Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 52

ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.

52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
    ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
    ನಾಶನದ ಸಂಚುಗಳನ್ನೇ ಮಾಡುವುದು.
ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
    ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.

ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
    ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.

ಒಳ್ಳೆಯವರು ಇದನ್ನು ಕಂಡು
    ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
    “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
    ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”

ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
    ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
    ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
    ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.

ಆಮೋಸ 5:10-17

10 ಪ್ರವಾದಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಜನರು ಮಾಡುವ ದುಷ್ಕೃತ್ಯಗಳನ್ನು ಖಂಡಿಸುವರು.
    ಜನರು ಪ್ರವಾದಿಗಳನ್ನು ಹಗೆಮಾಡುವರು.
ಪ್ರವಾದಿಗಳು ಒಳ್ಳೆಯದನ್ನು ಸರಳವಾದ ಸತ್ಯಗಳನ್ನು ಉಪದೇಶಿಸುವರು.
    ಆದರೆ ಜನರು ಅವರನ್ನು ದ್ವೇಷಿಸುವರು.
11 ನೀವು ಅನ್ಯಾಯವಾಗಿ ಜನರಿಂದ ಸುಂಕ ವಸೂಲಿ ಮಾಡುವಿರಿ.
    ಗೋದಿಯ ಮೂಟೆಗಳನ್ನು ಅವರಿಂದ ಸುಲುಕೊಳ್ಳುತ್ತೀರಿ.
ಕಲ್ಲುಗಳನ್ನು ಕೊರೆದು ನಿಮಗಾಗಿ ಅಂದವಾದ ಮನೆಗಳನ್ನು ಕಟ್ಟಿಸಿಕೊಳ್ಳುವಿರಿ.
    ಆದರೆ ಆ ಮನೆಗಳಲ್ಲಿ ನೀವು ವಾಸಿಸುವುದಿಲ್ಲ.
ಸುಂದರವಾದ ದ್ರಾಕ್ಷಿತೋಟಗಳನ್ನು ನೆಡುವಿರಿ.
    ಆದರೆ ಅದರ ದ್ರಾಕ್ಷಾರಸವನ್ನು ನೀವು ಕುಡಿಯುವುದಿಲ್ಲ.
12 ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು.
    ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ.
ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ.
    ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ.
    ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.
13 ಆ ಸಮಯದಲ್ಲಿ ಜ್ಞಾನಿಗಳಾದ ಬೋಧಕರು ಸುಮ್ಮನಿರುವರು.
    ಯಾಕೆಂದರೆ ಅದು ಕೆಟ್ಟ ಸಮಯವಾಗಿರುತ್ತದೆ.
14 ದೇವರು ನಿಮ್ಮೊಂದಿಗಿದ್ದಾನೆಂದು ನೀವು ಹೇಳುತ್ತೀರಿ.
    ಆದ್ದರಿಂದ ನೀವು ಕೆಟ್ಟಕಾರ್ಯವನ್ನು ಮಾಡದೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.
ಆಗ ನೀವು ಬದುಕುವಿರಿ.
    ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಯಲ್ಲಿ ಖಂಡಿತವಾಗಿಯೂ ಇರುವನು.
15 ದುಷ್ಟತನವನ್ನು ದ್ವೇಷಿಸಿ ಒಳ್ಳೆಯತನವನ್ನು ಪ್ರೀತಿಸಿರಿ,
    ನಿಮ್ಮ ನ್ಯಾಯಾಲಯಗಳಲ್ಲಿ ನ್ಯಾಯವನ್ನು ಸ್ಧಾಪಿಸಿರಿ.
    ಆಗ ಒಂದುವೇಳೆ ಸರ್ವಶಕ್ತನಾದ ಯೆಹೋವನು
    ಯೋಸೇಫನ ವಂಶದಲ್ಲಿ ಉಳಿದವರಿಗೆ ದಯೆತೋರಿಸಬಹುದು.

ಮಹಾ ಶೋಕದ ದಿನಗಳು ಬರುವವು

16 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು.
    ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು.
    ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು.
    ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.
17 ದ್ರಾಕ್ಷಿತೋಟಗಳಲ್ಲಿ ಜನರು ಯಾಕೆ ಅಳುವರು?
    ಯಾಕೆಂದರೆ ನಾನು ಹಾದುಹೋಗುತ್ತಾ ನಿಮ್ಮನ್ನು ಶಿಕ್ಷಿಸುವೆನು.”
    ಇದು ಯೆಹೋವನ ನುಡಿ.

ಇಬ್ರಿಯರಿಗೆ 5:1-6

ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.

ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:

“ನೀನು ನನ್ನ ಮಗನು.
    ಈ ದಿನ ನಾನು ನಿನ್ನ ತಂದೆಯಾದೆನು.”(A)

ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:

“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
    ಪ್ರಧಾನಯಾಜಕನಾಗಿರುವೆ.”(B)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International