Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 85

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ನಿನ್ನ ರೌದ್ರವನ್ನು ತೊರೆದುಬಿಡು.
    ಉಗ್ರ ಕೋಪದಿಂದಿರಬೇಡ.
ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
    ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
    ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
    ನಿನ್ನ ಜನರನ್ನು ಸಂತೋಷಗೊಳಿಸು.
ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
    ನಮ್ಮನ್ನು ರಕ್ಷಿಸು.

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಹೋಶೇಯ 1:11-2:15

11 “ಆಗ ಇಸ್ರೇಲಿನ ಪ್ರಜೆಗಳು ಮತ್ತು ಯೆಹೂದ ಪ್ರಾಂತ್ಯದ ಪ್ರಜೆಗಳು ಒಂದಾಗಿ ಸೇರಲ್ಪಡುವರು. ತಮಗೆ ಒಬ್ಬ ಅರಸನನ್ನು ಅವರು ಆರಿಸಿಕೊಳ್ಳುವರು. ಅವರ ಜನಾಂಗಕ್ಕೆ ಆ ದೇಶವು ಸಾಲದೆ ಹೋಗುವದು. ಇಜ್ರೇಲನ ದಿನವು ನಿಜವಾಗಿಯೂ ಮಹತ್ವವುಳ್ಳದ್ದಾಗಿರುವದು.”

“ಆಗ ನೀವು ನಿಮ್ಮ ಸಹೋದರರಿಗೆ, ‘ನೀವು ನನ್ನ ಜನರು’ ಎಂದು ಹೇಳುವಿರಿ. ಮತ್ತು ನಿಮ್ಮ ಸಹೋದರಿಯರಿಗೆ, ‘ಆತನು ನಿಮ್ಮ ಮೇಲೆ ಕರುಣೆ ಇಟ್ಟಿರುತ್ತಾನೆ’ ಎಂದು ಹೇಳುವಿರಿ.

“ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಪ್ರಿಯತಮರನ್ನು ತೆಗೆದುಹಾಕಲು ಹೇಳಿರಿ. ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು. ಆಕೆಯ ಮಕ್ಕಳನ್ನು ನಾನು ಕನಿಕರಿಸೆನು. ಯಾಕೆಂದರೆ ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳು. ಅವರ ತಾಯಿಯು ವೇಶ್ಯೆಯಂತೆ ವರ್ತಿಸಿದಳು. ತಾನು ನಡಿಸಿದ ಕೃತ್ಯಗಳಿಗಾಗಿ ಆಕೆ ನಾಚಿಕೆಪಡಬೇಕು. ಆಕೆಯು ಹೀಗೆಂದುಕೊಳ್ಳುತ್ತಿದ್ದಾಳೆ, ‘ನಾನು ನನ್ನ ಪ್ರಿಯತಮರ ಬಳಿಗೆ ಹೋಗುವೆನು. ಅವರು ನನಗೆ ಅನ್ನ ನೀರನ್ನು ಕೊಡುವರು. ನನಗೆ ಉಣ್ಣೆಯನ್ನೂ, ನಾರುಮಡಿಯನ್ನೂ ಕೊಡುವರು. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆಯನ್ನೂ ಕೊಡುವರು.’

“ಅದಕ್ಕಾಗಿ ಯೆಹೋವನಾದ ನಾನು ಇಸ್ರೇಲರ ಮಾರ್ಗವನ್ನು ಮುಳ್ಳುಗಳಿಂದ ಮುಚ್ಚಿಬಿಡುವೆನು. ನಾನು ಗೋಡೆ ಕಟ್ಟುವೆನು. ಆಗ ಅವಳು ತನ್ನ ದಾರಿಯನ್ನು ಕಂಡುಕೊಳ್ಳಲಾರಳು. ಆಕೆಯು ತನ್ನ ಪ್ರಿಯತಮರ ಹಿಂದೆ ಓಡಿಹೋದರೂ ಅವರನ್ನು ಹಿಡಿಯಲಾರಳು. ಆಕೆಯು ತನ್ನ ಪ್ರಿಯತಮರನ್ನು ಹುಡುಕುವಳು. ಆದರೆ ಅವರು ಆಕೆಗೆ ಸಿಗುವುದಿಲ್ಲ. ಆಗ ಆಕೆ ಹೀಗೆ ಹೇಳುವಳು, ‘ನಾನು ನನ್ನ ಮೊದಲನೇ ಪತಿಯ ಬಳಿಗೆ (ಯೆಹೋವನು) ಹೋಗುವೆನು. ನಾನು ಆತನೊಂದಿಗೆ ಇದ್ದಾಗ ನನ್ನ ಜೀವಿತವು ಎಷ್ಟೋ ಚೆನ್ನಾಗಿತ್ತು. ಈಗಿನ ನನ್ನ ಜೀವಿತಕ್ಕಿಂತ ಆಗಿನ ಜೀವಿತವು ಎಷ್ಟೋ ಮೇಲಾಗಿತ್ತು.’

“ಆಕೆಗೆ (ಇಸ್ರೇಲಿಗೆ) ನಾನು (ಯೆಹೋವನು) ಧಾನ್ಯ, ಎಣ್ಣೆ, ದ್ರಾಕ್ಷಾರಸವನ್ನು ಕೊಟ್ಟವನೆಂದು ತಿಳಿದಿಲ್ಲ. ಆಕೆಗೆ ಹೆಚ್ಚೆಚ್ಚಾಗಿ ಬೆಳ್ಳಿಬಂಗಾರಗಳನ್ನು ಕೊಡುತ್ತಾ ಬಂದೆನು. ಆದರೆ ಆ ಬೆಳ್ಳಿಬಂಗಾರವನ್ನು ಇಸ್ರೇಲ್ ಬಾಳನ ವಿಗ್ರಹಗಳನ್ನು ತಯಾರಿಸಲು ಉಪಯೋಗಿಸಿದಳು. ಆದ್ದರಿಂದ ನಾನು ಹಿಂತಿರುಗಿ ಬರುವೆನು. ನಾನು ಕೊಟ್ಟಿರುವ ಧಾನ್ಯವು ಕೊಯ್ಲಿಗೆ ತಯಾರಾದ ಅವಳಿಂದ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ದ್ರಾಕ್ಷಿಹಣ್ಣು ಪಕ್ವವಾಗಿದ್ದಾಗ ನಾನು ಬಂದು ನನ್ನ ದ್ರಾಕ್ಷಾರಸವನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಕೊಟ್ಟಿರುವ ಉಣ್ಣೆ ಮತ್ತು ನಾರಿನ ಬಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಅದನ್ನು ಅವಳಿಗೆ ತನ್ನ ಬೆತ್ತಲೆ ಶರೀರವನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಕೊಟ್ಟಿದ್ದೆನು. 10 ಈಗ ನಾನು ಆಕೆಯನ್ನು ಬಟ್ಟೆಯನ್ನು ಬಿಚ್ಚಿಹಾಕುವೆನು. ಆಕೆಯ ಬೆತ್ತಲೆತನವನ್ನು ಆಕೆಯ ಪ್ರಿಯತಮರೆಲ್ಲರೂ ನೋಡುವರು. ನನ್ನ ಕೈಯೊಳಗಿಂದ ಯಾರೂ ಆಕೆಯನ್ನು ರಕ್ಷಿಸಲಾರರು. 11 ನಾನು (ದೇವರು) ಆಕೆಯ ಉಲ್ಲಾಸಗಳನ್ನು ಅವಳಿಂದ ತೆಗೆಯುವೆನು. ಆಕೆಯ ಹಬ್ಬದ ದಿನಗಳು, ಅಮಾವಾಸ್ಯೆಯ ಹಬ್ಬ, ಸಬ್ಬತ್ ದಿನಗಳನ್ನು ಆಕೆಯಿಂದ ತೆಗೆದುಬಿಡುವೆನು. 12 ಆಕೆಯ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡುವೆನು. ‘ಇವುಗಳನ್ನು ನನ್ನ ಪ್ರಿಯತಮರು ನನಗೆ ಕೊಟ್ಟರು’ ಎಂದು ಆಕೆ ಹೇಳುತ್ತಾಳೆ. ಆದರೆ ನಾನು ಆಕೆಯ ತೋಟವನ್ನೇ ಬದಲಾಯಿಸುವೆನು. ಅದು ದಟ್ಟ ಅಡವಿಯಂತೆ ಆಗುವದು. ಅದರಲ್ಲಿದ್ದ ಮರಗಳ ಹಣ್ಣನ್ನು ಕಾಡುಪ್ರಾಣಿಗಳು ಬಂದು ತಿನ್ನುವವು.

13 “ಆಕೆಯು ಬಾಳನ ಸೇವೆಮಾಡಿದ್ದುದರಿಂದ ನಾನು ಆಕೆಯನ್ನು ಶಿಕ್ಷಿಸುವೆನು. ಬಾಳನಿಗೆ ಆಕೆ ಧೂಪ ಹಾಕಿದಳು. ಆಕೆ ವಸ್ತ್ರಾಭರಣಗಳಿಂದ ಭೂಷಿತಳಾಗಿ ಮೂಗುತಿಯನ್ನು ಧರಿಸಿಕೊಂಡು ತನ್ನ ಪ್ರೇಮಿಗಳ ಬಳಿಗೆ ಹೋದಳು. ನನ್ನನ್ನು ಮರೆತುಬಿಟ್ಟಳು.” ಇದು ಯೆಹೋವನು ಹೇಳಿದ ಮಾತು.

14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು. 15 ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಆಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೊಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.”

ಲೂಕ 8:22-25

ಯೇಸುವಿನ ಶಕ್ತಿಯನ್ನು ಶಿಷ್ಯರು ಕಂಡರು

(ಮತ್ತಾಯ 8:23-27; ಮಾರ್ಕ 4:35-41)

22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು. 23 ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು. 24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು.

ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು. 25 ಯೇಸು ತನ್ನ ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ನಂಬಿಕೆ?” ಎಂದು ಕೇಳಿದನು.

ಶಿಷ್ಯರು ಭಯಪಟ್ಟರು ಮತ್ತು ವಿಸ್ಮಯಗೊಂಡರು. “ಈತನು ಯಾರಿರಬಹುದು? ಈತನು ಗಾಳಿಗೂ ನೀರಿಗೂ ಆಜ್ಞಾಪಿಸುತ್ತಾನೆ. ಅವು ವಿಧೇಯವಾಗುತ್ತವೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International