Revised Common Lectionary (Semicontinuous)
10 ಯೆಹೋವನೇ, ನೀನು ಬಹುದೂರವಾಗಿರುವುದೇಕೆ?
ಕಷ್ಟಕಾಲದಲ್ಲಿ ನೀನು ಮರೆಯಾಗಿರುವುದೇಕೆ?
2 ದುಷ್ಟರು ಗರ್ವಿಷ್ಠರಾಗಿ ಬಡವರನ್ನು ಹಿಂದಟ್ಟಿ ಹೋಗುತ್ತಿದ್ದರೆ,
ಆ ದುಷ್ಟರ ಕುಯುಕ್ತಿಯಲ್ಲಿ ಅವರು ಸಿಕ್ಕಿಬೀಳುವರು.
3 ಕೆಡುಕರು ತಮ್ಮ ಇಷ್ಟವಾದ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುವರು.
ದುರಾಶೆಯುಳ್ಳ ಅವರು ದೇವರನ್ನು ಶಪಿಸುತ್ತಾ ಆತನ ಮೇಲೆ ತಮಗಿರುವ ದ್ವೇಷವನ್ನು ತೋರ್ಪಡಿಸಿಕೊಳ್ಳುವರು.
4 ಆ ದುಷ್ಟರು ಗರ್ವದಿಂದ ದೇವರನ್ನು ತೊರೆದುಬಿಡುವರು;
ದುಷ್ಟಾಲೋಚನೆಗಳನ್ನು ಮಾಡುತ್ತಾ ದೇವರಿಲ್ಲದಂತೆ ವರ್ತಿಸುವರು.
5 ಅವರು ಕುಯುಕ್ತಿಗಳನ್ನೇ ಮಾಡುತ್ತಾ ದೇವರ ಕಟ್ಟಳೆಗಳನ್ನೂ ಬುದ್ಧಿಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.[a]
ದೇವರ ವೈರಿಗಳು ಆತನ ಉಪದೇಶಗಳನ್ನು ಕಡೆಗಣಿಸುವರು.
6 ಅವರು, “ನಮ್ಮನ್ನು ಯಾವುದೂ ಕದಲಿಸದು;
ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.
7 ಅವರು ಯಾವಾಗಲೂ ಶಪಿಸುತ್ತಾರೆ;
ಕೆಟ್ಟ ಮಾತುಗಳನ್ನು ಆಡುತ್ತಾರೆ, ಕುಯುಕ್ತಿಗಳನ್ನು ಮಾಡುತ್ತಾರೆ.
8 ಅವರು ನಿರಪರಾಧಿಗಳನ್ನು ಹಿಡಿದು ಕೊಲ್ಲಲು
ಗುಪ್ತವಾದ ಸ್ಥಳಗಳಲ್ಲಿ ಅಡಗಿಕೊಂಡಿರುವರು; ಅಸಹಾಯಕರಿಗಾಗಿ ಎದುರುನೋಡುವರು.
9 ಅವರು ಬೇಟೆಯಾಡುವ ಸಿಂಹಗಳಂತಿದ್ದಾರೆ.
ಅವರು ನಿಸ್ಸಹಾಯಕರ ಮೇಲೆ ಆಕ್ರಮಣ ಮಾಡಿ ತಮ್ಮ ಬಲೆಗಳಲ್ಲಿ ಎಳೆದುಕೊಂಡು ಹೋಗುವರು.
10 ಆ ದುಷ್ಟರು ಕುಗ್ಗಿಹೋದವರನ್ನು
ಮತ್ತೆಮತ್ತೆ ಜಜ್ಜಿಹಾಕುವರು.
11 ಆದ್ದರಿಂದ ಆ ನಿಸ್ಸಹಾಯಕರು, “ದೇವರು ನಮ್ಮನ್ನು ಮರೆತುಬಿಟ್ಟಿದ್ದ್ದಾನೆ!
ನಮಗೆ ಶಾಶ್ವತವಾಗಿ ವಿಮುಖನಾಗಿದ್ದಾನೆ!
ನಮಗೆ ಸಂಭವಿಸುತ್ತಿರುವುದನ್ನು ಆತನು ನೋಡುವುದಿಲ್ಲ!” ಎಂದು ಯೋಚಿಸತೊಡಗುವರು.
12 ಯೆಹೋವನೇ, ಎದ್ದೇಳು, ಕಾರ್ಯನಿರತನಾಗು!
ದೇವರೇ, ಆ ದುಷ್ಟರನ್ನು ದಂಡಿಸು!
ನಿಸ್ಸಹಾಯಕರನ್ನು ಮರೆತುಬಿಡಬೇಡ!
13 ದುಷ್ಟರು ದೇವರಿಗೆ ವಿರೋಧವಾಗಿ ಎದ್ದಿರುವುದೇಕೆ?
ಆತನು ತಮ್ಮನ್ನು ದಂಡಿಸುವುದಿಲ್ಲವೆಂದು ಅವರು ಆಲೋಚಿಸಿಕೊಂಡಿರುವುದೇಕೆ?
14 ಯೆಹೋವನೇ, ಆ ದುಷ್ಟರ ಕ್ರೂರವಾದ ಕಾರ್ಯಗಳನ್ನೂ ದುಷ್ಕೃತ್ಯಗಳನ್ನೂ ನೀನು ಖಂಡಿತವಾಗಿ ನೋಡುವೆ.
ಅವುಗಳನ್ನು ನೋಡಿ ಕಾರ್ಯನಿರತನಾಗು.
ಅನೇಕ ತೊಂದರೆಗಳಲ್ಲಿ ಸಿಕ್ಕಿಕೊಂಡಿರುವವರು ಸಹಾಯಕ್ಕಾಗಿ ನಿನ್ನ ಬಳಿಗೆ ಬರುವರು.
ಅನಾಥರಿಗೆ ಸಹಾಯ ಮಾಡುವವನು ನೀನೇ.
ಆದ್ದರಿಂದ ಅವರಿಗೆ ಸಹಾಯಮಾಡು!
15 ಕೆಡುಕರನ್ನು ನಾಶಮಾಡು.
ನಿನ್ನ ದೇಶದಿಂದ ಅವರನ್ನು ನಿರ್ಮೂಲಮಾಡು!
16 ಯೆಹೋವನು ಸದಾಕಾಲವೂ ರಾಜನಾಗಿರುವನು.
ಆತನು ತನ್ನ ದೇಶದಿಂದ ಕೆಡುಕರನ್ನು ತೆಗೆದುಹಾಕುವನು.
17 ಯೆಹೋವನೇ, ಕುಗ್ಗಿಹೋದವರ ಕೋರಿಕೆಯನ್ನು ನೀನು ಕೇಳುವೆ.
ಅವರ ಮೊರೆಗೆ ಕಿವಿಗೊಟ್ಟು ಅವರನ್ನು ಪ್ರೋತ್ಸಾಹಿಸುವೆ.
18 ಯೆಹೋವನೇ, ಅನಾಥರನ್ನೂ ಕುಗ್ಗಿಸಲ್ಪಟ್ಟವರನ್ನೂ ಸಂರಕ್ಷಿಸು.
ಆಗ ಕೇವಲ ಮನುಷ್ಯರಿಂದ ಅವರಿಗೆ ಭಯವಾಗದು.
27 “ಯೆರೆಮೀಯನೇ, ನೀನು ಈ ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.
ಸಂಹಾರದ ತಗ್ಗು
29 “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ[a] ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು. 30 ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ. 31 ಯೆಹೂದದ ಜನರು ಬೆನ್‌ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ. 32 ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು. 33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ. 34 ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಈ ಪ್ರದೇಶವು ಬರಿದಾದ ಮರಳುಗಾಡಾಗುವದು.”
ಸಬ್ಬತ್‌ದಿನದಲ್ಲಿ ಗುಣಹೊಂದಿದ ವ್ಯಕ್ತಿ
(ಮತ್ತಾಯ 12:9-14; ಮಾರ್ಕ 3:1-6)
6 ಮತ್ತೊಂದು ಸಬ್ಬತ್‌ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಿಸಿದನು. ಬಲಗೈ ಬತ್ತಿಹೋಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. 7 ಯೇಸು ಅವನನ್ನು ವಾಸಿಮಾಡಿದರೆ, ಆತನ ಮೇಲೆ ತಪ್ಪು ಹೊರಿಸಬಹುದೆಂದು ಧರ್ಮೋಪದೇಶಕರು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. 8 ಆದರೆ ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಯೇಸುವು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಬಂದು ಇಲ್ಲಿ ನಿಂತುಕೊ” ಎಂದು ಹೇಳಿದನು. ಅವನು ಎದ್ದುಬಂದು ನಿಂತನು. 9 ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು.
10 ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು. 11 ಫರಿಸಾಯರು ಮತ್ತು ಧರ್ಮೋಪದೇಶಕರು ಬಹಳವಾಗಿ ಕೋಪಗೊಂಡರು. ಅವರು, “ನಾವು ಯೇಸುವಿಗೆ ಏನು ಮಾಡೋಣ?” ಎಂದು ತಮ್ಮತಮ್ಮೊಳಗೆ ಸಂಚುಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International