Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 10

10 ಯೆಹೋವನೇ, ನೀನು ಬಹುದೂರವಾಗಿರುವುದೇಕೆ?
    ಕಷ್ಟಕಾಲದಲ್ಲಿ ನೀನು ಮರೆಯಾಗಿರುವುದೇಕೆ?
ದುಷ್ಟರು ಗರ್ವಿಷ್ಠರಾಗಿ ಬಡವರನ್ನು ಹಿಂದಟ್ಟಿ ಹೋಗುತ್ತಿದ್ದರೆ,
    ಆ ದುಷ್ಟರ ಕುಯುಕ್ತಿಯಲ್ಲಿ ಅವರು ಸಿಕ್ಕಿಬೀಳುವರು.
ಕೆಡುಕರು ತಮ್ಮ ಇಷ್ಟವಾದ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುವರು.
    ದುರಾಶೆಯುಳ್ಳ ಅವರು ದೇವರನ್ನು ಶಪಿಸುತ್ತಾ ಆತನ ಮೇಲೆ ತಮಗಿರುವ ದ್ವೇಷವನ್ನು ತೋರ್ಪಡಿಸಿಕೊಳ್ಳುವರು.
ಆ ದುಷ್ಟರು ಗರ್ವದಿಂದ ದೇವರನ್ನು ತೊರೆದುಬಿಡುವರು;
    ದುಷ್ಟಾಲೋಚನೆಗಳನ್ನು ಮಾಡುತ್ತಾ ದೇವರಿಲ್ಲದಂತೆ ವರ್ತಿಸುವರು.
ಅವರು ಕುಯುಕ್ತಿಗಳನ್ನೇ ಮಾಡುತ್ತಾ ದೇವರ ಕಟ್ಟಳೆಗಳನ್ನೂ ಬುದ್ಧಿಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.[a]
    ದೇವರ ವೈರಿಗಳು ಆತನ ಉಪದೇಶಗಳನ್ನು ಕಡೆಗಣಿಸುವರು.
ಅವರು, “ನಮ್ಮನ್ನು ಯಾವುದೂ ಕದಲಿಸದು;
    ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.
ಅವರು ಯಾವಾಗಲೂ ಶಪಿಸುತ್ತಾರೆ;
    ಕೆಟ್ಟ ಮಾತುಗಳನ್ನು ಆಡುತ್ತಾರೆ, ಕುಯುಕ್ತಿಗಳನ್ನು ಮಾಡುತ್ತಾರೆ.
ಅವರು ನಿರಪರಾಧಿಗಳನ್ನು ಹಿಡಿದು ಕೊಲ್ಲಲು
    ಗುಪ್ತವಾದ ಸ್ಥಳಗಳಲ್ಲಿ ಅಡಗಿಕೊಂಡಿರುವರು; ಅಸಹಾಯಕರಿಗಾಗಿ ಎದುರುನೋಡುವರು.
ಅವರು ಬೇಟೆಯಾಡುವ ಸಿಂಹಗಳಂತಿದ್ದಾರೆ.
    ಅವರು ನಿಸ್ಸಹಾಯಕರ ಮೇಲೆ ಆಕ್ರಮಣ ಮಾಡಿ ತಮ್ಮ ಬಲೆಗಳಲ್ಲಿ ಎಳೆದುಕೊಂಡು ಹೋಗುವರು.
10 ಆ ದುಷ್ಟರು ಕುಗ್ಗಿಹೋದವರನ್ನು
    ಮತ್ತೆಮತ್ತೆ ಜಜ್ಜಿಹಾಕುವರು.
11 ಆದ್ದರಿಂದ ಆ ನಿಸ್ಸಹಾಯಕರು, “ದೇವರು ನಮ್ಮನ್ನು ಮರೆತುಬಿಟ್ಟಿದ್ದ್ದಾನೆ!
    ನಮಗೆ ಶಾಶ್ವತವಾಗಿ ವಿಮುಖನಾಗಿದ್ದಾನೆ!
    ನಮಗೆ ಸಂಭವಿಸುತ್ತಿರುವುದನ್ನು ಆತನು ನೋಡುವುದಿಲ್ಲ!” ಎಂದು ಯೋಚಿಸತೊಡಗುವರು.

12 ಯೆಹೋವನೇ, ಎದ್ದೇಳು, ಕಾರ್ಯನಿರತನಾಗು!
    ದೇವರೇ, ಆ ದುಷ್ಟರನ್ನು ದಂಡಿಸು!
    ನಿಸ್ಸಹಾಯಕರನ್ನು ಮರೆತುಬಿಡಬೇಡ!

13 ದುಷ್ಟರು ದೇವರಿಗೆ ವಿರೋಧವಾಗಿ ಎದ್ದಿರುವುದೇಕೆ?
    ಆತನು ತಮ್ಮನ್ನು ದಂಡಿಸುವುದಿಲ್ಲವೆಂದು ಅವರು ಆಲೋಚಿಸಿಕೊಂಡಿರುವುದೇಕೆ?
14 ಯೆಹೋವನೇ, ಆ ದುಷ್ಟರ ಕ್ರೂರವಾದ ಕಾರ್ಯಗಳನ್ನೂ ದುಷ್ಕೃತ್ಯಗಳನ್ನೂ ನೀನು ಖಂಡಿತವಾಗಿ ನೋಡುವೆ.
    ಅವುಗಳನ್ನು ನೋಡಿ ಕಾರ್ಯನಿರತನಾಗು.
ಅನೇಕ ತೊಂದರೆಗಳಲ್ಲಿ ಸಿಕ್ಕಿಕೊಂಡಿರುವವರು ಸಹಾಯಕ್ಕಾಗಿ ನಿನ್ನ ಬಳಿಗೆ ಬರುವರು.
    ಅನಾಥರಿಗೆ ಸಹಾಯ ಮಾಡುವವನು ನೀನೇ.
    ಆದ್ದರಿಂದ ಅವರಿಗೆ ಸಹಾಯಮಾಡು!

15 ಕೆಡುಕರನ್ನು ನಾಶಮಾಡು.
    ನಿನ್ನ ದೇಶದಿಂದ ಅವರನ್ನು ನಿರ್ಮೂಲಮಾಡು!
16 ಯೆಹೋವನು ಸದಾಕಾಲವೂ ರಾಜನಾಗಿರುವನು.
    ಆತನು ತನ್ನ ದೇಶದಿಂದ ಕೆಡುಕರನ್ನು ತೆಗೆದುಹಾಕುವನು.
17 ಯೆಹೋವನೇ, ಕುಗ್ಗಿಹೋದವರ ಕೋರಿಕೆಯನ್ನು ನೀನು ಕೇಳುವೆ.
    ಅವರ ಮೊರೆಗೆ ಕಿವಿಗೊಟ್ಟು ಅವರನ್ನು ಪ್ರೋತ್ಸಾಹಿಸುವೆ.
18 ಯೆಹೋವನೇ, ಅನಾಥರನ್ನೂ ಕುಗ್ಗಿಸಲ್ಪಟ್ಟವರನ್ನೂ ಸಂರಕ್ಷಿಸು.
    ಆಗ ಕೇವಲ ಮನುಷ್ಯರಿಂದ ಅವರಿಗೆ ಭಯವಾಗದು.

ಯೆರೆಮೀಯ 7:16-26

16 “ಯೆರೆಮೀಯನೇ, ನೀನು ಈ ಯೆಹೂದದ ಜನರಿಗಾಗಿ ಪ್ರಾರ್ಥಿಸಬೇಡ; ಇವರಿಗಾಗಿ ಮೊರೆಯಿಡಬೇಡ; ಇವರಿಗಾಗಿ ಬೇಡಿಕೊಳ್ಳಬೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನ್ನು ನಾನು ಕೇಳುವದಿಲ್ಲ. 17 ಆ ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತು. 18 ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌದೆಯನ್ನು ಆರಿಸುತ್ತಾರೆ. ತಂದೆಗಳು ಆ ಸೌಧೆಯಿಂದ ಬೆಂಕಿಯನ್ನು ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದಿ ಸ್ವರ್ಗದ ರಾಣಿಗಾಗಿ ಹೋಳಿಗೆಗಳನ್ನು ಮಾಡುತ್ತಾರೆ. ಈ ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ. ಅವರು ನನ್ನನ್ನು ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ. 19 ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡುಮಾಡುತ್ತಿಲ್ಲ, ಅವರು ತಮಗೇ ಕೇಡುಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು.

20 ಯೆಹೋವನು ಹೀಗೆಂದನು: “ನಾನು ಈ ಸ್ಥಳಕ್ಕೆ ವಿರೋಧವಾಗಿ ನನ್ನ ಕೋಪವನ್ನು ತೋರಿಸುವೆನು. ನಾನು ಜನರನ್ನೂ ಪ್ರಾಣಿಗಳನ್ನೂ ದಂಡಿಸುವೆನು. ಕಾಡಿನ ಮರಗಳನ್ನೂ ಹೊಲದ ಬೆಳೆಗಳನ್ನೂ ದಂಡಿಸುವೆನು. ನನ್ನ ಕೋಪವು ಉರಿಯುವ ಬೆಂಕಿಯಂತಿರುವದು; ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.”

ಯೆಹೋವನು ಯಜ್ಞಗಳಿಗಿಂತ ಹೆಚ್ಚಾಗಿ ವಿಧೇಯತೆಯನ್ನು ಅಪೇಕ್ಷಿಸುವನು

21 ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಬಂದಷ್ಟು ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಅರ್ಪಿಸಿರಿ. ಆ ಯಜ್ಞಗಳ ಮಾಂಸವನ್ನು ನೀವೇ ತಿನ್ನಿರಿ. 22 ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಬಗ್ಗೆಯಾಗಲಿ ಯಜ್ಞಗಳ ಬಗ್ಗೆಯಾಗಲಿ ಯಾವ ಆಜ್ಞೆಯನ್ನೂ ಕೊಟ್ಟಿಲ್ಲ. 23 ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.

24 “ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನ್ನೂ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಬರಲಿಲ್ಲ. 25 ನಿಮ್ಮ ಪೂರ್ವಿಕರು ಈಜಿಪ್ಟನ್ನು ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನ್ನ ಸೇವಕರನ್ನು ಕಳುಹಿಸಿದ್ದೇನೆ. ನನ್ನ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ. 26 ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನ್ನು ಮಾಡಿದರು.

ಪ್ರಕಟನೆ 3:7-13

ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.

“ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.

11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International