Revised Common Lectionary (Semicontinuous)
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
20 ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ?
ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು?
ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ.
ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”
21 “ನಾನು ಯೆಹೂದದ ಜನರೆದುರಿಗೆ ಸಮಸ್ಯೆಗಳನ್ನು ಒಡ್ಡುವೆನು.
ಅವುಗಳು ಜನರು ಎಡವಿಬೀಳುವ ಕಲ್ಲುಗಳಂತಾಗುವವು.
ತಂದೆಗಳೂ ಮಕ್ಕಳೂ ಅವುಗಳಿಂದ ಎಡವಿಬೀಳುವರು.
ಸ್ನೇಹಿತರು ಮತ್ತು ನೆರೆಹೊರೆಯವರು ಅವುಗಳಿಂದ ನಾಶವಾಗುವರು” ಅಂದನು.
22 ಯೆಹೋವನು ಹೇಳುವುದೇನೆಂದರೆ:
“ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಬರಲಿದೆ.
ಭೂಮಿಯ ಬಹುದೂರದ ಸ್ಥಳಗಳಿಂದ ಒಂದು ಮಹಾಜನಾಂಗವು ಬರಲಿದೆ.
23 ಆ ಸೈನಿಕರು ಬಿಲ್ಲುಗಳನ್ನು ಮತ್ತು ಈಟಿಗಳನ್ನು ಹಿಡಿದುಕೊಂಡಿದ್ದಾರೆ.
ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ.
ಅವರು ಬಲಶಾಲಿಗಳಾಗಿದ್ದಾರೆ.
ಅವರು ತಮ್ಮ ಕುದುರೆ ಹತ್ತಿ ಬರುವಾಗ ಸಮುದ್ರದ ಗರ್ಜನೆಯಂತೆ ಶಬ್ದ ಕೇಳಿಬರುತ್ತದೆ.
ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಬರುತ್ತಿದೆ.
ಆ ಸೈನ್ಯವು ನಿನ್ನ ಮೇಲೆ ಧಾಳಿಮಾಡಲು ಬರುತ್ತಿದೆ.”
24 ಆ ಸೈನ್ಯದ ಬಗ್ಗೆ ಸಮಾಚಾರವನ್ನು ನಾವು ಕೇಳಿದ್ದೇವೆ.
ಭಯದಿಂದ ನಾವು ಅಸಹಾಯಕರಾಗಿದ್ದೇವೆ.
ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ.
ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಬಳಲುತ್ತಿದ್ದೇವೆ.
25 ಊರ ಹೊರಗೆ ಹೋಗಬೇಡಿರಿ.
ರಸ್ತೆಗಳ ಮೇಲೆ ಹೋಗಬೇಡಿರಿ.
ಏಕೆಂದರೆ ಶತ್ರುವಿನ ಕೈಯಲ್ಲಿ ಖಡ್ಗವಿದೆ.
ಎಲ್ಲಾ ಕಡೆಗೂ ಅಪಾಯವಿದೆ.
26 ಅಯ್ಯೋ ನನ್ನ ಜನರೇ,
ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಹೊರಳಾಡಿರಿ.
ಸತ್ತವರಿಗಾಗಿ ದೊಡ್ಡ ಧ್ವನಿಯಲ್ಲಿ ರೋದಿಸಿರಿ.
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಬೋರ ಪ್ರಲಾಪ ಮಾಡಿರಿ.
ವಿನಾಶಕನು ತಕ್ಷಣ ನಮ್ಮ ಮೇಲೆರಗುವನು.
27 “ಯೆರೆಮೀಯನೇ, ನಾನು ನಿನ್ನನ್ನು
ಒಬ್ಬ ಲೋಹ ಪರೀಕ್ಷಕನನ್ನಾಗಿ ನೇಮಿಸಿದ್ದೇನೆ.
ನೀನು ನನ್ನ ಜನರನ್ನು ಪರೀಕ್ಷಿಸು.
ಅವರ ವ್ಯವಹಾರವನ್ನು ಅವಲೋಕಿಸು.
28 ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ;
ಅವರು ಬಹಳ ಹಟಮಾರಿಗಳಾಗಿದ್ದಾರೆ.
ಅವರು ಜನರ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ.
ಅವರು ಬಣ್ಣಗುಂದಿದ, ತುಕ್ಕುಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
29 ಅವರನ್ನು ತಿದ್ದುವದು ಬೆಳ್ಳಿಯನ್ನು ಪವಿತ್ರಗೊಳಿಸಲು ಪ್ರಯತ್ನ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು[a] ಭರದಿಂದ ಬೀಸಲು ಬೆಂಕಿಯು ಧಗಧಗಿಸಿತು.
ಆದರೆ ಆ ಬೆಂಕಿಯಿಂದ ಕೇವಲ ಸೀಸವು ಹೊರಬಂದಿತು.
ಬೆಳ್ಳಿಯನ್ನು ಶುದ್ಧೀಕರಿಸಲು ಮಾಡಿದ ಪ್ರಯತ್ನ ಕೇವಲ ವ್ಯರ್ಥವಾಯಿತು.
ಅದರಂತೆಯೇ ನನ್ನ ಜನರಿಂದ ದುಷ್ಟತನವನ್ನು ತೆಗೆಯಲಾಗಲಿಲ್ಲ.
30 ನನ್ನ ಜನರನ್ನು ‘ತಿರಸ್ಕರಿಸಲಾದ ಬೆಳ್ಳಿ’
ಎಂದು ಕರೆಯಲಾಗುವದು.
ಏಕೆಂದರೆ ಯೆಹೋವನು ಅವರನ್ನು ಸ್ವಿಕರಿಸಲಿಲ್ಲ.”
ಥೆಸಲೋನಿಕದಲ್ಲಿ ಪೌಲ ಸೀಲರು
17 ಪೌಲ ಸೀಲರು ಆಂಫಿಪೊಲಿ ಮತ್ತು ಅಪೊಲೋನಿಯ ಮಾರ್ಗವಾಗಿ ಪ್ರಯಾಣ ಮಾಡಿ ಥೆಸಲೋನಿಕ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. 2 ಪೌಲನು ಎಂದಿನಂತೆ ಯೆಹೂದ್ಯರನ್ನು ಭೇಟಿಯಾಗಲು ಈ ಸಭಾಮಂದಿರದೊಳಗೆ ಹೋದನು. ಅವನು ಮೂರು ವಾರಗಳವರೆಗೆ ಪ್ರತಿ ಸಬ್ಬತ್‌ದಿನದಂದು ಯೆಹೂದ್ಯರೊಂದಿಗೆ ಪವಿತ್ರ ಗ್ರಂಥದ ಆಧಾರದೊಡನೆ ಚರ್ಚಿಸಿ ವಿವರಿಸಿದನು. 3 ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಎದ್ದು ಬರಲೇಬೇಕಿತ್ತು ಎಂಬುದನ್ನು ತೋರಿಸಿಕೊಟ್ಟನು. “ನಾನು ನಿಮಗೆ ತಿಳಿಸುತ್ತಿರುವ ಈ ಯೇಸುವೇ ಕ್ರಿಸ್ತನು” ಎಂದು ಪೌಲನು ಸ್ಪಷ್ಟಪಡಿಸಿದನು. 4 ನಿಜದೇವರನ್ನು ಪ್ರೀತಿಸುತ್ತಿದ್ದ ಕೆಲವು ಮಂದಿ ಗ್ರೀಕರು ಮತ್ತು ಕೆಲವು ಮಂದಿ ಪ್ರಮುಖ ಸ್ತ್ರೀಯರು ಅಲ್ಲಿದ್ದರು. ಅವರಲ್ಲಿ ಅನೇಕರಿಗೆ ಮನವರಿಕೆಯಾಗಿ ಪೌಲ ಸೀಲರನ್ನು ಸೇರಿಕೊಂಡರು.
5 ಆದರೆ ನಂಬದೆಹೋದ ಯೆಹೂದ್ಯರು ಅಸೂಯೆಗೊಂಡರು. ಅವರು ಪಟ್ಟಣದಲ್ಲಿದ್ದ ಕೆಲವು ಕೆಡುಕರಿಗೆ ಹಣಕೊಟ್ಟು ಕರೆದುಕೊಂಡು ಬಂದರು. ಈ ಕೆಡುಕರು ಅನೇಕ ಜನರನ್ನು ಒಟ್ಟುಗೂಡಿಸಿ, ಪಟ್ಟಣದಲ್ಲಿ ಗಲಭೆ ಮಾಡಿದರು. ಜನರು ಪೌಲ ಸೀಲರನ್ನು ಹುಡುಕುತ್ತಾ ಯಾಸೋನನ ಮನೆಗೆ ಹೋದರು. ಅವರು ಪೌಲ ಸೀಲರನ್ನು ಜನರ ಮುಂದೆ ಹೊರಗೆ ಎಳೆದುಕೊಂಡು ಬರಬೇಕೆಂದಿದ್ದರು. 6 ಆದರೆ ಅವರು ಪೌಲ ಸೀಲರನ್ನು ಅಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ಯಾಸೋನನನ್ನೂ ಕೆಲವು ವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುಕೊಂಡು ಬಂದು, “ಈ ಜನರು (ಪೌಲ ಸೀಲರು) ಪ್ರಪಂಚದ ಎಲ್ಲಾ ಕಡೆಗಳಲ್ಲೂ ಗಲಭೆಯನ್ನು ಉಂಟುಮಾಡಿ ಈಗ ಇಲ್ಲಿಗೂ ಬಂದಿದ್ದಾರೆ! 7 ಯಾಸೋನನು ಇವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಇವರೆಲ್ಲರೂ ಸೀಸರನ ಕಾನೂನುಗಳನ್ನು ಉಲ್ಲಂಘಿಸುತ್ತಾರೆ ಮತ್ತು ‘ಯೇಸು’ ಎಂಬ ಮತ್ತೊಬ್ಬ ರಾಜನಿರುವನೆಂದು ಹೇಳುತ್ತಾರೆ” ಎಂದು ಕೂಗಿ ಹೇಳಿದರು.
8 ಈ ಸಂಗತಿಗಳನ್ನು ಕೇಳಿದ ನಗರಾಧಿಕಾರಿಗಳು ಮತ್ತು ಇತರರು ಬಹು ಗಲಿಬಿಲಿಗೊಂಡರು. 9 ಅವರು ಯಾಸೋನನಿಂದಲೂ ಇತರ ವಿಶ್ವಾಸಿಗಳಿಂದಲೂ ಜಾಮೀನು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International