Revised Common Lectionary (Semicontinuous)
ರಚನೆಗಾರ: ದಾವೀದ.
11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?
2 ದುಷ್ಟರು ಬೇಟೆಗಾರರಂತಿದ್ದಾರೆ;
ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
3 ಅಸ್ತಿವಾರಗಳೇ ನಾಶವಾಗುತ್ತಿದ್ದರೆ
ನೀತಿವಂತನು ಏನು ಮಾಡಲಾದೀತು?
4 ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
5 ಯೆಹೋವನು ನೀತಿವಂತರಿಗಾಗಿ ಹುಡುಕುವನು.
ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
6 ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
7 ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
ನೀತಿವಂತರು ಆತನ ಮುಖವನ್ನು ನೋಡುವರು.
ಯೆಹೂದ ಮತ್ತು ಜೆರುಸಲೇಮಿಗೆ ದೈವಸಂದೇಶ
2 ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.
2 ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು
ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
3 ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು.
ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ.
ಯಾಕೋಬನ ದೇವರ ಆಲಯಕ್ಕೆ ಹೋಗೋಣ.
ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು.
ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು.
ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ
ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
4 ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಾಧೀಶನಾಗಿರುವನು.
ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು.
ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು;
ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು;
ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು.
ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು.
ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
Kannada Holy Bible: Easy-to-Read Version. All rights reserved. © 1997 Bible League International