Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆಮೋಸ 7:7-17

ತೂಗು ಗುಂಡಿನ ದರ್ಶನ

ಯೆಹೋವನು ಈ ದರ್ಶನವನ್ನು ನನಗೆ ದಯಪಾಲಿಸಿದನು. ಕೈಯಲ್ಲಿ ತೂಗುಗುಂಡನ್ನು ಹಿಡಿದುಕೊಂಡು ಗೋಡೆಯ ಬದಿಯಲ್ಲಿ ನಿಂತಿದ್ದನು. ಆ ಗೋಡೆಯು ನೂಲಿನಿಂದ ಗುರುತು ಮಾಡಲ್ಪಟ್ಟಿತ್ತು. ಆಗ ಯೆಹೋವನು ನನಗೆ, “ಆಮೋಸನೇ, ಏನನ್ನು ನೋಡುತ್ತೀ?” ಎಂದು ಕೇಳಿದನು.

ಅದಕ್ಕೆ ನಾನು, “ನೂಲುಗುಂಡು” ಅಂದೆನು.

ಆಗ ನನ್ನ ಒಡೆಯನು, “ನೋಡು, ನನ್ನ ಜನರಾದ ಇಸ್ರೇಲರ ಮೇಲೆ ನೂಲುಗುಂಡನ್ನು ಹಾಕುವೆನು. ಅವರನ್ನು ನಾನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಅವರ ಪಾಪದ ಸ್ಥಳಗಳನ್ನು ನಾನು ತೆಗೆದುಬಿಡುವೆನು. ಇಸಾಕನ ವೇದಿಕೆಗಳೆಲ್ಲಾ ನಾಶವಾಗುವದು. ಇಸ್ರೇಲಿನ ಪವಿತ್ರ ಸ್ಥಳಗಳೆಲ್ಲಾ ಬಂಡೆಯ ರಾಶಿಯಾಗಿ ಮಾರ್ಪಡುವವು. ಯಾರೊಬ್ಬಾಮನ ಕುಟುಂಬದ ಮೇಲೆ ಆಕ್ರಮಣ ಮಾಡಿ ಅವರನ್ನು ಸಂಹರಿಸುವೆನು” ಎಂದು ಹೇಳಿದನು.

ಆಮೋಸನನ್ನು ಪ್ರವಾದಿಸದಂತೆ ಅಮಚ್ಯನು ಪ್ರಯತ್ನಿಸಿದ್ದು

10 ಬೇತೇಲಿನ ಯಾಜಕನಾದ ಅಮಚ್ಯನು ಇಸ್ರೇಲಿನ ಅರಸನಾದ ಯಾರೊಬ್ಬಾಮನಿಗೆ ಈ ಪತ್ರವನ್ನು ಕಳುಹಿಸಿದನು. “ನಿನಗೆ ವಿರುದ್ಧವಾಗಿ ಆಮೋಸನು ಯೋಜನೆಗಳನ್ನು ಮಾಡುತ್ತಿದ್ದಾನೆ. ಇಸ್ರೇಲಿನ ಜನರು ನಿನಗೆ ವಿರುದ್ಧವಾಗಿ ಯುದ್ಧಮಾಡುವಂತೆ ಪ್ರಯತ್ನಿಸುತ್ತಾನೆ. ಅವನು ಎಷ್ಟೆಲ್ಲಾ ಮಾತಾಡುತ್ತಾನೆಂದರೆ, ಈ ದೇಶವು ಅವನ ಮಾತುಗಳನ್ನು ತುಂಬಲು ಸಾಧ್ಯವಿಲ್ಲ. 11 ಅಮೋಸನು, ‘ಯಾರೊಬ್ಬಾಮನು ಕತ್ತಿಯಿಂದ ಸಂಹರಿಸಲ್ಪಡುವನು ಮತ್ತು ಇಸ್ರೇಲಿನ ಜನರು ಸೆರೆಹಿಡಿಯಲ್ಪಟ್ಟವರಾಗಿ ಪರದೇಶಕ್ಕೆ ಒಯ್ಯಲ್ಪಡುವರು’” ಎಂದು ಹೇಳಿದ್ದಾನೆ.

12 ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ, “ಭವಿಷ್ಯವಾದಿಯೇ, ನೀನು ಯೆಹೂದಕ್ಕೆ ಹೋಗಿ ಅಲ್ಲಿ ನಿನ್ನ ಹೊಟ್ಟೆ ತುಂಬಿಸಿಕೊ. ನಿನ್ನ ಪ್ರಸಂಗವನ್ನು ಅಲ್ಲಿಯೇ ಮಾಡು. 13 ಬೇತೇಲಿನಲ್ಲಿ ಇನ್ನು ನೀನು ಪ್ರವಾದಿಸುವದು ಬೇಡ. ಇದು ಯಾರೊಬ್ಬಾಮನ ಪವಿತ್ರಸ್ಥಳ. ಇದು ಇಸ್ರೇಲಿನ ದೇವಾಲಯ” ಎಂದು ಹೇಳಿದನು.

14 ಅದಕ್ಕೆ ಅಮೋಸನು ಅಮಚ್ಯನಿಗೆ, “ಪ್ರವಾದಿಸುವದು ನನ್ನ ಕೆಲಸವಲ್ಲ. ಅಲ್ಲದೆ ನಾನು ಪ್ರವಾದಿಗಳ ಕುಟುಂಬಕ್ಕೂ ಸೇರಿದವನಲ್ಲ. ನಾನು ದನ ಮೇಯಿಸುವವನೂ, ಅತ್ತಿ ಮರಗಳನ್ನು ಹತ್ತಿ ಹಣ್ಣು ಕೀಳುವವನೂ ಆಗಿದ್ದೇನೆ. 15 ನಾನು ಕುರಿಕಾಯುತ್ತಿರುವಾಗ ಯೆಹೋವನು ನನ್ನನ್ನು ಕುರಿಗಳ ಹಿಂದೆ ಹೋಗಬೇಡ ಎಂದು ಕರೆದನು. ಆತನು ನನಗೆ, ‘ನನ್ನ ಜನರಾದ ಇಸ್ರೇಲರ ಬಳಿಗೆ ಹೋಗಿ ಪ್ರವಾದಿಸು’ ಎಂದು ಹೇಳಿದನು. 16 ಆದ್ದರಿಂದ ಯೆಹೋವನ ಸಂದೇಶಕ್ಕೆ ಕಿವಿಗೊಡು. ಆದರೆ ನೀನು, ‘ಇಸ್ರೇಲರಿಗೆ ವಿರುದ್ಧವಾಗಿ ಪ್ರವಾದಿಸಬೇಡ. ಇಸಾಕನ ಕುಟುಂಬದ ವಿರುದ್ಧ ಪ್ರಸಂಗಿಸಬೇಡ’ ಎಂದು ಹೇಳುತ್ತಿ. 17 ಆದರೆ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಹೆಂಡತಿಯು ಪಟ್ಟಣದೊಳಗೆ ವೇಶ್ಯೆಯಾಗುವಳು. ನಿನ್ನ ಗಂಡು, ಹೆಣ್ಣುಮಕ್ಕಳು ಕತ್ತಿಯಿಂದ ಸಾಯುವರು. ಅನ್ಯರು ನಿನ್ನ ದೇಶವನ್ನು ಕಿತ್ತುಕೊಂಡು ತಮ್ಮೊಳಗೆ ಹಂಚಿಕೊಳ್ಳುವರು. ಮತ್ತು ನೀನು ಪರದೇಶದಲ್ಲಿ ಸಾಯುವೆ. ಇಸ್ರೇಲಿನ ಜನರು ಖಂಡಿತವಾಗಿಯೂ ಸೆರೆಹಿಡಿಯಲ್ಪಟ್ಟು ತಮ್ಮ ದೇಶದಿಂದ ಒಯ್ಯಲ್ಪಡುವರು.’”

ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

ಕೊಲೊಸ್ಸೆಯವರಿಗೆ 1:1-14

ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ.

ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿ ನಂಬಿಗಸ್ತರಾದ ಮತ್ತು ಪವಿತ್ರರಾದ ಸಹೋದರ, ಸಹೋದರಿಯರಿಗೆ ನಾನು ಈ ಪತ್ರವನ್ನು ನಮ್ಮ ಸಹೋದರನಾದ ತಿಮೊಥೆಯನ ಜೊತೆಗೂಡಿ ಬರೆಯುತ್ತಿದ್ದೇನೆ. ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರಕಲಿ.

ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯೇ ದೇವರು. ನಾವು ದೇವರಿಗೆ ಸ್ತೋತ್ರ ಮಾಡಲು ಕಾರಣವೇನೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ, ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದ್ದೇವೆ. 5-6 ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ. ನೀವು ಎಪಫ್ರನಿಂದ ದೇವರ ಕೃಪೆಯ ಬಗ್ಗೆ ತಿಳಿದುಕೊಂಡಿರಿ. ಅವನು ನಮ್ಮ ಜೊತೆಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ನಾವು ಅವನನ್ನು ಪ್ರೀತಿಸುತ್ತೇವೆ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತ ಸೇವಕನಾಗಿದ್ದಾನೆ. ಪವಿತ್ರಾತ್ಮ ಪ್ರೇರಿತವಾದ ನಿಮ್ಮ ಪ್ರೀತಿಯ ಬಗ್ಗೆ ಎಪಫ್ರನು ಸಹ ನಮಗೆ ತಿಳಿಸಿದನು.

ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.

ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.

12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.

ಲೂಕ 10:25-37

ಒಳ್ಳೆಯ ಸಮಾರ್ಯದವನ ಸಾಮ್ಯ

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.

28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.

29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳಲು ಬಯಸಿ, ಯೇಸುವಿಗೆ, “ನಾನು ಪ್ರೀತಿಸಬೇಕಾದ ನೆರೆಯವರು ಯಾರು?” ಎಂದು ಕೇಳಿದನು.

30 ಆಗ ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನು ಜೆರುಸಲೇಮಿನಿಂದ ಇಳಿದು ಜೆರಿಕೊವಿನ ಮಾರ್ಗವಾಗಿ ಹೋಗುತ್ತಿದ್ದನು. ಕೆಲವು ದರೋಡೆಗಾರರು ಅವನನ್ನು ಸುತ್ತುಗಟ್ಟಿದರು. ಅವರು ಅವನ ಬಟ್ಟೆಯನ್ನು ಹರಿದುಹಾಕಿ ಅವನನ್ನು ಹೊಡೆದರು. ಅವನು ಮೇಲೇಳಲಾರದೆ ನೆಲದಮೇಲೆ ಬಿದ್ದುಕೊಂಡನು. ದರೋಡೆಗಾರರು ಅವನನ್ನು ನೆಲದ ಮೇಲೆಯೇ ಬಿಟ್ಟುಹೋದರು. ಅವನು ಸಾಯುವ ಸ್ಥಿತಿಯಲ್ಲಿದ್ದನು.

31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು. 32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.

33 “ಬಳಿಕ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಾ ಆ ಸ್ಥಳಕ್ಕೆ ಬಂದನು. ಅವನು ಗಾಯಗೊಂಡಿದ್ದ ಮತ್ತು ದಾರಿಯಲ್ಲಿ ಬಿದ್ದುಕೊಂಡಿದ್ದ ಮನುಷ್ಯನನ್ನು ನೋಡಿ ಬಹಳ ಮರುಕಗೊಂಡನು. 34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು. 35 ಮರುದಿನ, ಸಮಾರ್ಯದವನು ಎರಡು ಬೆಳ್ಳಿ ನಾಣ್ಯಗಳನ್ನು ಆ ಛತ್ರದವನಿಗೆ ಕೊಟ್ಟು, ‘ಗಾಯಗೊಂಡ ಇವನನ್ನು ಆರೈಕೆ ಮಾಡು. ಇದಕ್ಕಿಂತ ಹೆಚ್ಚಾಗಿ ಖರ್ಚಾದರೆ ನಾನು ಮತ್ತೆ ಬಂದಾಗ ನಿನಗೆ ಕೊಡುತ್ತೇನೆ’ ಎಂದು ಹೇಳಿದನು.”

36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.

37 ಧರ್ಮೋಪದೇಶಕನು, “ಅವನಿಗೆ ಸಹಾಯ ಮಾಡಿದವನೇ” ಎಂದು ಉತ್ತರಿಸಿದನು.

ಆಗ ಯೇಸು ಅವನಿಗೆ, “ಹಾಗಾದರೆ, ನೀನು ಹೋಗಿ ನೆರೆಯವರಿಗೆ[a] ಹಾಗೆಯೇ ಮಾಡು!” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International