Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
ಯೆರೆಮೀಯನು ಪುನಃ ದೇವರಲ್ಲಿ ದೂರುತ್ತಾನೆ
10 ನನ್ನ ತಾಯೀ, ನೀನು ಜನ್ಮಕೊಟ್ಟಿದ್ದಕ್ಕಾಗಿ
ನನಗೆ ದುಃಖವಾಗುತ್ತದೆ.
ಯೆರೆಮೀಯನಾದ ನಾನು ಇಡೀ ದೇಶದ ಜನರ ವಿರುದ್ಧವಾಗಿ
ವಾದಿಸುತ್ತಾ ನಿಂದಿಸುತ್ತಾ ಇರುವೆ.
ನಾನು ಯಾರಿಗೂ ಸಾಲವನ್ನು ಕೊಟ್ಟಿಲ್ಲ; ಸಾಲವನ್ನು ತೆಗೆದುಕೊಂಡಿಲ್ಲ.
ಆದರೆ ಪ್ರತಿಯೊಬ್ಬರು ನನ್ನನ್ನು ಶಪಿಸುತ್ತಾರೆ.
11 ದೇವರೇ, ನಿಜವಾಗಿಯೂ ನಾನು ನಿನ್ನ ಸೇವೆಯನ್ನು ಚೆನ್ನಾಗಿ ಮಾಡಿದ್ದೇನೆ.
ಕಷ್ಟದ ಕಾಲದಲ್ಲಿ ನನ್ನ ವೈರಿಗಳ ಬಗ್ಗೆ ನಾನು ನಿನ್ನಲ್ಲಿ ಪ್ರಾರ್ಥಿಸಿದ್ದೇನೆ.[a]
ಯೆರೆಮೀಯನಿಗೆ ದೇವರ ಉತ್ತರ
12 “ಯೆರೆಮೀಯನೇ, ಕಬ್ಬಿಣದ ತುಂಡನ್ನು ಪುಡಿ ಮಾಡಲು
ಯಾರಿಗೂ ಸಾಧ್ಯವಿಲ್ಲವೆಂಬುದು ನಿನಗೆ ಗೊತ್ತು.
ಉತ್ತರದಿಂದ[b] ಬರುವವನು ಕಬ್ಬಿಣದಂತಿದ್ದಾನೆ.
13 ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ.
ಆ ಭಂಡಾರಗಳನ್ನು ನಾನು ಬೇರೆಯವರಿಗೆ ಒಪ್ಪಿಸುತ್ತೇನೆ.
ಬೇರೆಯವರು ಆ ಭಂಡಾರಗಳನ್ನು ಹಣ ಕೊಟ್ಟು ತೆಗೆದುಕೊಳ್ಳಬೇಕಾಗಿಲ್ಲ.
ನಾನು ಅವರಿಗೆ ಅವುಗಳನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆ.
ಏಕೆಂದರೆ ಯೆಹೂದವು ಅನೇಕ ಪಾಪಗಳನ್ನು ಮಾಡಿದೆ.
ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪಮಾಡಿದೆ.
14 ಯೆಹೂದದ ಜನರೇ, ನಾನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವೆನು.
ಅವರು ನೀವೆಂದೂ ತಿಳಿಯದ ಪ್ರದೇಶದಿಂದ ಬಂದು ನಿಮ್ಮನ್ನು ಅಲ್ಲಿಗೆ ಸಾಗಿಸುವರು.
ನನಗೆ ಅತಿಕೋಪ ಬಂದಿದೆ.
ನನ್ನ ಕೋಪವು ಜ್ವಾಲೆಯಂತಿದೆ.
ಆ ಜ್ವಾಲೆಯಿಂದ ನೀವು ಸುಟ್ಟುಹೋಗುವಿರಿ.”
15 ಯೆಹೋವನೇ, ನನ್ನ ವಿಷಯ ನಿನಗೆ ಗೊತ್ತು.
ನನ್ನನ್ನು ಜ್ಞಾಪಕದಲ್ಲಿಟ್ಟುಕೊಂಡು ರಕ್ಷಿಸು.
ಜನರು ನನ್ನನ್ನು ತೊಂದರೆಗೀಡು ಮಾಡುತ್ತಿದ್ದಾರೆ.
ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು.
ನೀನು ಅವರೊಂದಿಗೆ ಬಹಳ ತಾಳ್ಮೆಯಿಂದ ವರ್ತಿಸುತ್ತಿರುವೆ.
ಅವರೊಂದಿಗೆ ತಾಳ್ಮೆಯಿಂದ ಇದ್ದು ನನ್ನನ್ನು ಹಾಳುಮಾಡಬೇಡ.
ನನ್ನ ಬಗ್ಗೆ ವಿಚಾರ ಮಾಡು.
ಯೆಹೋವನೇ, ನಿನಗಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆ ಎಂಬುದನ್ನು ಯೋಚಿಸು.
16 ನಿನ್ನ ಸಂದೇಶ ನನಗೆ ಬಂದಿತು.
ನಾನು ನಿನ್ನ ಮಾತುಗಳನ್ನು ಆಹಾರವನ್ನಾಗಿ ಮಾಡಿಕೊಂಡೆ.
ನಿನ್ನ ಸಂದೇಶದಿಂದ ನನಗೆ ತುಂಬಾ ಸಂತೋಷವಾಯಿತು.
ನಿನ್ನನ್ನು ಹೆಸರಿಡಿದು ಕರೆಯುವುದರಿಂದ ನನಗೆ ಹೆಚ್ಚಿನ ಸಂತೋಷವಾಗಿತ್ತು.
ನಿನ್ನ ಹೆಸರು ಸರ್ವಶಕ್ತನಾದ ಯೆಹೋವನು.
17 ತಮಾಷೆ ಮಾಡಿಕೊಂಡು ನಗುತ್ತಲಿದ್ದ
ಗುಂಪಿನಲ್ಲಿ ನಾನೆಂದೂ ಸೇರಲಿಲ್ಲ.
ನನ್ನ ಮೇಲೆ ಆದ ನಿನ್ನ ಪ್ರಭಾವದಿಂದ ನಾನೊಬ್ಬನೇ ಕುಳಿತುಕೊಂಡಿರುತ್ತಿದ್ದೆ.
ನನ್ನ ಸುತ್ತಮುತ್ತಲಿನ ದುಷ್ಟತನದ ಮೇಲೆ ನನ್ನಲ್ಲಿ ರೋಷವನ್ನು ತುಂಬಿದೆ.
18 ಹೀಗಿದ್ದರೂ ನನಗೇಕೆ ವ್ಯಥೆ ಉಂಟಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನನ್ನ ಗಾಯ ಏಕೆ ಗುಣವಾಗುತ್ತಿಲ್ಲ? ಏಕೆ ವಾಸಿಯಾಗುತ್ತಿಲ್ಲ ಎಂಬುದು ನನಗೆ ತಿಳಿಯದು.
ಯೆಹೋವನೇ, ನಿನ್ನಲ್ಲಿ ಬದಲಾವಣೆಯಾಗಿದೆ ಎಂದು ನನಗೆ ಅನಿಸುತ್ತಿದೆ.
ನೀನು ಪ್ರವಾಹ ನಿಂತುಹೋದ ನೀರಿನ ಬುಗ್ಗೆಯಂತಿರುವೆ.
19 ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನಾನು ನಿನ್ನನ್ನು ದಂಡಿಸುವುದಿಲ್ಲ.
ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನೀನು ನನ್ನ ಸೇವೆ ಮಾಡಬಹುದು.
ಹುರುಳಿಲ್ಲದ ಮಾತುಗಳನ್ನು ಬಿಟ್ಟು ಮುಖ್ಯವಾದ ವಿಷಯಗಳನ್ನು ಕುರಿತು ಮಾತನಾಡುವದಾದರೆ
ನೀನು ನನ್ನ ಪರವಾಗಿ ಮಾತನಾಡಬಹುದು.
ಯೆರೆಮೀಯನೇ, ಯೆಹೂದದ ಜನರು
ಬದಲಾವಣೆ ಹೊಂದಿ ನಿನ್ನಲ್ಲಿಗೆ ಬರಬೇಕು.
ಆದರೆ ನೀನು ಬದಲಾವಣೆ ಹೊಂದಿ ಅವರಂತೆ ಆಗಬಾರದು.
20 ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುತ್ತೇನೆ.
ನೀನು ತಾಮ್ರದ ಗೋಡೆಯಂತೆ ಗಟ್ಟಿಯಾಗಿರುವೆ
ಎಂದು ಆ ಜನರು ತಿಳಿದುಕೊಳ್ಳುವರು.
ಯೆಹೂದದ ಜನರು ನಿನ್ನ ವಿರುದ್ಧ ಹೋರಾಡುವರು.
ಆದರೆ ಅವರು ನಿನ್ನನ್ನು ಸೋಲಿಸಲಾರರು.
ಏಕೆಂದರೆ ನಾನೇ ನಿನ್ನ ಜೊತೆಯಲ್ಲಿ ಇದ್ದೇನೆ.
ನಾನು ನಿನಗೆ ಸಹಾಯಮಾಡುತ್ತೇನೆ ಮತ್ತು ನಾನು ನಿನ್ನನ್ನು ರಕ್ಷಿಸುತ್ತೇನೆ.”
ಇದು ಯೆಹೋವನಿಂದ ಬಂದ ನುಡಿ.
21 “ನಾನು ನಿನ್ನನ್ನು ಆ ದುಷ್ಟ ಜನರಿಂದ ರಕ್ಷಿಸುತ್ತೇನೆ.
ಆ ಜನರು ನಿನ್ನನ್ನು ಬೆದರಿಸುತ್ತಾರೆ.
ಆದರೆ ನಾನು ನಿನ್ನನ್ನು ಆ ಜನರಿಂದ ರಕ್ಷಿಸುತ್ತೇನೆ.”
25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International