Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಹೋಶೇಯ 11:1-11

ಇಸ್ರೇಲು ಯೆಹೋವನನ್ನು ಮರೆತುಬಿಟ್ಟಿದೆ

11 “ಯೆಹೋವನಾದ ನಾನು ಇಸ್ರೇಲನ್ನು ಸಣ್ಣ ಮಗುವಾಗಿದ್ದಾಗಲೇ ಪ್ರೀತಿಸಿದೆನು.
    ನನ್ನ ಮಗನನ್ನು ಈಜಿಪ್ಟಿನಿಂದ ಹೊರಕರೆದೆನು.
ಎಷ್ಟು ಹೆಚ್ಚಾಗಿ ನಾನು ಇಸ್ರೇಲರನ್ನು ಕರೆದೆನೋ
    ಅಷ್ಟೇ ಹೆಚ್ಚಾಗಿ ಅವರು ನನ್ನನ್ನು ತೊರೆದರು.
ಇಸ್ರೇಲರು ಬಾಳನ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿದರು.
    ವಿಗ್ರಹಗಳಿಗೆ ಧೂಪ ಹಾಕಿದರು.

“ಆದರೆ ಎಫ್ರಾಯೀಮನಿಗೆ ನಡೆಯಲು ಕಲಿಸಿದ್ದು ನಾನು.
    ಇಸ್ರೇಲರನ್ನು ನಾನು ನನ್ನ ತೋಳುಗಳಲ್ಲಿ ಎತ್ತಿಕೊಂಡೆನು.
ನಾನು ಅವರನ್ನು ಗುಣಪಡಿಸಿದೆನು.
    ಆದರೆ ಅವರಿಗೆ ಅದು ಗೊತ್ತಿಲ್ಲ.
ನಾನು ಅವರನ್ನು ಪ್ರೀತಿ ಎಂಬ ಹಗ್ಗಗಳಿಂದ
    ಹತ್ತಿರಕ್ಕೆ ಎಳೆದುಕೊಂಡೆನು.
ಅವರಿಗೆ ಸ್ವತಂತ್ರವನ್ನು ಕೊಟ್ಟೆನು.
    ನಾನು ಬಾಗಿ ಅವರಿಗೆ ಉಣಿಸಿದೆನು.

“ದೇವರ ಕಡೆಗೆ ಹಿಂದಿರುಗಲು ಇಸ್ರೇಲರಿಗೆ ಮನಸ್ಸಿಲ್ಲ. ಆದ್ದರಿಂದ ಅವರು ಈಜಿಪ್ಟಿಗೆ ಹೋಗುವರು. ಅಶ್ಶೂರದ ಅರಸನು ಅವರಿಗೆ ಅರಸನಾಗುವನು. ಅವರ ನಗರದ ಮೇಲೆ ಖಡ್ಗವು ಬೀಸಲ್ಪಟ್ಟು ಅವರ ಬಲಿಷ್ಠರನ್ನು ಸಾಯಿಸುವದು; ಅವರ ನಾಯಕರನ್ನು ನಾಶಮಾಡುವದು.

“ನಾನು ಹಿಂದಿರುಗುವೆನೆಂದು ನನ್ನ ಜನರು ಎದುರು ನೋಡುತ್ತಿದ್ದಾರೆ. ಅವರು ಉನ್ನತದಲ್ಲಿರುವ ದೇವರಿಗೆ ಮೊರೆಯಿಡುತ್ತಿದ್ದಾರೆ. ಆದರೆ ದೇವರು ಅವರಿಗೆ ಸಹಾಯ ಮಾಡುವದಿಲ್ಲ.”

ಇಸ್ರೇಲನ್ನು ನಾಶಮಾಡಲು ಯೆಹೋವನು ಇಷ್ಟಪಡುವದಿಲ್ಲ

“ಎಫ್ರಾಯೀಮೇ, ನಿನ್ನನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ.
    ಇಸ್ರೇಲೇ, ನಿನ್ನನ್ನು ಸಂರಕ್ಷಿಸಲು ನನಗೆ ಇಷ್ಟ.
ನಿನ್ನನ್ನು ಅದ್ಮದಂತೆ ಮಾಡಲು ನನಗೆ ಮನಸ್ಸಿಲ್ಲ.
    ನಿನ್ನನ್ನು ಜೆಬೊಯೀಮಿನಂತೆ ಮಾಡಲು ನನಗೆ ಮನಸ್ಸಿಲ್ಲ.
ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ.
    ನಿನ್ನ ಮೇಲಿರುವ ನನ್ನ ಪ್ರೀತಿಯು ಆಳವಾಗಿದೆ.
ನನ್ನ ಭಯಂಕರವಾದ ಕೋಪವು ಮೇಲುಗೈ ಸಾಧಿಸುವದಿಲ್ಲ.
    ಎಫ್ರಾಯೀಮನನ್ನು ನಾನು ತಿರುಗಿ ನಾಶಮಾಡುವದಿಲ್ಲ.
ನಾನು ದೇವರು, ನರಮನುಷ್ಯನಲ್ಲ.
    ನಾನು ಪವಿತ್ರನು,
ನಿನ್ನೊಂದಿಗಿರುವೆನು.
    ನನ್ನ ಕೋಪವನ್ನು ಪ್ರದರ್ಶಿಸೆನು.
10 ನಾನು ಸಿಂಹದಂತೆ ಗರ್ಜಿಸುವೆನು.
    ನಾನು ಗರ್ಜಿಸುವಾಗ ನನ್ನ ಮಕ್ಕಳು ಬರುವರು ಮತ್ತು ನನ್ನನ್ನು ಹಿಂಬಾಲಿಸುವರು.
ಪಶ್ಚಿಮದಿಂದ ನನ್ನ ಮಕ್ಕಳು
    ಹೆದರಿ ನಡುಗುತ್ತಾ ಬರುವರು.
11 ಈಜಿಪ್ಟಿನಿಂದ ಅವರು ಪಕ್ಷಿಗಳಂತೆ
    ನಡುಗುತ್ತಾ ಬರುವರು.
ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು.
    ಆಗ ನಾನು ಅವರನ್ನು ಮನೆಗೆ ಕರೆದುಕೊಂಡು ಹೋಗುವೆನು.
    ಇದು ಯೆಹೋವನ ನುಡಿ.

ಕೀರ್ತನೆಗಳು 107:1-9

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
    ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
ಅವರು ಹಸಿವೆಯಿಂದಲೂ
    ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
    ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನು ಬಾಯರಿದವರನ್ನು ನೀರಿನಿಂದಲೂ
    ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.

ಕೀರ್ತನೆಗಳು 107:43

43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
    ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.

ಕೊಲೊಸ್ಸೆಯವರಿಗೆ 3:1-11

ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ

ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.

ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. ಇವು ದೇವರನ್ನು ಕೋಪಗೊಳಿಸುತ್ತವೆ. ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.

ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.

ಲೂಕ 12:13-21

ಸ್ವಾರ್ಥತೆಯ ಬಗ್ಗೆ ಯೇಸುವಿನ ಎಚ್ಚರಿಕೆ

13 ಸಮೀಪದಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕನೇ, ನಮ್ಮ ತಂದೆ ಇದೀಗ ಸತ್ತುಹೋದನು. ನಮ್ಮ ತಂದೆಯ ಆಸ್ತಿಯಲ್ಲಿ ನನಗೆ ಪಾಲುಕೊಡಬೇಕೆಂದು ನನ್ನ ಅಣ್ಣನಿಗೆ ಹೇಳು” ಎಂದು ಹೇಳಿದನು.

14 ಆದರೆ ಯೇಸು ಅವನಿಗೆ, “ನಾನು ನಿಮ್ಮ ನ್ಯಾಯಾಧಿಪತಿ ಎಂದಾಗಲಿ ನಿಮ್ಮ ತಂದೆಯ ಆಸ್ತಿಯನ್ನು ನಿಮ್ಮಿಬ್ಬರಿಗೆ ಹಂಚಿಕೊಡುವವನು ಎಂದಾಗಲಿ ನಿನಗೆ ಯಾರು ಹೇಳಿದರು?” ಎಂದು ಕೇಳಿದನು. 15 ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.

16 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನಿದ್ದನು. ಅವನಿಗೆ ಬಹಳ ಜಮೀನಿತ್ತು. ಒಮ್ಮೆ ಅವನ ಜಮೀನಿನಲ್ಲಿ ಸಮೃದ್ಧಿಯಾದ ಬೆಳೆ ಆಯಿತು. 17 ಆಗ ಐಶ್ವರ್ಯವಂತನು, ‘ನಾನೇನು ಮಾಡಲಿ? ನನ್ನ ಬೆಳೆಯನ್ನೆಲ್ಲಾ ತುಂಬಿಡಲು ನನಗೆ ಸ್ಥಳವಿಲ್ಲವಲ್ಲಾ!’ ಎಂದುಕೊಂಡನು.

18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’ 19 ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.

20 “ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.

21 “ತನಗೋಸ್ಕರ ಮಾತ್ರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವವನ ಗತಿ ಇದೇ. ದೇವರ ದೃಷ್ಟಿಯಲ್ಲಿ ಅವನು ಐಶ್ವರ್ಯವಂತನಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International