Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 139:1-6

ಸ್ತುತಿಗೀತೆ. ರಚನೆಗಾರ: ದಾವೀದ.

139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
    ಸಂಪೂರ್ಣವಾಗಿ ತಿಳಿದುಕೊಂಡಿರುವೆ.
ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
    ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
    ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
    ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
ನೀನು ನನ್ನ ಸುತ್ತಲೂ ಆವರಿಸಿರುವೆ;
    ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
    ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.

ಕೀರ್ತನೆಗಳು 139:13-18

13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
    ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
    ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.

15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
    ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
    ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
    ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
    ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.

ಯೆರೆಮೀಯ 17:14-27

ಯೆರೆಮೀಯನ ಮೂರನೆ ದೂರು

14 ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ
    ನಿಜವಾಗಿಯೂ ನಾನು ಗುಣಹೊಂದುತ್ತೇನೆ.
ನನ್ನನ್ನು ರಕ್ಷಿಸು,
    ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು.
ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.
15 ಯೆಹೂದದ ಜನರು ನನಗೆ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
    “ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ?
    ಆ ಸಂದೇಶವು ಸತ್ಯವಾಗುವುದನ್ನು ನಾವು ಈಗಲೇ ನೋಡೋಣ” ಎಂದು ಅವರನ್ನುತ್ತಾರೆ.

16 ಯೆಹೋವನೇ, ನಾನು ನಿನ್ನನ್ನು ಬಿಟ್ಟು ಓಡಿಹೋಗಲಿಲ್ಲ,
    ನಾನು ನಿನ್ನನ್ನು ಅನುಸರಿಸಿದೆನು.
    ನೀನು ಹೇಳಿದಂತೆ ನಾನು ಕುರುಬನಾದೆ.[a]
ಆ ಭಯಂಕರ ದಿನವು ಬರಲೆಂದು ನಾನು ಬಯಸಲಿಲ್ಲ.[b]
    ಯೆಹೋವನೇ, ನಾನು ಹೇಳಿದ್ದೆಲ್ಲ ನಿನಗೆ ಗೊತ್ತಿದೆ.
    ಈಗ ನಡೆಯುತ್ತಿರುವುದನ್ನೆಲ್ಲಾ ನೀನು ನೋಡುತ್ತಿರುವೆ.
17 ಯೆಹೋವನೇ, ನನ್ನನ್ನು ಹಾಳುಮಾಡಬೇಡ.
    ಕಷ್ಟ ಕಾಲದಲ್ಲಿ ನಾನು ನಿನ್ನನ್ನೇ ಅವಲಂಭಿಸಿರುತ್ತೇನೆ.
18 ಜನರು ನನ್ನನ್ನು ಹಿಂಸಿಸುತ್ತಿದ್ದಾರೆ.
ಆ ಜನರು ಲಜ್ಜೆಪಡುವಂತೆ ಮಾಡು.
    ನನ್ನನ್ನು ನಿರಾಶೆಗೊಳಿಸಬೇಡ.
ಆ ಜನರಿಗೆ ಭೀತಿಯುಂಟಾಗಲಿ,
    ಆದರೆ ನನಗೆ ಭಯವಾಗುವಂತೆ ಮಾಡಬೇಡ.
ನನ್ನ ವೈರಿಗಳಿಗೆ ಭಯಂಕರವಾದ ವಿನಾಶದ ದಿನವು ಬರುವಂತೆ ಮಾಡು.
    ಅವರನ್ನು ಮುರಿದುಬಿಡು, ಮತ್ತೆಮತ್ತೆ ಮುರಿದುಬಿಡು.

ಸಬ್ಬತ್‌ದಿನವನ್ನು ಪವಿತ್ರವಾಗಿಡಬೇಕು

19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ನೀನು ಹೋಗಿ ಯೆಹೂದದ ರಾಜರು ಸಂಚರಿಸುವ ಜೆರುಸಲೇಮಿನ ಜನರ ದ್ವಾರದಲ್ಲಿ[c] ನಿಲ್ಲು. ಜನರಿಗೆ ನನ್ನ ಸಂದೇಶವನ್ನು ಹೇಳು. ಆಮೇಲೆ ಜೆರುಸಲೇಮಿನ ಎಲ್ಲಾ ದ್ವಾರಗಳಿಗೆ ಹೋಗಿ ಹಾಗೆಯೇ ಮಾಡು.

20 “ಆ ಜನರಿಗೆ ಹೇಳು, ‘ಯೆಹೋವನ ಸಂದೇಶವನ್ನು ಕೇಳಿರಿ. ಯೆಹೂದದ ರಾಜರೇ, ಕೇಳಿರಿ. ಯೆಹೂದದ ಎಲ್ಲಾ ಜನರೇ ಕೇಳಿರಿ. ಈ ದ್ವಾರಗಳಿಂದ ಜೆರುಸಲೇಮಿಗೆ ಬರುವ ಜನರೇ, ನಾನು ಹೇಳುವದನ್ನು ಕೇಳಿರಿ! 21 ಯೆಹೋವನು ಹೀಗೆ ಹೇಳುತ್ತಾನೆ, ಸಬ್ಬತ್ ದಿನದಂದು ನೀವು ಯಾವ ಹೊರೆಯನ್ನೂ ಹೊತ್ತುಕೊಂಡು ಹೋಗದಂತೆ ಎಚ್ಚರವಹಿಸಿರಿ. ಸಬ್ಬತ್‌ದಿನದಂದು ಯಾವ ಹೊರೆಯನ್ನೂ ಜೆರುಸಲೇಮಿನ ದ್ವಾರಗಳ ಮೂಲಕ ತರಬೇಡಿರಿ. 22 ಸಬ್ಬತ್‌ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ. ಆ ದಿನ ಯಾವ ಕೆಲಸವನ್ನೂ ಮಾಡಬೇಡಿರಿ. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನ್ನು ಕೊಟ್ಟೆ. 23 ಆದರೆ ನಿಮ್ಮ ಪೂರ್ವಿಕರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಅವರು ನನಗೆ ಗಮನಕೊಡಲಿಲ್ಲ. ನಿಮ್ಮ ಪೂರ್ವಿಕರು ತುಂಬಾ ಮೊಂಡರಾಗಿದ್ದರು. ನಾನು ಅವರನ್ನು ದಂಡಿಸಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ನನ್ನ ಮಾತನ್ನು ಕೇಳಲಿಲ್ಲ. 24 ಆದರೆ ನೀವು ಎಚ್ಚರಿಕೆಯಿಂದ ನನ್ನ ಆಜ್ಞೆಯನ್ನು ಪಾಲಿಸಬೇಕು.’” ಇದು ಯೆಹೋವನ ನುಡಿ. “‘ನೀವು ಸಬ್ಬತ್‌ದಿನದಂದು ಜೆರುಸಲೇಮಿನ ದ್ವಾರಗಳ ಮೂಲಕ ಯಾವ ಭಾರವನ್ನೂ ತರಬಾರದು. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ಆ ದಿನ ನೀವು ಯಾವ ಕೆಲಸವನ್ನೂ ಮಾಡಬಾರದು.

25 “‘ನೀವು ಈ ಆಜ್ಞೆಯನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಜೆರುಸಲೇಮಿನ ದ್ವಾರಗಳಿಂದ ಬರುತ್ತಾರೆ. ಆ ರಾಜರು ರಥಗಳಲ್ಲಿಯೂ ಅಶ್ವಾರೂಢರಾಗಿಯೂ ಬರುವರು. ಯೆಹೂದದ ಮತ್ತು ಜೆರುಸಲೇಮಿನ ಜನನಾಯಕರುಗಳು ಆ ರಾಜರ ಜೊತೆಯಲ್ಲಿ ಬರುವರು. ಜೆರುಸಲೇಮ್ ಪಟ್ಟಣದಲ್ಲಿ ಜನರು ಯಾವಾಗಲೂ ವಾಸವಾಗಿರುವರು. 26 ಜೆರುಸಲೇಮಿಗೆ ಯೆಹೂದದ ಪಟ್ಟಣಗಳಿಂದ ಜನರು ಬರುವರು. ಅದರ ಸುತ್ತಲೂ ಇದ್ದ ಸಣ್ಣಸಣ್ಣ ಹಳ್ಳಿಗಳಿಂದ ಜನರು ಜೆರುಸಲೇಮಿಗೆ ಬರುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಿಂದ ಜನರು ಬರುವರು. ಪಶ್ಚಿಮ ಬೆಟ್ಟಗಳ ಇಳಿಜಾರು ಪ್ರದೇಶದಿಂದ ಮತ್ತು ಬೆಟ್ಟಪ್ರದೇಶದಿಂದ ಜನರು ಬರುವರು. ನೆಗೆವ್ ಪ್ರದೇಶದಿಂದ ಜನರು ಬರುವರು. ಆ ಜನರೆಲ್ಲರು ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ಧಾನ್ಯನೈವೇದ್ಯಗಳನ್ನು, ಧೂಪವನ್ನು ಮತ್ತು ಕೃತಜ್ಞತಾಯಜ್ಞಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಬರುವರು.

27 “‘ನೀವು ನನ್ನ ಮಾತನ್ನು ಕೇಳದಿದ್ದರೆ ಮತ್ತು ನನ್ನ ಆಜ್ಞೆಯನ್ನು ಪಾಲಿಸದಿದ್ದರೆ ಕೇಡಾಗುವುದು. ಸಬ್ಬತ್‌ದಿನದಲ್ಲಿ ಹೊರೆಗಳನ್ನು ಹೊತ್ತುಕೊಂಡು ಜೆರುಸಲೇಮಿಗೆ ಹೋದರೆ ನೀವು ಆ ದಿನವನ್ನು ಪವಿತ್ರದಿನವೆಂದು ಆಚರಿಸಿದಂತೆ ಆಗುವುದಿಲ್ಲ. ಆಗ ನಾನು ನಂದಿಸಲಾಗದ ಬೆಂಕಿಯನ್ನು ಹೊತ್ತಿಸುತ್ತೇನೆ. ಆ ಬೆಂಕಿಯು ಜೆರುಸಲೇಮಿನ ದ್ವಾರಗಳಲ್ಲಿ ಪ್ರಾರಂಭವಾಗಿ ಅರಮನೆಗಳನ್ನು ಸುಡುವವರೆಗೂ ಉರಿಯುತ್ತಿರುವುದು.’”

ಮತ್ತಾಯ 10:34-42

ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು

(ಲೂಕ 12:51-53; 14:26-27)

34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:

‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)

37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.

ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ

(ಮಾರ್ಕ 9:41)

40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International