Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

ಆಮೋಸ 1:1-2:3

ಪರಿಚಯ

ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು.

ಅರಾಮ್ಯರಿಗೆ ಶಿಕ್ಷೆ

ಆಮೋಸನು ಹೇಳಿದ್ದೇನೆಂದರೆ,
“ಚೀಯೋನಿನಲ್ಲಿ ಯೆಹೋವನು ಸಿಂಹದಂತೆ ಗರ್ಜಿಸುವನು.
    ಜೆರುಸಲೇಮಿನಿಂದ ಆರ್ಭಟಿಸುತ್ತಾನೆ.
ಆಗ ಕುರುಬರ ಹಸಿರು ಹುಲ್ಲುಗಾವಲು ಕಂದುಬಣ್ಣವಾಗಿ ಸಾಯುವುದು.
    ಕರ್ಮೆಲ್ ಬೆಟ್ಟವು ಒಣಗಿ ಬರಡಾಗುವುದು.”

ಯೆಹೋವನು ಹೇಳುವುದೇನೆಂದರೆ, “ದಮಸ್ಕದವರು ನಡಿಸಿದ ಅನೇಕ ಅಪರಾಧಗಳ ನಿಮಿತ್ತವಾಗಿ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಯಾಕೆಂದರೆ ಅವರು ಗಿಲ್ಯಾದಿನ ಜನರನ್ನು ಒಕ್ಕಣೆಗೆ ಉಪಯೋಗಿಸುವ ಕಬ್ಬಿಣದ ಸಲಕರಣೆಗಳಿಂದ ಜಜ್ಜಿಬಿಟ್ಟರು. ಆದರೆ ನಾನು ಹಜಾಯೇಲನ ನಿವಾಸದಲ್ಲಿ ಬೆಂಕಿಯನ್ನು ಪ್ರಾರಂಭಿಸುವೆನು. ಅದು ಬೆನ್ಹದದನ ಭವ್ಯ ಅರಮನೆಗಳನ್ನೆಲ್ಲಾ ಸುಟ್ಟುಹಾಕುವದು.

“ನಾನು ದಮಸ್ಕದ ಹೆಬ್ಬಾಗಿಲುಗಳನ್ನೂ ಒಡೆದುಹಾಕುವೆನು; ಆವೆನ್ ಕಣಿವೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ತೆಗೆದುಬಿಡುವೆನು; ಬೇತ್ ಎದೆನ್‌ನಲ್ಲಿರುವ ಸಾಮರ್ಥ್ಯದ ಗುರುತನ್ನು ಕಿತ್ತುಹಾಕುವೆನು. ಆಗ ಅರಾಮ್ಯರು ಸೋಲಿಸಲ್ಪಟ್ಟವರಾಗಿ ಕೀರ್ ಎಂಬಲ್ಲಿಗೆ ಕೊಂಡೊಯ್ಯುವರು. ಇದು ಯೆಹೋವನ ನುಡಿ.”

ಫಿಲಿಷ್ಟಿಯರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಗಾಜದ ಜನರನ್ನು ಅವರು ಮಾಡಿದ ಅಪರಾಧಗಳ ನಿಮಿತ್ತ ಖಂಡಿತವಾಗಿಯೂ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಇಡೀ ಜನಾಂಗವನ್ನೇ ಎದೋಮಿಗೆ ಗುಲಾಮರನ್ನಾಗಿ ಕಳುಹಿಸಿದರು. ಅದಕ್ಕಾಗಿ ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಈ ಬೆಂಕಿಯು ಗಾಜದ ಎತ್ತರವಾದ ಗೋಪುರಗಳನ್ನು ನಾಶಮಾಡುವದು. ಇದಲ್ಲದೆ, ನಾನು ಅಷ್ಡೋದಿನಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ನಾಶಮಾಡುವೆನು; ಅಷ್ಕೆಲೋನಿನಲ್ಲಿ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು; ಎಕ್ರೋನಿನ ಜನರನ್ನು ಶಿಕ್ಷಿಸುವೆನು. ಆಮೇಲೆ ಅಳಿದುಳಿದ ಫಿಲಿಷ್ಟಿಯರು ಸಾಯುವರು.” ಇದು ಯೆಹೋವನ ನುಡಿ.

ತೂರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ತೂರಿನ ಜನರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಜನಾಂಗದ ಜನರನ್ನೆಲ್ಲಾ ಗುಲಾಮರನ್ನಾಗಿ ಎದೋಮಿಗೆ ಕಳುಹಿಸಿದರು. ಅವರು ತಮ್ಮ ಸಹೋದರರೊಂದಿಗೆ (ಇಸ್ರೇಲಿನೊಂದಿಗೆ) ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟರು. 10 ಆದ್ದರಿಂದ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ತೂರಿನ ಎತ್ತರವಾದ ಬುರುಜುಗಳನ್ನು ನಾಶಮಾಡುವದು.”

ಎದೋಮ್ಯರಿಗೆ ಶಿಕ್ಷೆ

11 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಎದೋಮ್ಯರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಎದೋಮ್ ತನ್ನ ಸಹೋದರನಾದ ಇಸ್ರೇಲನ್ನು ಕತ್ತಿಯಿಂದ ಹತಿಸಿತು. ಎದೋಮ್ ಯಾವ ಕರುಣೆಯನ್ನೂ ತೋರಲಿಲ್ಲ. ಅದರ ಕೋಪವು ನಿರಂತರವಾಗಿ ಮುಂದುವರಿಯಿತು; ಕ್ರೂರಪ್ರಾಣಿಯಂತೆ ಇಸ್ರೇಲನ್ನು ಹರಿದುಹರಿದು ಹಾಕಿತು. 12 ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”

ಅಮ್ಮೋನಿಯರಿಗೆ ಶಿಕ್ಷೆ

13 ಯೆಹೋವನು ಹೇಳುವುದೇನೆಂದರೆ, “ಅನೇಕಾನೇಕ ಅಪರಾಧಗಳನ್ನು ಮಾಡಿದ ಅಮ್ಮೋನಿಯರನ್ನು ನಾನು ಖಂಡಿತವಾಗಿಯೂ ಶಿಕ್ಷಿಸುತ್ತೇನೆ. ಯಾಕೆಂದರೆ ಅವರು ಗಿಲ್ಯಾದಿನ ಗರ್ಭಿಣಿ ಸ್ತ್ರೀಯರನ್ನು ಕೊಂದರು. ಆ ಪ್ರಾಂತ್ಯವನ್ನು ಕೈವಶಮಾಡಿಕೊಂಡು ತಮ್ಮ ದೇಶವನ್ನು ವಿಸ್ತಾರ ಮಾಡುವುದಕ್ಕಾಗಿ ಅವರು ಹೀಗೆ ಮಾಡಿದರು. 14 ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು. 15 ಆಗ ಅವರ ಅರಸನು ಮತ್ತು ನಾಯಕರು ಸೆರೆಹಿಡಿಯಲ್ಪಡುವರು. ಅವರನ್ನೆಲ್ಲ ಒಟ್ಟಿಗೆ ಕೊಂಡೊಯ್ಯಲಾಗುವುದು.” ಈ ಸಂಗತಿಗಳನ್ನೆಲ್ಲ ಯೆಹೋವನು ತಿಳಿಸಿದನು.

ಮೋವಾಬ್ಯರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಮೋವಾಬ್ಯರು ಅನೇಕ ಅಪರಾಧಗಳನ್ನು ಮಾಡಿದ್ದರಿಂದ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಎದೋಮ್ಯರ ಅರಸನ ಎಲುಬುಗಳನ್ನು ಮೋವಾಬ್ಯರು ಸುಟ್ಟು ಸುಣ್ಣವಾಗಿ ಮಾಡಿದರು. ಆದ್ದರಿಂದ ಮೋವಾಬಿನಲ್ಲಿ ನಾನು ಬೆಂಕಿಯನ್ನು ಹಾಕುವೆನು. ಅದು ಕೆರಿಯೋತಿನ ಉನ್ನತ ಗೋಪುರಗಳನ್ನು ನಾಶಮಾಡುವದು. ಅಲ್ಲಿ ಭಯಂಕರವಾದ ಕೂಗಾಟವೂ ತುತ್ತೂರಿಯ ಧ್ವನಿಯೂ ಇರುತ್ತದೆ. ಆಗ ಮೋವಾಬು ಸಾಯುವದು. ಹೀಗೆ ನಾನು ಮೋವಾಬಿನ ಅರಸರಿಗೆ ಅಂತ್ಯವನ್ನು ಮಾಡುವೆನು. ಮೋವಾಬಿನ ಎಲ್ಲಾ ನಾಯಕರುಗಳನ್ನು ಸಾಯಿಸುವೆನು” ಇದು ಯೆಹೋವನ ನುಡಿ.

ಯಾಕೋಬನು 2:14-26

ನಂಬಿಕೆ ಮತ್ತು ಉತ್ತಮ ಕಾರ್ಯಗಳು

14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.

18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.

20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(A) ಅಬ್ರಹಾಮನನ್ನು “ದೇವರ ಸ್ನೇಹಿತ”(B) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.

25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]

26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International