Revised Common Lectionary (Semicontinuous)
ರಚನೆಗಾರ: ಆಸಾಫ.
74 ದೇವರೇ, ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವೆಯಾ?
ನಿನ್ನ ಜನರ ಮೇಲೆ ಇನ್ನೂ ಕೋಪದಿಂದಿರುವೆಯಾ?
2 ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ.
ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ.
ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.
3 ಬಹುಕಾಲದಿಂದ ಹಾಳುಬಿದ್ದಿರುವ ಕಟ್ಟಡಗಳ ಬಳಿಗೆ ಆಗಮಿಸು.
ಶತ್ರುವು ನಾಶಮಾಡಿದ ನಿನ್ನ ಪವಿತ್ರ ಸ್ಥಳಕ್ಕೆ ಹಿಂತಿರುಗಿ ಬಾ.
4 ಆಲಯದಲ್ಲಿ ಶತ್ರುಗಳು ಯುದ್ಧಾರ್ಭಟ ಮಾಡಿದರು.
ಆಲಯದಲ್ಲಿ ತಮ್ಮ ಧ್ವಜಾರೋಹಣ ಮಾಡಿ ತಮ್ಮ ಜಯವನ್ನು ಸೂಚಿಸಿದರು.
5 ಶತ್ರು ಸೈನಿಕರಾದರೋ ಕಳೆಗುದ್ದಲಿಯಿಂದ
ಕಳೆ ಕೀಳುತ್ತಿರುವ ಜನರಂತಿದ್ದಾರೆ.
6 ನಿನ್ನ ಆಲಯದ ಕೆತ್ತನೆ ಕೆಲಸಗಳನ್ನು ಅವರು ಕೊಡಲಿಗಳಿಂದಲೂ
ಮಚ್ಚುಗತ್ತಿಗಳಿಂದಲೂ ಕತ್ತರಿಸಿ ಹಾಕಿದರು.
7 ಆ ಸೈನಿಕರು ನಿನ್ನ ಪವಿತ್ರ ಸ್ಥಳವನ್ನು ಸುಟ್ಟು ನೆಲಸಮಮಾಡಿದರು.
ಆ ಆಲಯವು ನಿನ್ನ ನಾಮ ಘನತೆಗಾಗಿ ಕಟ್ಟಲ್ಪಟ್ಟಿತ್ತಲ್ಲಾ!
8 ನಮ್ಮನ್ನು ಸಂಪೂರ್ಣವಾಗಿ ಜಜ್ಜಿಹಾಕಲು ಶತ್ರುಗಳು ನಿರ್ಧರಿಸಿ
ದೇಶದ ಪ್ರತಿಯೊಂದು ಪವಿತ್ರ ಸ್ಥಳವನ್ನೂ ಸುಟ್ಟುಹಾಕಿದರು.
9 ನಮ್ಮ ಯಾವ ಚಿಹ್ನೆಗಳೂ ನಮಗೆ ಕಾಣಲಿಲ್ಲ.
ಪ್ರವಾದಿಗಳಲ್ಲಿ ಯಾರೂ ಉಳಿದಿಲ್ಲ.
ಯಾರಿಗೂ ದಿಕ್ಕೇ ತೋಚುತ್ತಿಲ್ಲ.
10 ದೇವರೇ, ಇನ್ನೆಷ್ಟರವರೆಗೆ ಶತ್ರುಗಳು ನಮ್ಮನ್ನು ಗೇಲಿಮಾಡುತ್ತಿರಬೇಕು?
ನಿನ್ನ ಹೆಸರಿಗೆ ಅವರು ಅವಮಾನ ಮಾಡುತ್ತಲೇ ಇರಬೇಕೇ?
11 ನೀನು ನಮ್ಮನ್ನು ಬಹು ಕಠಿಣವಾಗಿ ದಂಡಿಸಿದ್ದೇಕೆ?
ನಿನ್ನ ಮಹಾಶಕ್ತಿಯಿಂದ ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿರುವಿಯಲ್ಲಾ!
12 ದೇವರೇ, ಬಹುಕಾಲದಿಂದ ನೀನು ನಮ್ಮರಾಜ.
ಈ ದೇಶದಲ್ಲಿ ಅನೇಕ ಯುದ್ಧಗಳನ್ನು ಗೆಲ್ಲಲು ನೀನು ನಮಗೆ ಸಹಾಯಮಾಡಿದೆ.
13 ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ.
ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.
14 ಲಿವ್ಯಾತಾನನ ತಲೆಗಳನ್ನು ಜಜ್ಜಿಹಾಕಿ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡಿದಾತನು ನೀನೇ.
15 ತೊರೆಗಳೂ ನದಿಗಳೂ ಹರಿಯುವಂತೆ ಮಾಡುವಾತನು ನೀನೇ.
ನದಿಗಳನ್ನು ಒಣಗಿಸುವಾತನೂ ನೀನೇ.
16 ನೀನು ಹಗಲನ್ನೂ ರಾತ್ರಿಯನ್ನೂ ನಿನ್ನ ಹತೋಟಿಯಲ್ಲಿಟ್ಟುಕೊಂಡಿರುವೆ.
ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಮಾಡಿದಾತನು ನೀನೇ.
17 ಭೂಮಿಯ ಮೇಲೆ ಮೇರೆಗಳನ್ನು ಹಾಕಿರುವಾತನು ನೀನೇ.
ಬೇಸಿಗೆಕಾಲವನ್ನೂ ಚಳಿಗಾಲವನ್ನೂ ನಿರ್ಮಿಸಿದಾತನು ನೀನೇ.
18 ದೇವರೇ, ಇವುಗಳನ್ನೆಲ್ಲಾ ಜ್ಞಾಪಿಸಿಕೊ.
ವೈರಿಯು ನಿನಗೆ ಮಾಡಿದ ಅವಮಾನವನ್ನು ನೆನಸಿಕೊ!
ಆ ಮೂರ್ಖರು ನಿನ್ನ ನಾಮವನ್ನು ದ್ವೇಷಿಸುತ್ತಾರೆ.
19 ದೇವರೇ, ನಿನ್ನ ಪಾರಿವಾಳವನ್ನು ಆ ದುಷ್ಟ ಪ್ರಾಣಿಗಳು ತೆಗೆದುಕೊಳ್ಳದಿರಲಿ.
ನಿನ್ನ ಬಡಜನರನ್ನು ಮರೆತುಬಿಡಬೇಡ.
20 ನಿನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊ.
ಈ ದೇಶದ ಕತ್ತಲೆಯ ಸ್ಥಳಗಳಲ್ಲೆಲ್ಲಾ ಹಿಂಸೆಯೂ ತುಂಬಿಕೊಂಡಿದೆ.
21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ.
ಅವರಿಗೆ ಕೇಡಾಗಲು ಬಿಡಬೇಡ.
ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.
22 ದೇವರೇ, ಎದ್ದು ಹೋರಾಡು!
ನಿನಗೆ ಸವಾಲೊಡ್ಡಿದ ಆ ನಿಂದಕರನ್ನು ಜ್ಞಾಪಿಸಿಕೊ!
23 ನಿನ್ನ ವೈರಿಗಳ ಆರ್ಭಟವನ್ನು ಮರೆತುಬಿಡಬೇಡ.
ಅವರು ನಿನಗೆ ಪದೇಪದೇ ಅವಮಾನಮಾಡಿದರು.
24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು.
ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ. 25 ಆದ್ದರಿಂದ ಯೆಹೋವನು ತನ್ನ ಜನರ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ಯೆಹೋವನು ತನ್ನ ಕೈಗಳನ್ನೆತ್ತಿ ಅವರನ್ನು ಶಿಕ್ಷಿಸುವನು. ಆಗ ಪರ್ವತಗಳೂ ಹೆದರಿಕೊಳ್ಳುವವು; ಹೆಣಗಳು ಕಸದಂತೆ ರಸ್ತೆಗಳಲ್ಲಿ ಬಿದ್ದುಕೊಂಡಿರುವವು. ಆದರೆ ದೇವರು ಅವರ ಮೇಲೆ ಕೋಪಿಸಿಕೊಂಡೇ ಇರುವನು. ಜನರನ್ನು ಶಿಕ್ಷಿಸಲು ಆತನ ಕೈಗಳು ಮೇಲೆತ್ತಲ್ಪಟ್ಟಿರುವವು.
ಇಸ್ರೇಲರನ್ನು ಶಿಕ್ಷಿಸಲು ದೇವರು ಸೈನ್ಯವನ್ನು ತರುವನು
26 ಎದ್ದು ನೋಡು! ದೂರದೇಶದ ಜನಾಂಗಗಳಿಗೆ ದೇವರು ಗುರುತನ್ನು ಕೊಡುತ್ತಿದ್ದಾನೆ. ಆತನು ಧ್ವಜವನ್ನೆತ್ತಿ ಆ ಜನರನ್ನು ಸಿಳ್ಳುಹಾಕಿ ಕರೆಯುತ್ತಿದ್ದಾನೆ.
ಶತ್ರುಗಳು ದೂರದೇಶದಿಂದ ಬರುತ್ತಿದ್ದಾರೆ. ಅವರು ಬೇಗನೆ ನಿನ್ನ ದೇಶವನ್ನು ಪ್ರವೇಶಿಸುವರು. ಅವರು ಬಹುವೇಗವಾಗಿ ಬರುತ್ತಿದ್ದಾರೆ. 27 ಶತ್ರುಗಳು ಆಯಾಸಗೊಳ್ಳುವುದಿಲ್ಲ, ನೆಲಕ್ಕೆ ಬೀಳುವುದಿಲ್ಲ. ಅವರು ತೂಕಡಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ. ಅವರ ಸೊಂಟಪಟ್ಟಿಯು ಆಯುಧದೊಂದಿಗೆ ಯಾವಾಗಲೂ ಸಿದ್ಧವಾಗಿರುವುದು. ಅವರ ಪಾದರಕ್ಷೆಗಳ ದಾರವು ಎಂದಿಗೂ ತುಂಡಾಗುವದಿಲ್ಲ. 28 ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.
29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. 30 ಆದ್ದರಿಂದ ಸಮುದ್ರವು ಭೋರ್ಗರೆಯವಂತೆ ಆ ದಿನದಲ್ಲಿ ಗರ್ಜನೆಯಿರುವುದು. ಸೆರೆಹಿಡಿಯಲ್ಪಟ್ಟ ಜನರು ನೆಲದ ಕಡೆ ನೋಡುವರು. ಅಲ್ಲಿ ಬರೇ ಕತ್ತಲೆಯೇ. ಆ ದಟ್ಟವಾದ ಮೋಡಗಳಲ್ಲಿ ಎಲ್ಲವೂ ಕಪ್ಪಾಗಿಯೇ ಕಾಣುತ್ತದೆ.
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[a] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(A)”
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
Kannada Holy Bible: Easy-to-Read Version. All rights reserved. © 1997 Bible League International