Revised Common Lectionary (Semicontinuous)
ರಚನೆಗಾರರು: ಕೋರಹೀಯರು.
44 ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ
ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ.
ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.
2 ದೇವರೇ, ನಿನ್ನ ಮಹಾಶಕ್ತಿಯಿಂದ ನೀನು ಈ ದೇಶವನ್ನು
ಅನ್ಯಜನಾಂಗಗಳಿಂದ ನಮಗೆ ಕೊಟ್ಟಿರುವೆ.
ಆ ವಿದೇಶಿಯರನ್ನು ನೀನು ಜಜ್ಜಿಹಾಕಿದೆ.
ಈ ದೇಶದಿಂದ ನೀನು ಅವರನ್ನು ಹೊರಡಿಸಿಬಿಟ್ಟೆ.
3 ಈ ದೇಶವು ನಮಗೆ ದೊರೆತದ್ದು ನಮ್ಮ ಪೂರ್ವಿಕರ ಖಡ್ಗಗಳಿಂದಲ್ಲ.
ಅವರನ್ನು ಜಯಶಾಲಿಗಳನ್ನಾಗಿ ಮಾಡಿದ್ದು ಅವರ ಭುಜಬಲವಲ್ಲ.
ನಮ್ಮ ಪೂರ್ವಿಕರೊಂದಿಗೆ ನೀನಿದ್ದುದರಿಂದ ಅವರಿಗೆ ಜಯವು ದೊರೆಯಿತು.
ದೇವರೇ, ನಿನ್ನ ಮಹಾಶಕ್ತಿಯು ಅವರನ್ನು ರಕ್ಷಿಸಿತು.
ಅವರ ಮೇಲೆ ನಿನಗಿದ್ದ ಪ್ರೀತಿಯನ್ನು ಅದು ತೋರಿಸಿತು.
4 ನನ್ನ ದೇವರೇ, ನೀನೇ ನನ್ನ ರಾಜನು.
ಆಜ್ಞಾಪಿಸಿ ಯಾಕೋಬನಿಗೆ ಜಯವನ್ನು ದಯಪಾಲಿಸು.
5 ನಿನ್ನ ಸಹಾಯದಿಂದಲೇ ನಮ್ಮ ಶತ್ರುಗಳನ್ನು ಹಿಂದಟ್ಟುವೆವು.
ನಿನ್ನ ಹೆಸರಿನಿಂದ, ನಮ್ಮ ಶತ್ರುಗಳ ಮೇಲೆ ನಡೆದಾಡುವೆವು.
6 ನನ್ನ ಬಿಲ್ಲುಬಾಣಗಳಲ್ಲಿ ನಾನು ಭರವಸೆವಿಡುವುದಿಲ್ಲ.
ನನ್ನ ಖಡ್ಗವು ನನ್ನನ್ನು ರಕ್ಷಿಸಲಾರದು.
7 ನೀನು ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದೆ.
ನಮ್ಮ ಶತ್ರುಗಳನ್ನು ನಾಚಿಕೆಗೆ ಗುರಿಮಾಡಿದೆ.
8 ದಿನವೆಲ್ಲಾ ದೇವರನ್ನು ಕೊಂಡಾಡಿದೆವು.
ನಿನ್ನ ಹೆಸರನ್ನು ಸದಾಕಾಲ ಸ್ತುತಿಸುವೆವು.
9 ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ.
ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ.
ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
10 ನಮ್ಮ ವೈರಿಗಳು ನಮ್ಮನ್ನು ಹಿಂದಟ್ಟುವಂತೆ ಮಾಡಿದೆ.
ನಮ್ಮ ವೈರಿಗಳು ನಮ್ಮ ಐಶ್ವರ್ಯವನ್ನು ತೆಗೆದುಕೊಂಡರು.
11 ಕೊಯ್ಯಲ್ಪಡುವ ಕುರಿಗಳೋ ಎಂಬಂತೆ ನೀನು ನಮ್ಮನ್ನು ಅವರಿಗೆ ಒಪ್ಪಿಸಿಕೊಟ್ಟಿರುವೆ;
ಅನ್ಯ ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಟ್ಟಿರುವೆ.
12 ನಿನ್ನ ಜನರನ್ನು ಅತ್ಯಲ್ಪ ಬೆಲೆಗೆ ಮಾರಿಬಿಟ್ಟೆ.
ಬೆಲೆಯ ಬಗ್ಗೆ ವಾದವನ್ನೂ ನೀನು ಮಾಡಲಿಲ್ಲ.
13 ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ.
ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.
14 ನಾವು ಜನರಿಗೆ ಗಾದೆಯ ಮಾತಾಗಿದ್ದೇವೆ.
ಸ್ವದೇಶವನ್ನು ಹೊಂದಿಲ್ಲದವರು ಸಹ ನಮ್ಮನ್ನು ಕಂಡು ತಲೆಯಾಡಿಸುತ್ತಾ ನಗುತ್ತಾರೆ.
15 ನಾಚಿಕೆಯು ನನ್ನನ್ನು ಕವಿದುಕೊಂಡಿದೆ.
ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.
16 ನನ್ನ ವೈರಿಗಳ ಮತ್ತು ದೂಷಕರ
ನಿಂದೆಯ ಮಾತುಗಳು ನನ್ನೆದುರಿನಲ್ಲಿ ಇವೆ.
17 ನಾವು ನಿನ್ನನ್ನು ಮರೆತಿಲ್ಲದಿದ್ದರೂ
ನಾವು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿಲ್ಲದಿದ್ದರೂ ಇವೆಲ್ಲಾ ನಮಗೆ ಬಂದಿವೆ.
18 ನಾವು ನಿನಗೆ ವಿಮುಖರಾಗದೆ
ನಿನ್ನನ್ನೇ ಹಿಂಬಾಲಿಸಿದೆವು.
19 ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ.
ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
20 ನಮ್ಮ ದೇವರ ಹೆಸರನ್ನು ನಾವು ಮರೆತುಬಿಟ್ಟೆವೋ?
ಅನ್ಯದೇವರುಗಳಿಗೆ ನಾವು ಪ್ರಾರ್ಥಿಸಿದೆವೋ? ಇಲ್ಲ!
21 ದೇವರಿಗೆ ಇವು ಖಂಡಿತವಾಗಿ ತಿಳಿದಿವೆ.
ನಮ್ಮ ಅಂತರಾಳದ ರಹಸ್ಯಗಳನ್ನು ಸಹ ಆತನು ಬಲ್ಲನು.
22 ನಿನ್ನ ನಿಮಿತ್ತ ನಾವು ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ;
ಕೊಯ್ಯಲು ಕೊಂಡೊಯ್ಯುವ ಕುರಿಗಳಂತಾಗಿದ್ದೇವೆ.
23 ನನ್ನ ಒಡೆಯನೇ, ಎದ್ದೇಳು!
ನೀನು ನಿದ್ರಿಸುತ್ತಿರುವುದೇಕೆ?
ಎದ್ದೇಳು! ನಮ್ಮನ್ನು ಶಾಶ್ವತವಾಗಿ ಕೈಬಿಡಬೇಡ.
24 ನೀನು ನಮಗೆ ಮರೆಯಾಗಿರುವುದೇಕೆ?
ನೀನು ನಮ್ಮ ನೋವುಗಳನ್ನೂ ತೊಂದರೆಗಳನ್ನೂ ಮರೆತುಬಿಟ್ಟಿರುವೆಯಾ?
25 ನಾವು ಧೂಳಿಗೆ ತಳ್ಳಲ್ಪಟ್ಟವರಾಗಿದ್ದೇವೆ.
ನಮ್ಮ ಶರೀರವು ನೆಲಕ್ಕೆ ಹತ್ತಿಕೊಂಡಿದೆ.
26 ಎದ್ದು ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯ ನಿಮಿತ್ತ ನಮ್ಮನ್ನು ರಕ್ಷಿಸು.
14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು. 15 ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಆಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೊಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.” 16 ಇವು ಯೆಹೋವನ ಮಾತುಗಳು.
“ಆಗ ನನ್ನನ್ನು ನೀನು ‘ನನ್ನ ಗಂಡ’ ಎಂದು ಕರೆಯುವೆ. ‘ನನ್ನ ಬಾಳನು’ ಎಂದು ಕರೆಯುವದಿಲ್ಲ. 17 ನಾನು ಆಕೆಯ ಬಾಯಿಯಿಂದ ಬಾಳ್ ದೇವರುಗಳ ಹೆಸರನ್ನು ತೆಗೆದುಬಿಡುವೆನು. ಆಮೇಲೆ ಜನರು ಎಂದಿಗೂ ಬಾಳನ ಹೆಸರೆನ್ನೆತ್ತುವದಿಲ್ಲ.
18 “ಆ ಸಮಯದಲ್ಲಿ ನಾನು ಇಸ್ರೇಲರಿಗೋಸ್ಕರವಾಗಿ ಅಡವಿಯ ಮೃಗಗಳೊಂದಿಗೂ ಆಕಾಶದ ಪಕ್ಷಿಗಳೊಂದಿಗೂ ನೆಲದ ಮೇಲೆ ಹರಿದಾಡುವ ಜಂತುಗಳೊಂದಿಗೂ ಒಡಂಬಡಿಕೆ ಮಾಡುವೆನು. ನಾನು ಯುದ್ಧದ ಆಯುಧ, ಬಿಲ್ಲು, ಖಡ್ಗಗಳನ್ನು ತುಂಡು ಮಾಡುವೆನು. ಆ ದೇಶದೊಳಗೆ ಯಾವ ಆಯುಧವೂ ಇರದು. ಆಗ ಇಸ್ರೇಲಿನ ಜನರು ನಿಶ್ಟಿಂತೆಯಿಂದ ಮಲಗುವರು. 19 ಆಗ ನಾನು (ಯೆಹೋವನು) ನಿನ್ನನ್ನು ಒಳ್ಳೆಯತನದಿಂದಲೂ ನ್ಯಾಯದಿಂದಲೂ ಪ್ರೀತಿಯಿಂದಲೂ ಕರುಣೆಯಿಂದಲೂ ಕೂಡಿರುವ ನಿರಂತರವಾದ ವಧುವನ್ನಾಗಿ ಮಾಡುವೆನು. 20 ನಿನ್ನನ್ನು ನಾನು ನನ್ನ ನಂಬಿಗಸ್ತಳಾದ ವಧುವನ್ನಾಗಿ ಮಾಡುವೆನು. ಆಗ ನೀನು ನನ್ನನ್ನು ನಿಜವಾಗಿಯೂ ಅರಿತುಕೊಳ್ಳುವೆ. 21 ಆಗ ನಾನು ನಿನಗೆ ಪ್ರತಿಕ್ರಿಯೆ ತೋರ್ಪಡಿಸುವೆನು.” ಇದು ಯೆಹೋವನು ಹೇಳಿದ ಮಾತು:
“ನಾನು ಆಕಾಶದೊಂದಿಗೆ ಮಾತಾಡಲು
ಅದು ಭೂಮಿಯ ಮೇಲೆ ಮಳೆಗರೆಯುವದು.
22 ಭೂಮಿಯು ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕೊಡುವದು.
ಇಜ್ರೇಲಿನ ಅವಶ್ಯಕತೆಗಳನ್ನು ಅವು ದೊರಕಿಸುವದು.
23 ಆಕೆಯ ದೇಶದಲ್ಲಿ ನಾನು ಬೀಜ ಬಿತ್ತುವೆನು.
ನಾನು ಲೋರುಹಾಮಳಿಗೆ ಕರುಣೆ ತೋರುವೆನು.
ಲೋ ಅಮ್ಮಿಗೆ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು.
ಆಗ ಅವರು, ‘ನೀನು ನಮ್ಮ ದೇವರು’ ಎಂದು ಹೇಳುವರು.”
ಗುಲಾಮಳಾಗಿದ್ದ ಗೋಮೆರಳನ್ನು ಹೋಶೇಯನು ಕ್ರಯಕೊಟ್ಟು ಹಿಂದಕ್ಕೆ ಪಡಕೊಂಡದ್ದು
3 ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.”
2 ನಾನು ಹದಿನೈದು ತುಂಡು ಬೆಳ್ಳಿಯನ್ನೂ ಒಂಭತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಆಕೆಯನ್ನು ಕೊಂಡುಕೊಂಡೆನು. 3 ಬಳಿಕ ನಾನು ಆಕೆಗೆ, “ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು” ಎಂದು ಹೇಳಿದೆನು.
4 ಅದೇ ರೀತಿಯಲ್ಲಿ, ಇಸ್ರೇಲಿನ ಜನರು ಬಹಳ ದಿವಸಗಳ ತನಕ ಅರಸನಾಗಲಿ ಅಧಿಪತಿಯಾಗಲಿ ಇಲ್ಲದೆ ಇರುವರು. ಅವರು ಯಜ್ಞವಿಲ್ಲದೆ ಇರುವರು, ಸ್ಮಾರಕಸ್ತಂಭಗಳೂ ಇರುವದಿಲ್ಲ. ಅವರಲ್ಲಿ ಏಫೋದ್ ಇರುವದಿಲ್ಲ; ಅಲ್ಲದೆ ಮನೆದೇವತೆಯೂ ಇರುವದಿಲ್ಲ. 5 ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು.
ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ
16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.
20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ
3 ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International