Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 44

ರಚನೆಗಾರರು: ಕೋರಹೀಯರು.

44 ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ
    ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ.
    ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.
ದೇವರೇ, ನಿನ್ನ ಮಹಾಶಕ್ತಿಯಿಂದ ನೀನು ಈ ದೇಶವನ್ನು
    ಅನ್ಯಜನಾಂಗಗಳಿಂದ ನಮಗೆ ಕೊಟ್ಟಿರುವೆ.
ಆ ವಿದೇಶಿಯರನ್ನು ನೀನು ಜಜ್ಜಿಹಾಕಿದೆ.
    ಈ ದೇಶದಿಂದ ನೀನು ಅವರನ್ನು ಹೊರಡಿಸಿಬಿಟ್ಟೆ.
ಈ ದೇಶವು ನಮಗೆ ದೊರೆತದ್ದು ನಮ್ಮ ಪೂರ್ವಿಕರ ಖಡ್ಗಗಳಿಂದಲ್ಲ.
    ಅವರನ್ನು ಜಯಶಾಲಿಗಳನ್ನಾಗಿ ಮಾಡಿದ್ದು ಅವರ ಭುಜಬಲವಲ್ಲ.
    ನಮ್ಮ ಪೂರ್ವಿಕರೊಂದಿಗೆ ನೀನಿದ್ದುದರಿಂದ ಅವರಿಗೆ ಜಯವು ದೊರೆಯಿತು.
ದೇವರೇ, ನಿನ್ನ ಮಹಾಶಕ್ತಿಯು ಅವರನ್ನು ರಕ್ಷಿಸಿತು.
    ಅವರ ಮೇಲೆ ನಿನಗಿದ್ದ ಪ್ರೀತಿಯನ್ನು ಅದು ತೋರಿಸಿತು.
ನನ್ನ ದೇವರೇ, ನೀನೇ ನನ್ನ ರಾಜನು.
    ಆಜ್ಞಾಪಿಸಿ ಯಾಕೋಬನಿಗೆ ಜಯವನ್ನು ದಯಪಾಲಿಸು.
ನಿನ್ನ ಸಹಾಯದಿಂದಲೇ ನಮ್ಮ ಶತ್ರುಗಳನ್ನು ಹಿಂದಟ್ಟುವೆವು.
    ನಿನ್ನ ಹೆಸರಿನಿಂದ, ನಮ್ಮ ಶತ್ರುಗಳ ಮೇಲೆ ನಡೆದಾಡುವೆವು.
ನನ್ನ ಬಿಲ್ಲುಬಾಣಗಳಲ್ಲಿ ನಾನು ಭರವಸೆವಿಡುವುದಿಲ್ಲ.
    ನನ್ನ ಖಡ್ಗವು ನನ್ನನ್ನು ರಕ್ಷಿಸಲಾರದು.
ನೀನು ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದೆ.
    ನಮ್ಮ ಶತ್ರುಗಳನ್ನು ನಾಚಿಕೆಗೆ ಗುರಿಮಾಡಿದೆ.
ದಿನವೆಲ್ಲಾ ದೇವರನ್ನು ಕೊಂಡಾಡಿದೆವು.
    ನಿನ್ನ ಹೆಸರನ್ನು ಸದಾಕಾಲ ಸ್ತುತಿಸುವೆವು.

ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ.
    ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ.
    ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
10 ನಮ್ಮ ವೈರಿಗಳು ನಮ್ಮನ್ನು ಹಿಂದಟ್ಟುವಂತೆ ಮಾಡಿದೆ.
    ನಮ್ಮ ವೈರಿಗಳು ನಮ್ಮ ಐಶ್ವರ್ಯವನ್ನು ತೆಗೆದುಕೊಂಡರು.
11 ಕೊಯ್ಯಲ್ಪಡುವ ಕುರಿಗಳೋ ಎಂಬಂತೆ ನೀನು ನಮ್ಮನ್ನು ಅವರಿಗೆ ಒಪ್ಪಿಸಿಕೊಟ್ಟಿರುವೆ;
    ಅನ್ಯ ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಟ್ಟಿರುವೆ.
12 ನಿನ್ನ ಜನರನ್ನು ಅತ್ಯಲ್ಪ ಬೆಲೆಗೆ ಮಾರಿಬಿಟ್ಟೆ.
    ಬೆಲೆಯ ಬಗ್ಗೆ ವಾದವನ್ನೂ ನೀನು ಮಾಡಲಿಲ್ಲ.
13 ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ.
    ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.
14 ನಾವು ಜನರಿಗೆ ಗಾದೆಯ ಮಾತಾಗಿದ್ದೇವೆ.
    ಸ್ವದೇಶವನ್ನು ಹೊಂದಿಲ್ಲದವರು ಸಹ ನಮ್ಮನ್ನು ಕಂಡು ತಲೆಯಾಡಿಸುತ್ತಾ ನಗುತ್ತಾರೆ.
15 ನಾಚಿಕೆಯು ನನ್ನನ್ನು ಕವಿದುಕೊಂಡಿದೆ.
    ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.
16 ನನ್ನ ವೈರಿಗಳ ಮತ್ತು ದೂಷಕರ
    ನಿಂದೆಯ ಮಾತುಗಳು ನನ್ನೆದುರಿನಲ್ಲಿ ಇವೆ.
17 ನಾವು ನಿನ್ನನ್ನು ಮರೆತಿಲ್ಲದಿದ್ದರೂ
    ನಾವು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿಲ್ಲದಿದ್ದರೂ ಇವೆಲ್ಲಾ ನಮಗೆ ಬಂದಿವೆ.
18 ನಾವು ನಿನಗೆ ವಿಮುಖರಾಗದೆ
    ನಿನ್ನನ್ನೇ ಹಿಂಬಾಲಿಸಿದೆವು.
19 ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ.
    ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
20 ನಮ್ಮ ದೇವರ ಹೆಸರನ್ನು ನಾವು ಮರೆತುಬಿಟ್ಟೆವೋ?
    ಅನ್ಯದೇವರುಗಳಿಗೆ ನಾವು ಪ್ರಾರ್ಥಿಸಿದೆವೋ? ಇಲ್ಲ!
21 ದೇವರಿಗೆ ಇವು ಖಂಡಿತವಾಗಿ ತಿಳಿದಿವೆ.
    ನಮ್ಮ ಅಂತರಾಳದ ರಹಸ್ಯಗಳನ್ನು ಸಹ ಆತನು ಬಲ್ಲನು.
22 ನಿನ್ನ ನಿಮಿತ್ತ ನಾವು ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ;
    ಕೊಯ್ಯಲು ಕೊಂಡೊಯ್ಯುವ ಕುರಿಗಳಂತಾಗಿದ್ದೇವೆ.
23 ನನ್ನ ಒಡೆಯನೇ, ಎದ್ದೇಳು!
    ನೀನು ನಿದ್ರಿಸುತ್ತಿರುವುದೇಕೆ?
    ಎದ್ದೇಳು! ನಮ್ಮನ್ನು ಶಾಶ್ವತವಾಗಿ ಕೈಬಿಡಬೇಡ.
24 ನೀನು ನಮಗೆ ಮರೆಯಾಗಿರುವುದೇಕೆ?
    ನೀನು ನಮ್ಮ ನೋವುಗಳನ್ನೂ ತೊಂದರೆಗಳನ್ನೂ ಮರೆತುಬಿಟ್ಟಿರುವೆಯಾ?
25 ನಾವು ಧೂಳಿಗೆ ತಳ್ಳಲ್ಪಟ್ಟವರಾಗಿದ್ದೇವೆ.
    ನಮ್ಮ ಶರೀರವು ನೆಲಕ್ಕೆ ಹತ್ತಿಕೊಂಡಿದೆ.
26 ಎದ್ದು ಸಹಾಯಮಾಡು!
    ನಿನ್ನ ಶಾಶ್ವತವಾದ ಪ್ರೀತಿಯ ನಿಮಿತ್ತ ನಮ್ಮನ್ನು ರಕ್ಷಿಸು.

ಹೋಶೇಯ 6:1-10

ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ

“ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ.
    ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು.
    ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.
ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು.
    ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು.
    ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು.
ಯೆಹೋವನ ವಿಷಯವಾಗಿ ನಾವು ಕಲಿಯೋಣ.
    ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ.
ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ.
    ವಸಂತಕಾಲದ ಮಳೆಯಂತೆ ಯೆಹೋವನು ಬರುವನು.”

ಜನರು ನಿಷ್ಠಾವಂತರಲ್ಲ

“ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
    ಯೆಹೂದವೇ, ನಿನಗೆ ನಾನು ಏನು ಮಾಡಬೇಕು?
ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ.
    ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ.
    ಅದು ಬೇಗನೆ ಇಲ್ಲದೆಹೋಗುವದು.
ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು.
    ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು.
ಯಾಕೆಂದರೆ ನನಗೆ ವಿಧೇಯತೆಯಿಂದ
    ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ.
ಜನರು ತರುವ ಸರ್ವಾಂಗಹೋಮಗಳಿಗಿಂತಲೂ
    ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ.
ಆದರೆ ಜನರು ಆದಾಮನಂತೆ ಒಡಂಬಡಿಕೆಯನ್ನು ಮುರಿದುಹಾಕಿದರು.
    ಅವರ ದೇಶದಲ್ಲಿ ಅವರು ನನಗೆ ದ್ರೋಹಿಗಳಾದರು.
ಗಿಲ್ಯಾದು ಕೆಟ್ಟತನವನ್ನು ನಡಿಸುವ ಜನರಿಂದ ಕೂಡಿದ ನಗರವಾಗಿದೆ.
    ಜನರು ಇತರರನ್ನು ಮೋಸಗೊಳಿಸಿ ಕೊಲೆಮಾಡಿರುತ್ತಾರೆ.
ಕಳ್ಳರು ದಾರಿಯಲ್ಲಿ ಹೊಂಚುಹಾಕುತ್ತಾ
    ಜನರನ್ನು ಸೂರೆಮಾಡಲು ಕಾಯುತ್ತಿರುತ್ತಾರೆ.
ಅದೇ ರೀತಿಯಲ್ಲಿ ಶೆಕೆಮಿಗೆ ಹೋಗುವ ದಾರಿಯಲ್ಲಿ ಯಾಜಕರು ಕಾಯುತ್ತಾ ಹಾದುಹೋಗುತ್ತಿರುವ ಜನರ ಮೇಲೆ ಬೀಳುವರು.
    ಅವರು ದುಷ್ಕೃತ್ಯಗಳನ್ನು ಮಾಡಿರುತ್ತಾರೆ.
10 ಇಸ್ರೇಲ್ ಜನಾಂಗದಲ್ಲಿ ಅತೀ ಭಯಂಕರ ಸಂಗತಿಗಳನ್ನು ನಾನು ನೋಡಿರುತ್ತೇನೆ.
ಎಫ್ರಾಯೀಮು ದೇವರಿಗೆ ದ್ರೋಹಿಯಾದನು.
    ಇಸ್ರೇಲು ಪಾಪದಿಂದ ಹೊಲಸಾಗಿದೆ.

ರೋಮ್ನಗರದವರಿಗೆ 9:30-10:4

30 ಇದರರ್ಥವೇನೆಂದರೆ, ಯೆಹೂದ್ಯರಲ್ಲದವರು ನೀತಿವಂತರಾಗಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಅವರನ್ನು ನೀತಿವಂತರನ್ನಾಗಿ ಮಾಡಲಾಯಿತು. ಅವರು ನಂಬಿಕೆಯಿಂದಲೇ ನೀತಿವಂತರಾದರು. 31 ಇಸ್ರೇಲಿನ ಜನರಾದರೋ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಪ್ರಯತ್ನಿಸಿ ವಿಫಲರಾದರು. 32 ಏಕೆಂದರೆ ಕ್ರಿಯೆಗಳ ಮೂಲಕ ನೀತಿವಂತರಾಗಲು ಅವರು ಪ್ರಯತ್ನಿಸಿದರೇ ಹೊರತು ನಂಬಿಕೆಯನ್ನು ಆಧಾರ ಮಾಡಿಕೊಳ್ಳಲಿಲ್ಲ. ಜನರನ್ನು ಬೀಳಿಸುವ ಕಲ್ಲಿನ ಮೇಲೆ ಅವರು ಬಿದ್ದರು. 33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ:

“ಇಗೋ, ನಾನು ಸಿಯೋನಿನಲ್ಲಿ[a] ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ.
    ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ.
ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.”(A)

10 ಸಹೋದರ ಸಹೋದರಿಯರೇ, ಇಸ್ರೇಲರೆಲ್ಲರೂ ರಕ್ಷಣೆ ಹೊಂದಬೇಕೆಂಬುದೇ ನನ್ನ ಮಹಾಭಿಲಾಷೆ. ನಾನು ದೇವರಲ್ಲಿ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ನಾನು ಯೆಹೂದ್ಯರ ಬಗ್ಗೆ ಹೀಗೆ ಹೇಳಬಲ್ಲೆನು: ಅವರು ದೇವರನ್ನು ಹಿಂಬಾಲಿಸಲು ನಿಜವಾಗಿಯೂ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ. ನೀತಿವಂತರನ್ನಾಗಿ ಮಾಡುವ ದೇವರ ಮಾರ್ಗವನ್ನು ಅವರು ತಿಳಿದಿಲ್ಲದ ಕಾರಣ ತಮ್ಮ ಸ್ವಂತ ಮಾರ್ಗದ ಮೂಲಕವಾಗಿ ತಮ್ಮನ್ನು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು. ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನೀತಿನಿರ್ಣಯ ಹೊಂದಬೇಕೆಂದು ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International