Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:17-32

17 ನಿನ್ನ ಸೇವಕನಾದ ನನಗೆ ದಯೆತೋರು.
    ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
    ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
    ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
    ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
    ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
    ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
    ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
    ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.

25 ನನಗೆ ಸಾವು ಸಮೀಪಿಸಿದೆ.
    ಯೆಹೋವನೇ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
26 ನನ್ನ ಜೀವಿತದ ಬಗ್ಗೆ ನಿನ್ನೊಂದಿಗೆ ಹೇಳಿಕೊಂಡೆ.
    ಆಗ ನೀನು ನನಗೆ ಉತ್ತರಿಸಿದೆ.
    ಈಗ ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿನ್ನ ಕಟ್ಟಳೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ನೀನು ಮಾಡಿದ ಅದ್ಭುತಕಾರ್ಯಗಳನ್ನು ನನಗೆ ತಿಳಿಯಪಡಿಸು.
28 ನಾನು ದುಃಖಗೊಂಡಿರುವೆ ಮತ್ತು ಆಯಾಸಗೊಂಡಿರುವೆ.
    ನೀನು ನನ್ನನ್ನು ಜ್ಞಾಪಿಸಿಕೊಂಡು ಮತ್ತೆ ಬಲಗೊಳಿಸು.
29 ಮೋಸಮಾರ್ಗದಲ್ಲಿ ಜೀವಿಸಲು ನನ್ನನ್ನು ಬಿಡಬೇಡ.
    ನಿನ್ನ ಉಪದೇಶಗಳಿಂದ ಮಾರ್ಗದರ್ಶನ ಮಾಡು.
30 ನಾನು ಸತ್ಯಮಾರ್ಗವನ್ನು ಆರಿಸಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳುವೆನು.
31 ನಿನ್ನ ಒಡಂಬಡಿಕೆಗೆ ಅಂಟಿಕೊಂಡಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
32 ನಿನ್ನ ಆಜ್ಞೆಗಳಿಗೆ ಹರ್ಷದಿಂದ ವಿಧೇಯನಾಗುವೆನು.
    ನಿನ್ನ ಆಜ್ಞೆಗಳು ನನ್ನನ್ನು ಉಲ್ಲಾಸಗೊಳಿಸುತ್ತವೆ.

ಆಮೋಸ 7:1-6

ಮಿಡತೆಯ ವಿಷಯವಾದ ದರ್ಶನ

ಯೆಹೋವನು ನನಗೆ ಇದನ್ನು ತೋರಿಸಿದನು: ಎರಡನೇ ಬೆಳೆಯು ಬೆಳೆಯಲಾರಂಭಿಸಿದ ಕಾಲದಲ್ಲಿ ಆತನು ಮಿಡತೆಗಳನ್ನು ತಯಾರು ಮಾಡುತ್ತಿದ್ದನು. ಅರಸನು ಮೊದಲನೇ ಬೆಳೆಯನ್ನು ರಾಶಿಮಾಡಿಸಿಕೊಂಡು ಹೋದ ನಂತರದ ಬೆಳೆ ಇದು. ಮಿಡತೆಗಳು ದೇಶದ ಎಲ್ಲಾ ಹುಲ್ಲನ್ನು ತಿಂದುಬಿಟ್ಟವು. ಆ ಬಳಿಕ ನಾನು ಹೇಳಿದ್ದೇನೆಂದರೆ, “ನನ್ನ ಒಡೆಯನಾದ ಯೆಹೋವನೇ, ನಮ್ಮನ್ನು ಕ್ಷಮಿಸು. ಯಾಕೋಬನು ತೀರಾ ದುರ್ಬಲನಾಗಿರುವದರಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಅವನಿಗಾಗಿ ನಾನು ನಿನ್ನನ್ನು ಬೇಡುತ್ತೇನೆ.”

ಆಗ ಯೆಹೋವನು ತನ್ನ ನಿರ್ಧಾರವನ್ನು ಬದಲಿಸಿ ಹೀಗೆಂದನು, “ಅದು ನೆರವೇರುವುದಿಲ್ಲ.”

ಬೆಂಕಿಯ ವಿಷಯವಾದ ದರ್ಶನ

ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ನನಗೆ ತೋರಿಸಿದನು. ದೇವರಾದ ಯೆಹೋವನು ಬೆಂಕಿಯಿಂದ ನ್ಯಾಯತೀರಿಸುವುದಕ್ಕಾಗಿ ಕರೆಯುವುದನ್ನು ಕಂಡೆನು. ಆ ಬೆಂಕಿಯು ಮಹಾ ಸಾಗರವನ್ನು ನಾಶಮಾಡಿತು. ಭೂಮಿಯನ್ನು ತಿಂದುಬಿಡಲೂ ಪ್ರಾರಂಭಿಸಿತು. ಆಗ ನಾನು, “ದೇವರಾದ ಯೆಹೋವನೇ, ಸಾಕು, ನಿಲ್ಲಿಸು ಎಂದು ಬೇಡುತ್ತೇನೆ, ಯಾಕೋಬನು ಇದರಿಂದ ಉಳಿಯಲಿಕ್ಕಿಲ್ಲ. ಅವನು ಇನ್ನೂ ಚಿಕ್ಕವನು” ಅಂದೆನು.

ಆಗ ದೇವರಾದ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ, “ಇದು ಕೂಡಾ ನೆರವೇರದು” ಎಂದು ಹೇಳಿದನು.

ಕೊಲೊಸ್ಸೆಯವರಿಗೆ 1:27-2:7

27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ. 29 ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.

ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.

ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.

ಕ್ರಿಸ್ತನಲ್ಲಿ ನೆಲೆಗೊಂಡಿರಿ

ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International