Revised Common Lectionary (Semicontinuous)
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
18 ನಿಮ್ಮಲ್ಲಿ ಕೆಲವರಿಗೆ ಯೆಹೋವನ
ನ್ಯಾಯತೀರ್ಪಿನ ದಿನವನ್ನು ನೋಡುವ ಮನಸ್ಸಿದೆ.
ಆ ದಿವಸವನ್ನು ಯಾಕೆ ನೀವು ನೋಡಬೇಕು?
ಯೆಹೋವನ ನ್ಯಾಯಾತೀರ್ಪಿನ ದಿನವು ಬೆಳಕನ್ನಲ್ಲ, ಕತ್ತಲನ್ನು ತರುವುದು.
19 ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು
ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ.
ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ
ಗೋಡೆಗೆ ಒರಗಿ ನಿಂತಾಗ
ಒಂದು ಹಾವಿನಿಂದ ಕಚ್ಚಿಸಿಕೊಂಡವರಂತೆ ಇರುವಿರಿ.
20 ಯೆಹೋವನ ನ್ಯಾಯತೀರ್ಪಿನ ದಿವಸವು
ಬೆಳಕಿನ ದಿವಸವಾಗಿರದೆ ಕತ್ತಲೆಯ ದಿವಸವಾಗಿರುವುದು;
ಬೆಳಕಿನ ಮಿಣಕೂ ಇಲ್ಲದ ಅಂಧಕಾರದ ದಿನವಾಗಿರುವುದು.
ಇಸ್ರೇಲಿನ ಆರಾಧನೆಯು ಯೆಹೋವನಿಗೆ ಬೇಕಿಲ್ಲ
21 “ನಿಮ್ಮ ಆರಾಧನಾ ದಿವಸಗಳನ್ನು ನಾನು ದ್ವೇಷಿಸುತ್ತೇನೆ.
ನಾನು ಅವುಗಳನ್ನು ಸ್ವೀಕರಿಸುವುದಿಲ್ಲ.
ನಿಮ್ಮ ಧಾರ್ಮಿಕ ಕೂಟಗಳಲ್ಲಿ ನಾನು ಸಂತೋಷಿಸುವದಿಲ್ಲ.
22 ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ
ನಾನು ಅದನ್ನು ಸ್ವೀಕರಿಸುವುದಿಲ್ಲ.
ಸಮಾಧಾನಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ
ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.
23 ನಿಮ್ಮ ಗಟ್ಟಿಯಾದ ಹಾಡುಗಳನ್ನು ನನ್ನಿಂದ ದೂರ ಮಾಡಿರಿ.
ನಿಮ್ಮ ಹಾರ್ಪ್ ವಾದ್ಯಗಳ ಹಾಡುಗಳನ್ನು ನಾನು ಕೇಳುವುದಿಲ್ಲ.
24 ನಿಮ್ಮ ದೇಶದಿಂದ ನ್ಯಾಯವು ಹರಿಯುವಂತೆ ಮಾಡಿರಿ.
ಎಂದಿಗೂ ಬತ್ತದ ಒರತೆಯಂತೆ ನಿಮ್ಮ ಒಳ್ಳೆತನವು ಹರಿಯಲಿ.
25 ಇಸ್ರೇಲೇ, ನೀನು ನಲವತ್ತು ವರ್ಷ ಮರುಭೂಮಿಯಲ್ಲಿ
ನನಗೆ ಯಜ್ಞಹೋಮಗಳನ್ನು ಅರ್ಪಿಸಿದೆ.
26 ಆದರೂ ನೀನು ನಿನ್ನ ರಾಜನಾದ ಸಕ್ಕೂತನ ಮತ್ತು ಕೈವಾನನ ವಿಗ್ರಹಗಳನ್ನು ತೆಗೆದುಕೊಂಡು ಹೋದೆ.
ಆ ನಕ್ಷತ್ರಗಳನ್ನು ದೇವರುಗಳನ್ನಾಗಿ ನೀನೇ ಮಾಡಿಕೊಂಡೆ.
27 ಆದ್ದರಿಂದ ನಾನು ನಿನ್ನನ್ನು ದಮಸ್ಕದ ಆಚೆಗೆ ಸೆರೆಯಾಳಾಗಿ ಕಳುಹಿಸುವೆನು.”
ಇದು ಯೆಹೋವನ ನುಡಿ.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International