Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

2 ರಾಜರುಗಳು 4:32-37

32 ಎಲೀಷನು ಮನೆಯೊಳಕ್ಕೆ ಬಂದನು. ಆ ಮಗು ಅವನ ಹಾಸಿಗೆಯ ಮೇಲೆ ಸತ್ತುಬಿದ್ದಿತ್ತು. 33 ಎಲೀಷನು ಕೊಠಡಿಯಲ್ಲಿ ಪ್ರವೇಶಿಸಿ ಬಾಗಿಲನ್ನು ಮುಚ್ಚಿದನು. ಈಗ ಎಲೀಷ ಮತ್ತು ಮಗು ಮಾತ್ರ ಕೊಠಡಿಯಲ್ಲಿದ್ದರು. ನಂತರ ಎಲೀಷನು ಯೆಹೋವನಲ್ಲಿ ಪ್ರಾರ್ಥಿಸಿದನು. 34 ಎಲೀಷನು ಹಾಸಿಗೆಗೆ ಹೋಗಿ ಮಗುವಿನ ಮೇಲೆ ಮಲಗಿದನು. ಎಲೀಷನು ತನ್ನ ಬಾಯಿಯನ್ನು ಮಗುವಿನ ಬಾಯಿಯ ಮೇಲಿಟ್ಟನು. ಎಲೀಷನು ತನ್ನ ಕೈಗಳನ್ನು ಮಗುವಿನ ಕೈಗಳ ಮೇಲಿಟ್ಟನು. ಎಲೀಷನು ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗುವಿನ ದೇಹವು ಬೆಚ್ಚಗಾಯಿತು.

35 ಎಲೀಷನು ಕೊಠಡಿಯಿಂದ ಹೊರಗೆ ಬಂದು ಮನೆಯಲ್ಲಿ ಸುತ್ತಲೂ ನಡೆದಾಡಿದನು. ನಂತರ ಅವನು ಕೊಠಡಿಯೊಳಕ್ಕೆ ಹಿಂದಿರುಗಿ ಹೋಗಿ ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗು ಏಳು ಸಾರಿ ಸೀನಿ ತನ್ನ ಕಣ್ಣುಗಳನ್ನು ತೆರೆಯಿತು.

36 ಎಲೀಷನು ಗೇಹಜಿಯನ್ನು ಕರೆದು, “ಶೂನೇಮಿನ ಸ್ತ್ರೀಯನ್ನು ಕರೆ” ಎಂದು ಹೇಳಿದನು.

ಗೇಹಜಿಯು ಶೂನೇಮಿನ ಸ್ತ್ರೀಯನ್ನು ಕರೆದನು. ಅವಳು ಎಲೀಷನ ಹತ್ತಿರಕ್ಕೆ ಬಂದಳು. ಎಲೀಷನು, “ನಿನ್ನ ಮಗನನ್ನು ಎತ್ತಿಕೊ” ಎಂದು ಹೇಳಿದನು.

37 ಆಗ ಶೂನೇಮಿನ ಆ ಸ್ತ್ರೀಯು ಕೊಠಡಿಯೊಳಕ್ಕೆ ಹೋಗಿ, ಎಲೀಷನ ಪಾದಗಳಿಗೆ ಬಾಗಿ ನಮಸ್ಕರಿಸಿದಳು. ನಂತರ ಅವಳು ತನ್ನ ಮಗನನ್ನು ಎತ್ತಿಕೊಂಡು ಹೊರಗೆ ಹೋದಳು.

ಲೂಕ 9:1-6

ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು

(ಮತ್ತಾಯ 10:5-15; ಮಾರ್ಕ 6:7-13)

ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು. ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು. ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ. ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ. ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”

ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International