Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80:1-2

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.

ಕೀರ್ತನೆಗಳು 80:8-19

ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
    ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
    ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
“ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
    ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
    ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
    ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11     ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
    ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
    ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
    ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
    ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
    ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
    ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಯೆಶಾಯ 3:18-4:6

18 ಆ ಸಮಯದಲ್ಲಿ ಆತನು ಅವರ ಎಲ್ಲಾ ವಸ್ತುಗಳನ್ನು ಅವರಿಂದ ತೆಗೆದುಬಿಡುವನು. ಅವರ ಕಾಲುಸರಗಳನ್ನು, ಸೂರ್ಯಚಂದ್ರಾಕಾರದ ಕೊರಳಿನ ಸರಗಳನ್ನು, 19 ಕಿವಿಯೋಲೆಗಳನ್ನು, ಕೈಬಳೆಗಳನ್ನು, ಸೆರಗುವಸ್ತ್ರಗಳನ್ನು, 20 ರುಮಾಲುಗಳನ್ನು, ಸೊಂಟಪಟ್ಟಿಯನ್ನು, ಪರಿಮಳದ್ರವ್ಯವನ್ನು, ತಾಯಿತಿಗಳನ್ನು, 21 ಮುದ್ರೆಯುಂಗುರವನ್ನು ಮತ್ತು ಮೂಗುತಿಗಳನ್ನು ತೆಗೆದುಬಿಡುವನು. 22 ಅವರ ನಯವಾದ ಮೇಲಂಗಿಗಳನ್ನು, ಮೇಲ್ಹೊದಿಕೆಗಳನ್ನು, ಶಾಲುಗಳನ್ನು, ಕೈಚೀಲಗಳನ್ನು, 23 ಕೈಗನ್ನಡಿಗಳನ್ನು, ಪೋಷಾಕುಗಳನ್ನು, ಮುಂಡಾಸಗಳನ್ನು ಮತ್ತು ಉದ್ದವಾದ ಶಾಲುಗಳನ್ನು ಅವರಿಂದ ತೆಗೆದುಬಿಡುವನು.

24 ಆ ಸಮಯದಲ್ಲಿ ಸ್ತ್ರೀಯರ ಪರಿಮಳದ್ರವ್ಯವು ಕೊಳೆತ ವಾಸನೆಯಿಂದ ಕೂಡಿರುವುದು. ಅವರು ಸೊಂಟಪಟ್ಟಿಯ ಬದಲಿಗೆ ಹಗ್ಗ ಕಟ್ಟಿಕೊಳ್ಳುವರು; ತಲೆಕೂದಲನ್ನು ಅಂದವಾಗಿ ಹೆಣೆದುಕೊಳ್ಳುವ ಬದಲು ಬೋಳಿಸಿಕೊಳ್ಳುವರು. ಈಗ ಅವರಿಗೆ ಆಧುನಿಕ ವಸ್ತ್ರಗಳಿರುವವು; ಆದರೆ ಆಗ ಅವರು ಶೋಕವಸ್ತ್ರಗಳನ್ನೇ ಧರಿಸುವರು. ಈಗ ಅವರು ಮುಖಗಳಿಗೆ ಸೌಂದರ್ಯದ ಬೊಟ್ಟುಗಳನ್ನು ಇಟ್ಟುಕೊಳ್ಳುವರು; ಆದರೆ ಆಗ ಅವರ ಚರ್ಮದಲ್ಲಿ ಸುಟ್ಟಕಲೆಗಳೇ ಇರುವವು.

25 ಆ ಸಮಯದಲ್ಲಿ ನಿಮ್ಮ ಗಂಡಸರೆಲ್ಲಾ ಖಡ್ಗದಿಂದ ಹತರಾಗುವರು. ನಿಮ್ಮ ವೀರರೆಲ್ಲರೂ ಯುದ್ಧದಲ್ಲಿ ಮಡಿಯುವರು. 26 ನಗರದ ಹೆಬ್ಬಾಗಿಲ ಬಳಿಯಲ್ಲಿ ಜನರು ಸೇರಿ ಬರುವಾಗ ರೋಧನವೂ ಶೋಕವೂ ಇರುತ್ತವೆ. ಇದ್ದುದನ್ನೆಲ್ಲಾ ಕಳೆದುಕೊಂಡ ಸ್ತ್ರೀಯಂತೆ ಜೆರುಸಲೇಮು ಸರ್ವವನ್ನೂ ಕಳೆದುಕೊಂಡು ನೆಲದ ಮೇಲೆ ಕುಳಿತು ರೋಧಿಸುವಳು.

ಆ ಸಮಯದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಗಂಡಸನ್ನು ಹಿಡಿದುಕೊಂಡು, “ನಮ್ಮ ಆಹಾರವನ್ನು ನಾವೇ ಸಂಪಾದಿಸಿಕೊಳ್ಳುತ್ತೇವೆ. ನಮ್ಮ ಬಟ್ಟೆಬರೆಗಳನ್ನು ನಾವೇ ಮಾಡಿಕೊಳ್ಳುತ್ತೇವೆ, ನಮ್ಮ ಕೆಲಸಗಳನ್ನೆಲ್ಲಾ ನಾವೇ ಮಾಡಿಕೊಳ್ಳುತ್ತೇವೆ. ನೀನು ನಮ್ಮನ್ನು ಮದುವೆಯಾಗು, ನಿನ್ನ ಹೆಸರನ್ನು ನಾವು ಇಟ್ಟುಕೊಳ್ಳುವಂತೆ ಮಾಡು. ದಯಮಾಡಿ ನಮ್ಮ ನಾಚಿಕೆಯನ್ನು ನಮ್ಮಿಂದ ತೊಲಗಿಸು” ಎಂದು ಹೇಳುವರು.

ಆ ಸಮಯದಲ್ಲಿ ಯೆಹೋವನ ಸಸಿ (ಯೆಹೂದವು) ಬಹಳ ಚಂದವಾಗಿಯೂ ದೊಡ್ಡದಾಗಿಯೂ ಇರುವುದು. ಆ ಸಮಯದಲ್ಲಿ, ಚೀಯೋನಿನಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ವಾಸಿಸುತ್ತಿರುವ ಜನರು ತಮ್ಮ ದೇಶದಲ್ಲಿ ಬೆಳೆಯುವ ಫಲಗಳಿಗಾಗಿ ತುಂಬಾ ಹೆಚ್ಚಳಪಡುವರು. ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.

ಚೀಯೋನಿನ ಸ್ತ್ರೀಯರ ಕಲ್ಮಷವನ್ನು ಯೆಹೋವನು ತೊಳೆದುಬಿಡುವನು. ಆತನು ಜೆರುಸಲೇಮಿನ ಮಧ್ಯದಲ್ಲಿರುವ ರಕ್ತವನ್ನು ತೊಳೆದುಬಿಡುವನು. ಆತನು ನ್ಯಾಯನೀತಿಗಳಿಂದ ತೀರ್ಪುನೀಡುವನು; ದಹಿಸುವ ಆತ್ಮನಿಂದ ಎಲ್ಲವನ್ನು ಶುದ್ಧಗೊಳಿಸುವನು. ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು. ಈ ಹೊದಿಕೆಯು ಸುರಕ್ಷಿತ ಸ್ಥಳದಂತಿರುವದು. ಅದು ಸೂರ್ಯನ ಶಾಖದಿಂದ ಅವರನ್ನು ರಕ್ಷಿಸುವದು. ಅದೇ ಸಮಯದಲ್ಲಿ ಸಣ್ಣ ದೊಡ್ಡ ಮಳೆಗಳಿಂದಲೂ ಆ ಹೊದಿಕೆಯು ರಕ್ಷಿಸುವದು.

ಮತ್ತಾಯ 24:15-27

15 “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು[a] ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.) 16 ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ. 18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.

19 “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ! 20 ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ. 21 ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.

22 “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.

23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ. 24 ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು. 25 ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.

26 “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ. 27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International