Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 44

ರಚನೆಗಾರರು: ಕೋರಹೀಯರು.

44 ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ
    ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ.
    ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.
ದೇವರೇ, ನಿನ್ನ ಮಹಾಶಕ್ತಿಯಿಂದ ನೀನು ಈ ದೇಶವನ್ನು
    ಅನ್ಯಜನಾಂಗಗಳಿಂದ ನಮಗೆ ಕೊಟ್ಟಿರುವೆ.
ಆ ವಿದೇಶಿಯರನ್ನು ನೀನು ಜಜ್ಜಿಹಾಕಿದೆ.
    ಈ ದೇಶದಿಂದ ನೀನು ಅವರನ್ನು ಹೊರಡಿಸಿಬಿಟ್ಟೆ.
ಈ ದೇಶವು ನಮಗೆ ದೊರೆತದ್ದು ನಮ್ಮ ಪೂರ್ವಿಕರ ಖಡ್ಗಗಳಿಂದಲ್ಲ.
    ಅವರನ್ನು ಜಯಶಾಲಿಗಳನ್ನಾಗಿ ಮಾಡಿದ್ದು ಅವರ ಭುಜಬಲವಲ್ಲ.
    ನಮ್ಮ ಪೂರ್ವಿಕರೊಂದಿಗೆ ನೀನಿದ್ದುದರಿಂದ ಅವರಿಗೆ ಜಯವು ದೊರೆಯಿತು.
ದೇವರೇ, ನಿನ್ನ ಮಹಾಶಕ್ತಿಯು ಅವರನ್ನು ರಕ್ಷಿಸಿತು.
    ಅವರ ಮೇಲೆ ನಿನಗಿದ್ದ ಪ್ರೀತಿಯನ್ನು ಅದು ತೋರಿಸಿತು.
ನನ್ನ ದೇವರೇ, ನೀನೇ ನನ್ನ ರಾಜನು.
    ಆಜ್ಞಾಪಿಸಿ ಯಾಕೋಬನಿಗೆ ಜಯವನ್ನು ದಯಪಾಲಿಸು.
ನಿನ್ನ ಸಹಾಯದಿಂದಲೇ ನಮ್ಮ ಶತ್ರುಗಳನ್ನು ಹಿಂದಟ್ಟುವೆವು.
    ನಿನ್ನ ಹೆಸರಿನಿಂದ, ನಮ್ಮ ಶತ್ರುಗಳ ಮೇಲೆ ನಡೆದಾಡುವೆವು.
ನನ್ನ ಬಿಲ್ಲುಬಾಣಗಳಲ್ಲಿ ನಾನು ಭರವಸೆವಿಡುವುದಿಲ್ಲ.
    ನನ್ನ ಖಡ್ಗವು ನನ್ನನ್ನು ರಕ್ಷಿಸಲಾರದು.
ನೀನು ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದೆ.
    ನಮ್ಮ ಶತ್ರುಗಳನ್ನು ನಾಚಿಕೆಗೆ ಗುರಿಮಾಡಿದೆ.
ದಿನವೆಲ್ಲಾ ದೇವರನ್ನು ಕೊಂಡಾಡಿದೆವು.
    ನಿನ್ನ ಹೆಸರನ್ನು ಸದಾಕಾಲ ಸ್ತುತಿಸುವೆವು.

ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ.
    ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ.
    ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
10 ನಮ್ಮ ವೈರಿಗಳು ನಮ್ಮನ್ನು ಹಿಂದಟ್ಟುವಂತೆ ಮಾಡಿದೆ.
    ನಮ್ಮ ವೈರಿಗಳು ನಮ್ಮ ಐಶ್ವರ್ಯವನ್ನು ತೆಗೆದುಕೊಂಡರು.
11 ಕೊಯ್ಯಲ್ಪಡುವ ಕುರಿಗಳೋ ಎಂಬಂತೆ ನೀನು ನಮ್ಮನ್ನು ಅವರಿಗೆ ಒಪ್ಪಿಸಿಕೊಟ್ಟಿರುವೆ;
    ಅನ್ಯ ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಟ್ಟಿರುವೆ.
12 ನಿನ್ನ ಜನರನ್ನು ಅತ್ಯಲ್ಪ ಬೆಲೆಗೆ ಮಾರಿಬಿಟ್ಟೆ.
    ಬೆಲೆಯ ಬಗ್ಗೆ ವಾದವನ್ನೂ ನೀನು ಮಾಡಲಿಲ್ಲ.
13 ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ.
    ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.
14 ನಾವು ಜನರಿಗೆ ಗಾದೆಯ ಮಾತಾಗಿದ್ದೇವೆ.
    ಸ್ವದೇಶವನ್ನು ಹೊಂದಿಲ್ಲದವರು ಸಹ ನಮ್ಮನ್ನು ಕಂಡು ತಲೆಯಾಡಿಸುತ್ತಾ ನಗುತ್ತಾರೆ.
15 ನಾಚಿಕೆಯು ನನ್ನನ್ನು ಕವಿದುಕೊಂಡಿದೆ.
    ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.
16 ನನ್ನ ವೈರಿಗಳ ಮತ್ತು ದೂಷಕರ
    ನಿಂದೆಯ ಮಾತುಗಳು ನನ್ನೆದುರಿನಲ್ಲಿ ಇವೆ.
17 ನಾವು ನಿನ್ನನ್ನು ಮರೆತಿಲ್ಲದಿದ್ದರೂ
    ನಾವು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿಲ್ಲದಿದ್ದರೂ ಇವೆಲ್ಲಾ ನಮಗೆ ಬಂದಿವೆ.
18 ನಾವು ನಿನಗೆ ವಿಮುಖರಾಗದೆ
    ನಿನ್ನನ್ನೇ ಹಿಂಬಾಲಿಸಿದೆವು.
19 ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ.
    ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
20 ನಮ್ಮ ದೇವರ ಹೆಸರನ್ನು ನಾವು ಮರೆತುಬಿಟ್ಟೆವೋ?
    ಅನ್ಯದೇವರುಗಳಿಗೆ ನಾವು ಪ್ರಾರ್ಥಿಸಿದೆವೋ? ಇಲ್ಲ!
21 ದೇವರಿಗೆ ಇವು ಖಂಡಿತವಾಗಿ ತಿಳಿದಿವೆ.
    ನಮ್ಮ ಅಂತರಾಳದ ರಹಸ್ಯಗಳನ್ನು ಸಹ ಆತನು ಬಲ್ಲನು.
22 ನಿನ್ನ ನಿಮಿತ್ತ ನಾವು ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ;
    ಕೊಯ್ಯಲು ಕೊಂಡೊಯ್ಯುವ ಕುರಿಗಳಂತಾಗಿದ್ದೇವೆ.
23 ನನ್ನ ಒಡೆಯನೇ, ಎದ್ದೇಳು!
    ನೀನು ನಿದ್ರಿಸುತ್ತಿರುವುದೇಕೆ?
    ಎದ್ದೇಳು! ನಮ್ಮನ್ನು ಶಾಶ್ವತವಾಗಿ ಕೈಬಿಡಬೇಡ.
24 ನೀನು ನಮಗೆ ಮರೆಯಾಗಿರುವುದೇಕೆ?
    ನೀನು ನಮ್ಮ ನೋವುಗಳನ್ನೂ ತೊಂದರೆಗಳನ್ನೂ ಮರೆತುಬಿಟ್ಟಿರುವೆಯಾ?
25 ನಾವು ಧೂಳಿಗೆ ತಳ್ಳಲ್ಪಟ್ಟವರಾಗಿದ್ದೇವೆ.
    ನಮ್ಮ ಶರೀರವು ನೆಲಕ್ಕೆ ಹತ್ತಿಕೊಂಡಿದೆ.
26 ಎದ್ದು ಸಹಾಯಮಾಡು!
    ನಿನ್ನ ಶಾಶ್ವತವಾದ ಪ್ರೀತಿಯ ನಿಮಿತ್ತ ನಮ್ಮನ್ನು ರಕ್ಷಿಸು.

ಹೋಶೇಯ 6:11-7:16

11 ಯೆಹೂದವೇ, ನಿನಗೆ ಸುಗ್ಗೀಕಾಲವು ನೇಮಕವಾಗಿದೆ,
    ಸೆರೆವಾಸದಿಂದ ನನ್ನ ಜನರನ್ನು ನಾನು ಹಿಂತಿರುಗಿ ಕರೆತಂದಾಗ ಅದು ಸಂಭವಿಸುವದು.

“ನಾನು ಇಸ್ರೇಲನ್ನು ಗುಣಪಡಿಸುವೆನು.
    ಆಗ ಎಫ್ರಾಯೀಮನು ಪಾಪಮಾಡಿದ್ದಾನೆಂದು ಜನರಿಗೆ ತಿಳಿದುಬರುವದು.
ಜನರಿಗೆ ಸಮಾರ್ಯದವರ ಸುಳ್ಳು ತಿಳಿದುಬರುವದು.
    ಆ ನಗರದಲ್ಲಿ ಕಳ್ಳರು ಬರುತ್ತಾ ಹೋಗುತ್ತಾ ಇರುವದನ್ನು ಜನರು ತಿಳಿಯುವರು.
ನಾನು ಅವರ ದುಷ್ಟತ್ವವನ್ನು ನೆನಪಿನಲ್ಲಿಟ್ಟಿರುತ್ತೇನೆಂಬುದನ್ನು ಅವರು ನಂಬುವದಿಲ್ಲ.
    ಅವರು ಮಾಡಿದ ದುಷ್ಟತನವು ಸುತ್ತಲೂ ಕಾಣಿಸುವದು.
    ನಾನು ಅವರ ಪಾಪಗಳನ್ನು ಸ್ಪಷ್ಟವಾಗಿ ನೋಡುತ್ತೇನೆ.
ಅವರ ದುಷ್ಟತನವು ಅವರ ಅರಸರನ್ನು ಸಂತಸಗೊಳಿಸುತ್ತದೆ.
    ಅವರ ಸುಳ್ಳುಗಳು ಅವರ ನಾಯಕರನ್ನು ಸಂತೋಷಪಡಿಸುತ್ತವೆ.
ರೊಟ್ಟಿಯನ್ನು ಸುಡಲು ರೊಟ್ಟಿಗಾರನು ಹಿಟ್ಟನ್ನು ನಾದುವನು.
    ರೊಟ್ಟಿಯು ಶಾಖದಿಂದ ಉಬ್ಬುತ್ತಿರುವಾಗ ರೊಟ್ಟಿಗಾರನು ಒಲೆಯನ್ನು ಮತ್ತಷ್ಟು ಉರಿಸುವುದಿಲ್ಲ.
ಇಸ್ರೇಲರಾದರೋ ಹಾಗಲ್ಲ,
    ಅವರು ಒಲೆಯನ್ನು ಮತ್ತಷ್ಟು ಉರಿಸುತ್ತಾರೆ.
ನಮ್ಮ ಅರಸನ ದಿವಸದಲ್ಲಿ ನಾಯಕರು ಅತಿಯಾಗಿ ಕುಡಿದು ರೋಗಗ್ರಸ್ತರಾಗುವರು.
    ಅವರು ದ್ರಾಕ್ಷಾರಸದಿಂದ ಅಮಲೇರಿದವರಾಗಿ
    ದೇವರನ್ನು ಅಪಹಾಸ್ಯಮಾಡುವ ಜನರೊಂದಿಗೆ ಒಪ್ಪಂದ ಮಾಡಿಕೊಳ್ಳುವರು.
ಜನರು ಗುಪ್ತವಾಗಿ ಯೋಜನೆಯನ್ನು ತಯಾರಿಸುವರು.
    ಉರಿಯುವ ಒಲೆಯಂತೆ ಅವರ ಹೃದಯವು ಉತ್ಸಾಹಗೊಳ್ಳುವುದು.
ಅವರ ಉತ್ಸಾಹವು ರಾತ್ರಿಯೆಲ್ಲಾ ಉರಿಯುವುದು.
    ಅದು ಮುಂಜಾನೆಯಲ್ಲಿ ಧಗಧಗಿಸುವ ಬೆಂಕಿಯ ಕಾವಿನಂತಿರುವದು.
ಅವರು ಬಿಸಿ ಮಾಡಲ್ಪಟ್ಟ ಕುಲುಮೆಯಂತಿರುವರು.
    ಅವರು ತಮ್ಮನ್ನು ಆಳುವವರನ್ನು ನಾಶಮಾಡಿದರು.
ಅವರ ರಾಜರುಗಳೆಲ್ಲಾ ಬಿದ್ದುಹೋದರು.
    ಅವರಲ್ಲಿ ಒಬ್ಬರಾದಲೂ ಸಹಾಯಕ್ಕಾಗಿ ನನಗೆ ಮೊರೆಯಿಡಲಿಲ್ಲ.”

ತಾನು ನಾಶವಾಗುತ್ತೇನೆಂದು ಇಸ್ರೇಲಿಗೆ ಗೊತ್ತಿಲ್ಲ

“ಎಫ್ರಾಯೀಮು ಬೇರೆ ದೇಶಗಳೊಂದಿಗೆ ಬೆರೆತುಹೋಗುತ್ತದೆ.
    ಎಫ್ರಾಯೀಮು ತಿರುವಿಹಾಕದ ಚಪಾತಿಯಂತಿದೆ.
ಅನ್ಯರು ಎಫ್ರಾಯೀಮನ ಶಕ್ತಿಯನ್ನು ಮುರಿಯುವರು.
    ಆದರೆ ಅವನಿಗೆ ಅದು ತಿಳಿದಿರುವದಿಲ್ಲ.
ಎಫ್ರಾಯೀಮನ ತಲೆಯಲ್ಲಿ ನರೆಕೂದಲು ಬಂದಾಗ್ಯೂ
    ಅದಕ್ಕೆ ತಿಳಿವಳಿಕೆ ಬಂದಿರುವುದಿಲ್ಲ.
10 ಎಫ್ರಾಯೀಮನ ಹೆಮ್ಮೆಯು ಅವನಿಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತದೆ.
    ಜನರಿಗೆ ನಾನಾ ತರದ ಸಂಕಟಗಳು ಬಂದಾಗ್ಯೂ
ಅವರು ತಮ್ಮ ದೇವರಾದ ಯೆಹೋವನ ಬಳಿಗೆ ಹೋಗಲಿಲ್ಲ.
    ಜನರು ತಮ್ಮ ಸಹಾಯಕ್ಕಾಗಿ ಆತನಿಗೆ ಮೊರೆಯಿಡಲಿಲ್ಲ.
11 ಹೀಗೆ ಎಫ್ರಾಯೀಮ್ ತಿಳಿವಳಿಕೆ ಇಲ್ಲದ ಮೂರ್ಖ ಪಾರಿವಾಳದಂತಾಗಿದೆ.
    ಜನರು ಸಹಾಯಕ್ಕಾಗಿ ಈಜಿಪ್ಟನ್ನು ಕರೆದರು,
    ಅಶ್ಶೂರ್ಯದ ಕಡೆಗೆ ಓಡಿದರು.
12 ಅವರು ಆ ದೇಶಗಳಿಗೆ ಹೋಗುವಾಗ
    ನಾನು ಅವರನ್ನು ಉರುಲಿನೊಳಗೆ ಸಿಕ್ಕಿಸುವೆನು.
ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು.
    ಆಕಾಶದ ಪಕ್ಷಿಗಳ ರೀತಿಯಲ್ಲಿ ಅವರನ್ನು ಕೆಳಗೆ ಬೀಳಿಸುವೆನು.
    ಅವರು ಮಾಡಿದ ಒಪ್ಪಂದಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು.
13 ಅವರು ನನ್ನನ್ನು ಬಿಟ್ಟು ತೊಲಗಿದರು. ಇದು ಅವರಿಗೆ ಕೆಡುಕು ಉಂಟುಮಾಡುವದು.
    ಅವರು ನನಗೆ ವಿಧೇಯರಾಗಲು ಇಷ್ಟಪಡಲಿಲ್ಲ. ಆದ್ದರಿಂದ ಅವರು ನಾಶವಾಗುವರು.
ನಾನು ಅವರನ್ನು ರಕ್ಷಿಸಿ ಕಾಪಾಡಿದ್ದಾಗ್ಯೂ
    ಅವರು ನನಗೆ ವಿರುದ್ಧವಾಗಿ ಸುಳ್ಳಾಡಿದರು.
14 ಹೃದಯಪೂರ್ವಕವಾಗಿ ಅವರು ನನ್ನನ್ನು ಕರೆಯಲಿಲ್ಲ.
    ಹೌದು, ಅವರು ತಮ್ಮ ಹಾಸಿಗೆಗಳ ಮೇಲೆ ಅಳುವರು.
ಆಹಾರಧಾನ್ಯ, ಹೊಸ ದ್ರಾಕ್ಷಾರಸವನ್ನು ಕೇಳುವಾಗ, ಬೇರೆಯವರ ದೇಶಗಳಲ್ಲಿ ಆಹಾರಕ್ಕಾಗಿ ಅಲೆದಾಡುವಾಗ ಅವರು ಅಳುವರು.
    ಆದರೆ ತಮ್ಮ ಹೃದಯಗಳಲ್ಲಿ ಅವರು ನನ್ನಿಂದ ದೂರವಾಗಿದ್ದಾರೆ.
15 ನಾನು ಅವರಿಗೆ ತರಬೇತಿಕೊಟ್ಟು ಅವರ ತೋಳುಗಳನ್ನು ಬಲಪಡಿಸಿದೆನು.
    ಆದರೆ ನನಗೆ ವಿರುದ್ಧವಾಗಿ ಅವರು ದುರಾಲೋಚನೆಯನ್ನು ಮಾಡಿದರು.
16 ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು.
    ಮೋಸದ ಬಿಲ್ಲಿನಂತೆ ಅವರಾದರು.
ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು.
    ಆದರೆ ಅವರು ಕತ್ತಿಯಲ್ಲಿ ಸಾಯುವರು.
ಆಗ ಈಜಿಪ್ಟಿನ ಜನರು
    ಅವರನ್ನು ನೋಡಿ ನಗಾಡುವರು.

ಮತ್ತಾಯ 5:43-48

ಎಲ್ಲರನ್ನು ಪ್ರೀತಿಸಿರಿ

(ಲೂಕ 6:27-28,32-36)

43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(A) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International