Revised Common Lectionary (Semicontinuous)
ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
7 ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
2 ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.
3 ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
4 ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
5 ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.
6 ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
7 ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
8 ಜನರಿಗೆ ನ್ಯಾಯತೀರಿಸು.
ಯೆಹೋವನೇ, ನನಗೆ ನ್ಯಾಯತೀರಿಸು.
ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
9 ಕೆಟ್ಟವರನ್ನು ದಂಡಿಸು,
ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.
10 ನನ್ನ ಗುರಾಣಿಯು ದೇವರೇ.
ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]
14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.
17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.
ಇಸ್ರೇಲಿಗಾಗಿ ದುಃಖದ ಗೀತೆ
5 ಇಸ್ರೇಲಿನ ಜನರೇ, ಈ ಹಾಡನ್ನು ಕೇಳಿರಿ. ಇದು ನಿಮ್ಮ ಮರಣದ ಗೀತೆ.
2 ಇಸ್ರೇಲ್ ಕುಮಾರಿಯು ಬಿದ್ದಳು.
ಇನ್ನೆಂದಿಗೂ ಆಕೆ ಏಳುವದಿಲ್ಲ.
ಆಕೆ ಒಬ್ಬಂಟಿಗಳಾಗಿ ಧೂಳಿನ ಮೇಲೆ ಬಿದ್ದಿದ್ದಾಳೆ.
ಆಕೆಯನ್ನು ಎಬ್ಬಿಸಲು ಯಾರೂ ಇಲ್ಲ.
3 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ.
“ಸೈನ್ಯಾಧಿಕಾರಿಗಳು ಸಾವಿರ ಮಂದಿಯೊಂದಿಗೆ ಪಟ್ಟಣದ ಹೊರಗೆ ಹೋದರೆ
ನೂರು ಮಂದಿಯೊಂದಿಗೆ ಹಿಂದಿರುಗುವರು.
ಸೈನ್ಯಾಧಿಕಾರಿಗಳು ನೂರು ಮಂದಿಯೊಂದಿಗೆ ಹೋದರೆ
ಕೇವಲ ಹತ್ತು ಮಂದಿಯೊಂದಿಗೆ ಹಿಂದಿರುಗುವರು.”
ಇಸ್ರೇಲರು ಮರಳಿ ಬರುವಂತೆ ಯೆಹೋವನ ಆಗ್ರಹ
4 ಇಸ್ರೇಲ್ ಜನಾಂಗಕ್ಕೆ ಯೆಹೋವನು ಹೀಗೆನ್ನುತ್ತಾನೆ:
“ನನ್ನನ್ನು ಹುಡುಕುತ್ತಾ ಬಂದು ಬದುಕುವವನಾಗು.
5 ಆದರೆ ಬೇತೇಲಿನಲ್ಲಿ ಹುಡುಕಬೇಡ,
ಗಿಲ್ಗಾಲಿನಲ್ಲಿ ಕಾಲಿಡಬೇಡ.
ಗಡಿಯನ್ನು ದಾಟಿ ಬೇರ್ಷೆಬಕ್ಕೆ ಹೋಗಬೇಡ.
ಗಿಲ್ಗಾಲಿನ ಜನರು ಕೈದಿಗಳಂತೆ ತೆಗೆಯಲ್ಪಡುವರು.
ಮತ್ತು ಬೇತೇಲ್ ನಾಶಮಾಡಲ್ಪಡುವದು.
6 ಯೆಹೋವನ ಬಳಿಗೆ ಹೋಗು. ಆಗ ಜೀವಿಸುವೆ.
ಯೆಹೋವನ ಬಳಿಗೆ ನೀನು ಹೋಗದಿದ್ದಲ್ಲಿ ಯೋಸೇಫನ ಮನೆತನಕ್ಕೆ ಬೆಂಕಿಯು ಹಿಡಿಯುವುದು.
ಆ ಬೆಂಕಿಯು ಯೋಸೇಫನ ಮನೆಯನ್ನು ದಹಿಸುವದು.
ಬೇತೇಲಿನಲ್ಲಿ ಅದನ್ನು ಯಾರೂ ನಂದಿಸಲಾರರು.
7-9 ನೀನು ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಬೇಕು.
ದೇವರು ನಕ್ಷತ್ರಪುಂಜಗಳನ್ನು ನಿರ್ಮಿಸಿದ್ದಾನೆ.
ಆತನು ಕತ್ತಲೆಯನ್ನು ಮುಂಜಾನೆಯ ಬೆಳಕನ್ನಾಗಿ ಮಾಡುತ್ತಾನೆ.
ಹಗಲನ್ನು ಕಾರ್ಗತ್ತಲೆಯನ್ನಾಗಿ ಮಾರ್ಪಡಿಸುತ್ತಾನೆ.
ಆತನು ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಹೊಯ್ಯುತ್ತಾನೆ.
ಆತನ ಹೆಸರು ಯೆಹೋವನು.
ಆತನು ಒಂದು ಬಲವಾದ ನಗರವನ್ನು ರಕ್ಷಿಸಿ
ಇನ್ನೊಂದನ್ನು ನಾಶನಕ್ಕೆ ಒಪ್ಪಿಸುತ್ತಾನೆ.”
ಇಸ್ರೇಲರು ನಡಿಸಿದ ದುಷ್ಕೃತ್ಯ
ನೀನು ಒಳ್ಳೆಯತನವನ್ನು ವಿಷಕಾರಿಯನ್ನಾಗಿ ಮಾಡಿದಿ.
ನ್ಯಾಯವನ್ನು ಕೊಲೆಮಾಡಿದಿ. ಅದು ನೆಲದ ಮೇಲೆ ಬೀಳುವಂತೆ ಮಾಡಿದಿ.
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”
Kannada Holy Bible: Easy-to-Read Version. All rights reserved. © 1997 Bible League International