Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರರು: ಕೋರಹೀಯರು.
85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
2 ನಿನ್ನ ಜನರ ದ್ರೋಹವನ್ನು ಕ್ಷಮಿಸು!
ಅವರ ಪಾಪಗಳನ್ನು ಅಳಿಸಿಬಿಡು!
3 ನಿನ್ನ ರೌದ್ರವನ್ನು ತೊರೆದುಬಿಡು.
ಉಗ್ರ ಕೋಪದಿಂದಿರಬೇಡ.
4 ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
5 ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
6 ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
ನಿನ್ನ ಜನರನ್ನು ಸಂತೋಷಗೊಳಿಸು.
7 ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
ನಮ್ಮನ್ನು ರಕ್ಷಿಸು.
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
ಇಸ್ರೇಲ್ ಮತ್ತು ಯೆಹೂದವು ಪಾಪದಲ್ಲಿ ಬೀಳಲು ಅವರ ನಾಯಕರೇ ಕಾರಣ
5 “ಯಾಜಕರೇ, ಇಸ್ರೇಲ್ ಜನಾಂಗವೇ, ಅರಸನ ಪರಿವಾರದವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಯಾಕೆಂದರೆ ನಿಮಗೆ ನ್ಯಾಯತೀರ್ಪು ಬಂದಿದೆ.
“ಮಿಚ್ಪದಲ್ಲಿ ನೀವು ಉರುಲಿನಂತೆ ಇದ್ದಿರಿ. ತಾಬೋರಿನಲ್ಲಿ ನೆಲದ ಮೇಲೆ ಹರಡಿಸಿದ್ದ ಬಲೆಯಂತೆ ಇದ್ದಿರಿ. 2 ನೀವು ಅನೇಕಾನೇಕ ಕೆಟ್ಟ ಸಂಗತಿಗಳನ್ನು ಮಾಡಿದ್ದೀರಿ. ಆದ್ದರಿಂದ ನಿಮ್ಮೆಲ್ಲರನ್ನು ನಾನು ಶಿಕ್ಷಿಸುತ್ತೇನೆ. 3 ಎಫ್ರಾಯೀಮೇ, ನನಗೆ ಗೊತ್ತುಂಟು. ಇಸ್ರೇಲ್ ಮಾಡಿದ ವಿಷಯಗಳೆಲ್ಲವನ್ನು ನಾನು ಬಲ್ಲೆನು. ಎಫ್ರಾಯೀಮೇ, ನೀನು ಈಗಲೂ ಸೂಳೆಯಂತೆ ವರ್ತಿಸುತ್ತಿರುವೆ. ತನ್ನ ಪಾಪಗಳಿಂದ ಇಸ್ರೇಲ್ ಮಲಿನವಾಗಿದೆ. 4 ಇಸ್ರೇಲಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆ ದುಷ್ಕೃತ್ಯಗಳು ಅವರನ್ನು ತಮ್ಮ ದೇವರ ಬಳಿಗೆ ಹಿಂತಿರುಗಿ ಬಾರದಂತೆ ಮಾಡುತ್ತಿವೆ. ಅವರು ಯಾವಾಗಲೂ ಇತರ ದೇವರುಗಳ ಹಿಂದೆ ಹೇಗೆ ಹೋಗೋಣ ಎಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಅವರಿಗೆ ಯೆಹೋವನ ಪರಿಚಯವಿಲ್ಲ. 5 ಇಸ್ರೇಲಿನ ಹೆಮ್ಮೆಯು ಅವರಿಗೆ ವಿರುದ್ಧವಾಗಿ ಸಾಕ್ಷಿನೀಡುತ್ತದೆ. ಇಸ್ರೇಲ್ ಮತ್ತು ಎಫ್ರಾಯೀಮ್ ತಮ್ಮ ಪಾಪಗಳಿಂದಲೇ ಮುಗ್ಗರಿಸುವರು. ಯೆಹೂದವೂ ಅವರೊಂದಿಗೆಯೇ ಮುಗ್ಗರಿಸುವದು.
6 “ಜನರ ನಾಯಕರು ಯೆಹೋವನನ್ನು ಹುಡುಕಾಡುವರು. ಅವರು ತಮ್ಮ ಕುರಿದನಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವರು. ಆದರೆ ಅವರು ಯೆಹೋವನನ್ನು ಕಂಡುಕೊಳ್ಳುವದಿಲ್ಲ. ಯಾಕೆಂದರೆ ಆತನು ಅವರನ್ನು ಬಿಟ್ಟುಹೋಗಿರುತ್ತಾನೆ. 7 ಅವರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರ ಮಕ್ಕಳು ಅನ್ಯರಿಗೆ ಹುಟ್ಟಿದ್ದಾರೆ. ಆದ್ದರಿಂದ ಈಗ ಆತನು ಅವರನ್ನೂ ಅವರ ದೇಶವನ್ನೂ ತಿರುಗಿ ನಾಶಮಾಡುವನು.”
ಇಸ್ರೇಲಿನ ನಾಶನದ ಪ್ರವಾದನೆ
8 “ಗಿಬ್ಯದಲ್ಲಿ ಕೊಂಬನ್ನೂದು,
ರಾಮದಲ್ಲಿ ತುತ್ತೂರಿಯನ್ನೂದು.
ಬೇತಾವೆನಿನಲ್ಲಿ ಎಚ್ಚರಿಕೆಯನ್ನು ನೀಡು.
ಬೆನ್ಯಾಮೀನನೇ, ವೈರಿಯು ನಿನ್ನ ಹಿಂದೆಯೇ ಇದ್ದಾನೆ.
9 ಶಿಕ್ಷೆಯು ವಿಧಿಸಲ್ಪಡುವಾಗ
ಎಫ್ರಾಯೀಮ್ ಬರಿದಾಗುವದು.
ಇದು ಖಂಡಿತವಾಗಿಯೂ ನೆರವೇರುವದೆಂದು
ಯೆಹೋವನಾದ ನಾನು ಇಸ್ರೇಲ್ ಕುಟುಂಬಗಳಿಗೆ ತಿಳಿಸುತ್ತಿದ್ದೇನೆ.
10 ಯೆಹೂದದ ನಾಯಕರು ಪರರ ಆಸ್ತಿಯನ್ನು ದೋಚುವ ಕಳ್ಳರಂತಿದ್ದಾರೆ.
ಯೆಹೋವನಾದ ನಾನು ಅವರ ಮೇಲೆ ನನ್ನ ಕೋಪವನ್ನು ನೀರಿನಂತೆ ಸುರಿಸುವೆನು.
11 ಎಫ್ರಾಯೀಮ್ ಶಿಕ್ಷಿಸಲ್ಪಡುವನು.
ಅವನು ದ್ರಾಕ್ಷಿಹಣ್ಣಿನಂತೆ ನಜ್ಜುಗುಜ್ಜಾಗುವನು.
ಕಾರಣವೇನೆಂದರೆ, ಅವನು ಹೊಲಸನ್ನು ಹಿಂಬಾಲಿಸಲು ತೀರ್ಮಾನಿಸಿದ್ದಾನೆ.
12 ನಾನು ಎಫ್ರಾಯೀಮನನ್ನು ನಾಶಮಾಡುವೆನು, ನುಸಿಯು ಬಟ್ಟೆಯನ್ನು ನಾಶಮಾಡುವ ರೀತಿಯಲ್ಲಿ,
ಮರದ ತುಂಡನ್ನು ಗೆದ್ದಲು ನಾಶಮಾಡುವಂತೆ ಯೆಹೂದವನ್ನು ನಾಶಮಾಡುವೆನು.
13 ಎಫ್ರಾಯೀಮು ತನ್ನ ವ್ಯಾಧಿಯನ್ನು ನೋಡಿದನು.
ಯೆಹೂದವು ತನ್ನ ಗಾಯಗಳನ್ನು ನೋಡಿದನು.
ಆಮೇಲೆ ಸಹಾಯಕ್ಕಾಗಿ ಅಶ್ಶೂರ್ಯರ ಬಳಿಗೆ ಹೋದರು.
ಆ ಮಹಾ ಅರಸನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಆದರೆ ಆ ಅರಸನು ನಿಮ್ಮನ್ನು ಗುಣಮಾಡನು.
ನಿಮ್ಮ ಗಾಯಗಳನ್ನು ಗುಣಮಾಡಲು ಸಾಧ್ಯವಿಲ್ಲ.
14 ಯಾಕೆಂದರೆ ನಾನು ಎಫ್ರಾಯೀಮನಿಗೆ ಸಿಂಹದಂತಿರುವೆನು.
ಯೆಹೂದ ಜನಾಂಗದವರಿಗೆ ನಾನು ಪ್ರಾಯದ ಸಿಂಹದಂತಿರುವೆನು.
ಹೌದು, ಯೆಹೋವನಾದ ನಾನು ಅವರನ್ನು ಹರಿದು ಚೂರುಚೂರಾಗಿ ಮಾಡುವೆನು.
ನಾನು ಅವರನ್ನು ಎತ್ತಿಕೊಂಡು ಹೋಗುವೆನು.
ಯಾರೂ ಅವರನ್ನು ನನ್ನಿಂದ ರಕ್ಷಿಸಲಾರರು.
15 ಜನರು ತಮ್ಮ ದೋಷವನ್ನು ಒಪ್ಪಿಕೊಳ್ಳುವ ತನಕ
ನಾನು ನನ್ನ ಸ್ಥಳಕ್ಕೆ ಹಿಂತಿರುಗಿ ಹೋಗುವೆನು,
ಅವರು ನನ್ನನ್ನು ಹುಡುಕುವರು.
ಹೌದು, ತಮ್ಮ ಸಂಕಟದಲ್ಲಿ ನನ್ನನ್ನು ಹುಡುಕಲು ಅತಿಯಾಗಿ ಪ್ರಯತ್ನಿಸುವರು.”
22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ. 23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು. 24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ. 25 ಯೇಸುವಿನ ಬಗ್ಗೆ ದಾವೀದನು ಹೀಗೆ ಹೇಳಿದ್ದಾನೆ:
‘ಪ್ರಭುವು ಯಾವಾಗಲೂ ನನ್ನ ಮುಂದೆ ಇರುವುದನ್ನು ನಾನು ನೋಡುತ್ತಿದ್ದೆನು;
ನನ್ನನ್ನು ಸುರಕ್ಷಿತವಾಗಿಡಲು ಆತನು ನನ್ನ ಬಲಗಡೆಯಲ್ಲಿದ್ದಾನೆ.
26 ಆದ್ದರಿಂದ ನನ್ನ ಹೃದಯವು ಹರ್ಷಿಸುತ್ತದೆ.
ನನ್ನ ಬಾಯಿ ಆನಂದದಿಂದ ಮಾತಾಡುತ್ತದೆ.
ಹೌದು, ನನ್ನ ದೇಹವು ಸಹ ನಿರೀಕ್ಷೆಯಿಂದ ಜೀವಿಸುವುದು;
27 ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ತೊರೆದುಬಿಡುವುದಿಲ್ಲ.
ನಿನ್ನ ಪರಿಶುದ್ಧನ ದೇಹವು ಸಮಾಧಿಯಲ್ಲಿ ಕೊಳೆಯಲು ನೀನು ಅವಕಾಶ ಕೊಡುವುದಿಲ್ಲ.
28 ಹೇಗೆ ಜೀವಿಸಬೇಕೆಂಬುದನ್ನು ನೀನು ನನಗೆ ಉಪದೇಶಿಸಿದೆ.
ನಿನ್ನ ಪ್ರಸನ್ನತೆಯು ನನ್ನಲ್ಲಿ ಮಹಾ ಆನಂದವನ್ನು ಉಂಟುಮಾಡುವುದು.’(A)
29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ. 30 ದಾವೀದನು ಒಬ್ಬ ಪ್ರವಾದಿಯಾಗಿದ್ದನು[a] ಮತ್ತು ‘ನಿನ್ನ ಕುಟುಂಬದ ಒಬ್ಬನನ್ನು ನಿನ್ನಂತೆಯೇ ರಾಜನನ್ನಾಗಿ ಮಾಡುವೆನು’ ಎಂದು ದೇವರು ಅವನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದು ಅವನಿಗೆ ಗೊತ್ತಿತ್ತು. 31 ಅದು ನೆರವೇರುವುದಕ್ಕಿಂತ ಮೊದಲೇ ದಾವೀದನಿಗೆ ತಿಳಿದಿತ್ತು. ಆದಕಾರಣ ದಾವೀದನು ಪುನರುತ್ಥಾನ ಹೊಂದುವ ಕ್ರಿಸ್ತನ ಬಗ್ಗೆ,
‘ಆತನನ್ನು ಪಾತಾಳದಲ್ಲಿ ಬಿಡಲ್ಪಡಲಿಲ್ಲ.
ಆತನ ದೇಹವು ಸಮಾಧಿಯಲ್ಲಿ ಕೊಳೆಯಲಿಲ್ಲ’
ಎಂದಿದ್ದಾನೆ. 32 ಆದ್ದರಿಂದ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದು ಯೇಸುವನ್ನೇ ಹೊರತು ದಾವೀದನನ್ನಲ್ಲ! ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ನಾವು ಆತನನ್ನು ಕಂಡೆವು! 33 ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು. ಈಗ ಯೇಸು ದೇವರೊಂದಿಗಿದ್ದಾನೆ, ದೇವರ ಬಲಗಡೆಯಲ್ಲಿದ್ದಾನೆ. ಈಗ ತಂದೆಯು (ದೇವರು) ಪವಿತ್ರಾತ್ಮನನ್ನು ಯೇಸುವಿಗೆ ಕೊಟ್ಟಿದ್ದಾನೆ. ಪವಿತ್ರಾತ್ಮನನ್ನು ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಯೇಸು ಈಗ ಆ ಆತ್ಮನನ್ನು ಸುರಿಸಿದ್ದಾನೆ. ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು ಇದನ್ನೇ. 34-35 ಪರಲೋಕಕ್ಕೆ ಎತ್ತಲ್ಪಟ್ಟವನು ದಾವೀದನಲ್ಲ, ಯೇಸುವೇ. ದಾವೀದನೇ ಅದರ ಬಗ್ಗೆ ಹೇಳುತ್ತಾ,
‘ಪ್ರಭುವು (ದೇವರು) ನನ್ನ ಪ್ರಭುವಿಗೆ,
ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಗಳಿಗೆ ಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊ ಎಂದು ತಿಳಿಸಿದನು’ ಎಂದಿದ್ದಾನೆ.(B)
36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”
Kannada Holy Bible: Easy-to-Read Version. All rights reserved. © 1997 Bible League International