Revised Common Lectionary (Semicontinuous)
ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
7 ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
2 ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.
3 ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
4 ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
5 ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.
6 ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
7 ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
8 ಜನರಿಗೆ ನ್ಯಾಯತೀರಿಸು.
ಯೆಹೋವನೇ, ನನಗೆ ನ್ಯಾಯತೀರಿಸು.
ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
9 ಕೆಟ್ಟವರನ್ನು ದಂಡಿಸು,
ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.
10 ನನ್ನ ಗುರಾಣಿಯು ದೇವರೇ.
ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]
14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.
17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.
6 “ನೀವು ನನ್ನ ಬಳಿಗೆ ಬರುವಂತೆ ಅನೇಕ ಕಾರ್ಯಗಳನ್ನು ಮಾಡಿದೆನು. ನಿಮಗೆ ನಾನು ಊಟಕ್ಕೆ ಕೊಡಲಿಲ್ಲ. ನಿಮ್ಮ ಯಾವ ಪಟ್ಟಣದಲ್ಲಿಯೂ ಆಹಾರವಿಲ್ಲ. ಆದರೂ ನೀವು ನನ್ನ ಬಳಿಗೆ ಹಿಂದಿರುಗಿ ಬರಲಿಲ್ಲ.” ಇದು ಯೆಹೋವನ ನುಡಿ.
7 “ನಾನು ಮಳೆಯನ್ನು ನಿಲ್ಲಿಸಿದೆನು. ಸುಗ್ಗಿಗೆ ಮೂರು ತಿಂಗಳು ಇರುವಾಗಲೇ ಮಳೆಗರೆಯುವುದನ್ನು ನಿಲ್ಲಿಸಿದೆನು. ಆದ್ದರಿಂದ ಪೈರು ಬೆಳೆಯಲಿಲ್ಲ. ಆಮೇಲೆ ನಾನು ಒಂದು ಪಟ್ಟಣದ ಮೇಲೆ ಮಳೆ ಬೀಳುವಂತೆ ಮಾಡಿದೆನು. ಬೇರೆ ಪಟ್ಟಣಗಳ ಮೇಲೆ ಬೀಳದಂತೆ ಮಾಡಿದೆನು. ದೇಶದ ಒಂದು ಭಾಗದಲ್ಲಿ ಮಳೆ ಸುರಿಯಿತು. ಇನ್ನೊಂದು ಭಾಗವು ಒಣಗಿ ಬೆಂಗಾಡಾಗಿತ್ತು. 8 ಹೀಗೆ ಎರಡು ಮೂರು ಪಟ್ಟಣಗಳ ನಿವಾಸಿಗಳು ನೀರಿಗಾಗಿ ಇನ್ನೊಂದು ಪಟ್ಟಣಕ್ಕೆ ಕಷ್ಟಪಟ್ಟು ಕೊಂಡುಹೋದರು. ಆದರೆ ಅಲ್ಲಿ ಎಲ್ಲರಿಗೂ ನೀರು ದೊರಕಲಿಲ್ಲ. ಹೀಗಾದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇವು ಯೆಹೋವನ ನುಡಿಗಳು.
9 “ನಿಮ್ಮ ಬೆಳೆಗಳು ಸೂರ್ಯನ ಶಾಖದಿಂದಲೂ ರೋಗದಿಂದಲೂ ಸಾಯುವಂತೆ ಮಾಡಿದೆನು. ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ನಾನು ನಾಶಮಾಡಿದೆನು. ಮಿಡತೆಗಳು ನಿಮ್ಮ ಅಂಜೂರದ ಮತ್ತು ಆಲೀವ್ ಮರಗಳನ್ನು ತಿಂದುಬಿಟ್ಟವು. ಆದಾಗ್ಯೂ ಸಹಾಯಕ್ಕಾಗಿ ನೀವು ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
10 “ನಾನು ಈಜಿಪ್ಟಿಗೆ ವ್ಯಾಧಿಗಳನ್ನು ಹೇಗೆ ಬರಮಾಡಿದೆನೋ ಹಾಗೆಯೇ ನಿಮಗೂ ಮಾಡಿದೆನು. ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದೆನು. ನಿಮ್ಮ ಕುದುರೆಗಳನ್ನು ತೆಗೆದುಕೊಂಡೆನು. ಹೆಣಗಳ ರಾಶಿಯಿಂದ ನಿಮ್ಮ ಸ್ಥಳವು ದುರ್ವಾಸನೆಯಿಂದ ತುಂಬುವಂತೆ ಮಾಡಿದೆನು. ಆದಾಗ್ಯೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
11 “ಸೊದೋಮ್ ಗೊಮೋರವನ್ನು ನಾಶಮಾಡಿದಂತೆ ನಾನು ನಿಮ್ಮನ್ನು ನಾಶಮಾಡಿದೆನು. ಆ ನಗರಗಳು ಸಂಪೂರ್ಣವಾಗಿ ನಾಶವಾದವು. ನೀವು ಬೆಂಕಿಯಿಂದ ಎಳೆದ ಕೊಳ್ಳಿಯಂತಿದ್ದೀರಿ. ಆದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
12 “ಆದ್ದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಈ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೊ.”
13 ನಾನು ಯಾರು? ನಾನೇ ಪರ್ವತಗಳನ್ನು ನಿರ್ಮಿಸಿದಾತನು.
ನಿಮ್ಮಲ್ಲಿ ಮನಸ್ಸನ್ನು ಉಂಟುಮಾಡಿದಾತನು ನಾನೇ.
ನಾನು ಜನರಿಗೆ ಮಾತನಾಡಲು ಕಲಿಸಿದೆನು.
ಕತ್ತಲೆಯನ್ನು ಬೆಳಕು ಮಾಡಿದೆನು.
ಭೂಮಿಯ ಮೇಲಿರುವ ಪರ್ವತಗಳ ಮೇಲೆ ನಾನು ನಡಿಯುತ್ತೇನೆ.
ನಾನು ಯಾರು? ನನ್ನ ಹೆಸರು ಸೈನ್ಯಗಳ ದೇವರಾದ ಯೆಹೋವನು.
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.
13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.
16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು. 17 ಈ ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International