮಶಾಸ್ತ್ರವು ಒಳ್ಳೆಯದೇ. ಆದರೆ ಅದನ್ನು ನಿಷ್ಠೆಯಿಂದ ಅನುಸರಿಸಬೇಕು. ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ, 10 ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ. 11 ಈ ಉಪದೇಶವು ಜನರಿಗೆ ತಿಳಿಸುವುದಕ್ಕಾಗಿ ದೇವರು ನನಗೆ ಕೊಟ್ಟ ಸುವಾರ್ತೆಯ ಒಂದು ಭಾಗವಾಗಿದೆ. ಭಾಗ್ಯವಂತನಾದ ದೇವರಿಂದಲೇ ಈ ಮಹಿಮೆಯ ಸುವಾರ್ತೆಯು ಬಂದಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International