Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 6

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

2 ರಾಜರುಗಳು 6:1-7

ಎಲೀಷ ಮತ್ತು ಕೊಡಲಿ

ಪ್ರವಾದಿಗಳ ಗುಂಪು ಎಲೀಷನಿಗೆ, “ನಾವು ಈ ಸ್ಥಳದಲ್ಲಿಯೇ ವಾಸಮಾಡುತ್ತಿದ್ದೇವೆ. ಆದರೆ ಇದು ನಮಗೆ ತುಂಬಾ ಚಿಕ್ಕದಾಗಿದೆ. ನಾವೆಲ್ಲಾ ಜೋರ್ಡನ್ ನದಿಗೆ ಹೋಗಿ ಸ್ವಲ್ಪ ಮರವನ್ನು ಕಡಿದುಕೊಂಡು ಬರೋಣ. ಪ್ರತಿಯೊಬ್ಬರೂ ಒಂದೊಂದು ದಿಮ್ಮಿಯನ್ನು ತಂದು ನಾವು ವಾಸಿಸಲು ಒಂದು ಮನೆಯನ್ನು ಕಟ್ಟೋಣ” ಎಂದು ಹೇಳಿದರು.

ಎಲೀಷನು, “ಸರಿ, ಹಾಗೆಯೇ ಮಾಡಿ” ಎಂದು ಉತ್ತರಿಸಿದನು.

ಒಬ್ಬ ವ್ಯಕ್ತಿಯು, “ದಯವಿಟ್ಟು ನಮ್ಮ ಜೊತೆಯಲ್ಲಿ ನೀನೂ ಬಾ” ಎಂದನು.

ಎಲೀಷನು, “ಸರಿ, ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.

ಎಲೀಷನು ಪ್ರವಾದಿಗಳ ಗುಂಪಿನೊಂದಿಗೆ ಹೋದನು. ಅವರು ಜೋರ್ಡನ್ ನದಿಯ ಬಳಿಗೆ ಬಂದು ಕೆಲವು ಮರಗಳನ್ನು ಕಡಿಯಲಾರಂಭಿಸಿದರು. ಆದರೆ ಒಬ್ಬನು ಮರವೊಂದನ್ನು ಕಡಿದುರುಳಿಸಿದಾಗ, ಕಬ್ಬಿಣದ ಕೊಡಲಿಯು ಕಾವಿನಿಂದ ಕಳಚಿಕೊಂಡು ನೀರಿನೊಳಕ್ಕೆ ಬಿದ್ದುಬಿಟ್ಟಿತು. ಆ ಮನುಷ್ಯನು, “ಅಯ್ಯೋ, ಒಡೆಯನೇ! ನಾನು ಆ ಕೊಡಲಿಯನ್ನು ಎರವಲಾಗಿ ತಂದಿದ್ದೇನಲ್ಲಾ” ಎಂದು ಕೂಗಿಕೊಂಡನು.

ದೇವಮನುಷ್ಯನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು.

ಆ ಮನುಷ್ಯನು ಕೊಡಲಿಯು ಬಿದ್ದ ಸ್ಥಳವನ್ನು ಎಲೀಷನಿಗೆ ತೋರಿಸಿದನು. ಆಗ ಎಲೀಷನು ಒಂದು ಕಡ್ಡಿಯನ್ನು ಮುರಿದು ಅದನ್ನು ನೀರಿನೊಳಕ್ಕೆ ಎಸೆದನು. ಆ ಕಡ್ಡಿಯು ಕಬ್ಬಿಣದ ಕೊಡಲಿಯನ್ನು ತೇಲುವಂತೆ ಮಾಡಿತು. ಎಲೀಷನು, “ಕೊಡಲಿಯನ್ನು ಎತ್ತಿಕೊ” ಎಂದು ಹೇಳಿದನು. ಆ ಮನುಷ್ಯನು ಅಲ್ಲಿಗೆ ಹೋಗಿ, ಕೊಡಲಿಯನ್ನು ತೆಗೆದುಕೊಂಡನು.

ಲೂಕ 10:13-16

ನಂಬಲೊಲ್ಲದ ಜನರಿಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 11:20-24)

13 “ಕೊರಾಜಿನೇ, ಬೆತ್ಸಾಯಿದವೇ,[a] ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮಲ್ಲಿ ನಾನು ಅನೇಕ ಸೂಚಕಕಾರ್ಯಗಳನ್ನು ಮಾಡಿದೆನು. ಅದೇ ಸೂಚಕ ಕಾರ್ಯಗಳು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅವುಗಳ ಜನರು ಬಹಳ ಹಿಂದೆಯೇ, ತಮ್ಮ ಜೀವಿತಗಳನ್ನು ಮಾರ್ಪಡಿಸಿಕೊಂಡು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಗೋಣಿತಟ್ಟನ್ನು ಧರಿಸಿಕೊಂಡು, ಬೂದಿಯನ್ನು ಬಳಿದುಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಸ್ಥಿತಿಯು ಟೈರ್ ಮತ್ತು ಸಿದೋನ್‌ಗಳ ಸ್ಥಿತಿಗಿಂತಲೂ ಕಠಿಣವಾಗಿರುವುದು. 15 ಕಪೆರ್ನೌಮೇ,[b] ನೀನು ಪರಲೋಕಕ್ಕೆ ಏರಿಸಲ್ಪಡುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ!

16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International